ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ಮನೀಷ್ ಪಾಂಡೆಗಿಲ್ಲ ಅವಕಾಶ; ಫಿಟ್ನೆಸ್ ಸಮಸ್ಯೆ ಕಾರಣವೇ?

Last Updated 8 ಡಿಸೆಂಬರ್ 2020, 8:55 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಿಂದಲೂ ಕರ್ನಾಟಕದ ಮನೀಷ್ ಪಾಂಡೆ ಅವರನ್ನು ಕಡೆಗಣಿಸಲಾಗಿದೆ. ಪಾಂಡೆ ಅವರನ್ನು ಆಡುವ ಬಳಗದಿಂದ ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ದ್ವಿತೀಯ ಪಂದ್ಯದಲ್ಲಿ ಆಡಲು ಶೇಕಡಾ 100ರಷ್ಟು ಫಿಟ್ ಅಲ್ಲದ ಕಾರಣ ಪಾಂಡೆ ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಹೆಸರಿಸಲಾಗಿತ್ತು. ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿರುವ ಶ್ರೇಯಸ್ ಅಯ್ಯರ್, ಕೊನೆಯ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಗೆಲುವಿನ ಜೊತೆಯಾಟವನ್ನು ಕಟ್ಟಿದ್ದರು.

ಅತ್ತ ಮೊದಲೆರಡು ಪಂದ್ಯಗಳಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಮನೀಷ್ ಪಾಂಡೆ ಹೆಸರಿಸುವ ಸಾಧ್ಯತೆಗಳಿವೆ ಎಂಬ ಬಗ್ಗೆ ವರದಿಗಳು ಬಂದಿದ್ದವು.

ಆದರೆ ಸಂಜುಗೆ ಮಣೆ ಹಾಕಿರುವ ಟೀಮ್ ಮ್ಯಾನೇ‌ಜ್‌ಮೆಂಟ್, ಅಂತಿಮ ಟಿ20 ಪಂದ್ಯದಿಂದಲೂ ಮನೀಷ್ ಪಾಂಡೆ ಅವರನ್ನು ಕಡೆಗಣಿಸಿದೆ. ಪಾಂಡ್ಯ ಈಗಲೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಟೀಮ್ ಇಂಡಿಯಾದಿಂದ ಅಧಿಕೃತ ಮಾಹಿತಿಗಳು ಬಂದಿಲ್ಲ.

ಮೊದಲ ಟಿ20ನಲ್ಲಿ ಆಡಿದ್ದ ಮನೀಷ್ ಪಾಂಡೆ ಎರಡು ರನ್ನಿಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ಈ ಮೊದಲು ಏಕದಿನ ಸರಣಿಯಲ್ಲೂ ಅವಕಾಶ ವಂಚಿತವಾಗಿದ್ದರು.

ಒಟ್ಟಾರೆಯಾಗಿ ಪದೇ ಪದೇ ಆಟಗಾರರನ್ನು ಬದಲಾಯಿಸುತ್ತಿರುವುದು ಮಾಜಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ಈ ಬಗ್ಗೆ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಬಹಿರಂಗ ಹೇಳಿಕೆ ನೀಡಿದ್ದು, ತಂಡವನ್ನು ಪದೇ ಪದೇ ಬದಲಾಯಿಸಬಾರದು ಎಂಬ ಸಲಹೆ ಮಾಡಿದ್ದಾರೆ.

ಅಂದ ಹಾಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ ಟೀಮ್ ಇಂಡಿಯಾ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT