ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಹೋರಾಟ ವ್ಯರ್ಥ; ಭಾರತಕ್ಕೆ ಸೋಲು; ಸರಣಿ 2-1 ವಶಕ್ಕೆ

Last Updated 8 ಡಿಸೆಂಬರ್ 2020, 12:07 IST
ಅಕ್ಷರ ಗಾತ್ರ

ಸಿಡ್ನಿ: ಮಂಗಳವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಸ್‌ಸಿಜಿ) ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 12 ರನ್ ಅಂತರದ ಸೋಲಿಗೆ ಶರಣಾಗಿದೆ. ಹಾಗಿದ್ದರೂ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ, ವಿಕೆಟ್ ಕೀಪರ್ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ (80) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (54) ಬಿರುಸಿನ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ (85) ಶಕ್ತಿ ಮೀರಿ ಪ್ರಯತ್ನಿಸಿದರೂ ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೊಹ್ಲಿ ದಿಟ್ಟ ಹೋರಾಟ...
ಬೃಹತ್ ಗುರಿ ಬೆನ್ನಟ್ಟಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ದಾಳಿಯಲ್ಲಿ ಕೆಎಲ್ ರಾಹುಲ್ (0) ಖಾತೆ ತೆರೆಯಲಾಗದೇ ಹಿನ್ನೆಡೆ ಅನುಭವಿಸಿದರು. ಈ ಹಂತದಲ್ಲಿ ಶಿಖರ್ ಧವನ್ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು. ಆಸೀಸ್ ಜೋಡಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ತಂಡವನ್ನು ಲಯಕ್ಕೆ ಮರಳಿಸಿದರು. ಪರಿಣಾಮ ಪವರ್ ಪ್ಲೇನಲ್ಲಿ 55 ರನ್ ಹರಿದು ಬಂದವು.

ಈ ಹಂತದಲ್ಲಿ ಮಿಚೆಲ್ ಸ್ವೆಪ್ಸನ್ ದಾಳಿಯಲ್ಲಿ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು. 21 ಎಸೆತಗಳನ್ನು ಎದುರಿಸಿದ ಧವನ್ ಮೂರು ಬೌಂಡರಿಗಳಿಂದ 28 ರನ್ ಗಳಿಸಿದರು. ಇನ್ನೊಂದೆಡೆ ಅಮೋಘ ಬ್ಯಾಟಿಂಗ್ ಮುಂದುವರಿಸಿದ ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಭಾರತೀಯ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ (10) ಹಾಗೂ ಶ್ರೇಯಸ್ ಅಯ್ಯರ್ ಹೊರದಬ್ಬಿದ ಸ್ವೆಪ್ಸನ್ ಡಬಲ್ ಆಘಾತ ನೀಡಿದರು. ಇದರೊಂದಿಗೆ 100 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ಪೈಕಿ ಸಂಜು ತಮಗೆ ಸಿಕ್ಕ ಅವಕಾಶವನ್ನು ಮಗದೊಮ್ಮೆ ವ್ಯರ್ಥ ಮಾಡಿದರು.

ಕೊನೆಯ ಐದು ಓವರ್‌ಗಳಲ್ಲಿ ಭಾರತದ ಗೆಲುವಿಗೆ 76 ರನ್‌ಗಳ ಅವಶ್ಯಕತೆಯಿತ್ತು. ಡ್ಯಾನಿಯಲ್ ಸ್ಯಾಮ್ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ 20 ರನ್ ಸೊರೆಗೈದ ವಿರಾಟ್ ಹಾಗೂ ಪಾಂಡ್ಯ ಜೋಡಿಯು ಪಂದ್ಯದಲ್ಲಿ ತಿರುಗಿ ಬೀಳಲು ನೆರವಾದರು.

ನಿರ್ಣಾಯಕ ಹಂತದಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಪತನವಾಗಿರುವುದು ತಂಡಕ್ಕೆ ಮುಳುವಾಯಿತು. ಕಳೆದ ಪಂದ್ಯದ ಹೀರೊ ಪಾಂಡ್ಯ 13 ಎಸೆತಗಳಲ್ಲಿ ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 20 ರನ್ ಗಳಿಸಿದರು.

ಕೊನೆಗೂ ಏಕಾಂಗಿ ಹೋರಾಟವನ್ನು ಕೊನೆಗೊಳಿಸಿದ ವಿರಾಟ್ ಕೊಹ್ಲಿ ಶತಕದಂಚಿನಲ್ಲಿ ಔಟಾದರು. ಇದರೊಂದಿಗೆ ಭಾರತದ ಸೋಲು ಖಚಿತವಾಯಿತು. 61 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 85 ರನ್ ಗಳಿಸಿದರು.

ಅಂತಿಮವಾಗಿ ಟೀಮ್ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನುಳಿದಂತೆ ಶಾರ್ದೂಲ್ ಠಾಕೂರ್ (17*) ಹಾಗೂ ವಾಷಿಂಗ್ಟನ್ ಸುಂದರ್ (7) ರನ್ ಗಳಿಸಿದರು. ಆಸೀಸ್ ಪರ ಮಾರಕ ದಾಳಿ ಸಂಘಟಿಸಿದ ಮಿಚೆಲ್ ಸ್ವೆಪ್ಸನ್ 23 ರನ್ ತೆತ್ತು ಮೂರು ವಿಕೆಟ್ ಕಿತ್ತು ಮಿಂಚಿದರು.

ವೇಡ್, ಮ್ಯಾಕ್ಸ್‌ವೆಲ್ ಅಬ್ಬರ; ಭಾರತಕ್ಕೆ 187 ರನ್ ಗುರಿ...
ಈ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 186 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಆಗಲೇ ಸರಣಿ ಸೋತಿರುವ ಆಸ್ಟ್ರೇಲಿಯಾಕ್ಕೆ ನಾಯಕ ಆ್ಯರನ್ ಫಿಂಚ್ ಪುನರಾಗಮನವು ಹೆಚ್ಚಿನ ಲಾಭವನ್ನುಂಟು ಮಾಡಲಿಲ್ಲ. ವಾಷಿಂಗ್ಟನ್ ಸುಂದರ್ ದಾಳಿಯಲ್ಲಿ ಶೂನ್ಯದ ಸುರುಳಿ ಸುತ್ತಿದ ಫಿಂಚ್ ನಿರಾಸೆ ಮೂಡಿಸಿದರು. ಇನ್ನೊಂದೆಡೆ ಸ್ಟೀವನ್ ಸ್ಮಿತ್ ಜೊತೆಗೂಡಿದ ವಿಕೆಟ್ ಕೀಪರ್ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ತಂಡದ ರನ್ ಗತಿಗೆ ಆವೇಗ ತುಂಬಿದರು. ಪರಿಣಾಮ ಪವರ್ ಪ್ಲೇನಲ್ಲಿ 51 ರನ್‌ಗಳು ಹರಿದು ಬಂದವು.

ಈ ಸಂದರ್ಭದಲ್ಲಿ ಸ್ಟೀವನ್ ಸ್ಮಿತ್ ಹೊರದಬ್ಬಿದ ವಾಷಿಂಗ್ಟನ್ ಸುಂದರ್ ಆಸೀಸ್ ಓಟಕ್ಕೆ ಕಡಿವಾಣ ಹಾಕಿದರು. 23 ಎಸೆತಗಳನ್ನು ಎದುರಿಸಿದ ಸ್ಮಿತ್ ಬೌಂಡರಿ ನೆರವಿನಿಂದ 24 ರನ್ ಗಳಿಸಿದರು. ಇನ್ನೊಂದೆಡೆ ಭಾರತೀಯ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದ ವೇಡ್, 34 ಎಸೆತಗಳಲ್ಲಿ ಸತತ ಎರಡನೇ ಫಿಫ್ಟಿ ಬಾರಿಸಿದರು. ಅವರು ಕಳೆದ ಪಂದ್ಯದಲ್ಲಿ 25 ಎಸೆತಗಳಲ್ಲಿ ಫಿಫ್ಟಿ ಗೆರೆ ದಾಟಿದ್ದರು.

ಫಿಫ್ಟಿ ಬಳಿಕ ವೇಡ್ ಮತ್ತಷ್ಟು ಬಿರುಸಿನ ಆಟವನ್ನು ಪ್ರದರ್ಶಿಸಿದರು. ಇವರಿಗೆ ಗ್ಲೆನ್ ಮ್ಯಾಕ್‌ವೆಲ್ ಸಾಥ್ ನೀಡಿದರು. ಈ ಮಧ್ಯೆ ಮ್ಯಾಕ್ಸ್‌ವೆಲ್ ವಿಕೆಟ್ ಪಡೆದರೂ ನೋ ಬಾಲ್‌ನಿಂದಾಗಿ ಯಜುವೇಂದ್ರ ಚಹಲ್ ನಿರಾಸೆ ಅನುಭವಿಸಿದರು. 15 ಓವರ್‌ಗಳ ಅಂತ್ಯಕ್ಕೆ ಆಸೀಸ್ ಎರಡು ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.

ತಮಗೆ ಸಿಕ್ಕ ಜೀವದಾನವನ್ನು ಸಮರ್ಥವಾಗಿ ಬಳಸಿದ ಮ್ಯಾಕ್ಸ್‌ವೆಲ್ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಭಾರತೀಯ ಪಾಳೇಯದಲ್ಲಿ ಆತಂಕ ಮೂಡಿಸಿದರು. ಕೊನೆಗೂ ಶತಕದತ್ತ ಮುನ್ನುಗ್ಗುತ್ತಿದ್ದ ವೇಡ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಲು ಶಾರ್ದೂಲ್ ಠಾಕೂರ್ ಯಶಸ್ವಿಯಾದರು. 53 ಎಸೆತಗಳನ್ನು ಎದುರಿಸಿದ ವೇಡ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 80 ರನ್ ಗಳಿಸಿದರು.

ಕೊನೆಯ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್ ಮಾಡಿದ ತಂಗರಸು ನಟರಾಜನ್, ಮಗದೊಮ್ಮೆ ಪ್ರಭಾವಿ ಎನಿಸಿಕೊಂಡರು. ಅಂತಿಮವಾಗಿ ಆಸೀಸ್ ತಂಡವು ಐದು ವಿಕೆಟ್ ನಷ್ಟಕ್ಕೆ 186 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. 36 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.


ಇನ್ನುಳಿದಂತೆ ಡಾರ್ಸಿ ಶಾರ್ಟ್ (7), ಮೊಯಿಸೆಸ್ ಹೆನ್ರಿಕ್ಸ್ (5*) ಹಾಗೂ ಡ್ಯಾನಿಯಲ್ ಸ್ಯಾಮ್ಸ್ (4*) ರನ್ ಗಳಿಸಿದರು. ಭಾರತದ ಪರ ವಾಷಿಂಗ್ಟನ್ ಸುಂದರ್ ಎರಡು ಮತ್ತು ಟಿ ನಟರಾಜನ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.

ಫಲಿಶಾಂಶಗಳು:
ಮೊದಲ ಟಿ20: ಭಾರತಕ್ಕೆ 11 ರನ್ ಅಂತರದ ಗೆಲುವು
ದ್ವಿತೀಯ ಟಿ20: ಭಾರತಕ್ಕೆ ಆರು ವಿಕೆಟ್ ಅಂತರದ ಗೆಲುವು
ಅಂತಿಮ ಟಿ20: ಆಸೀಸ್‌ಗೆ 12 ರನ್ ಅಂತರದ ಗೆಲುವು

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ.
ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ವಿಜೇತ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಫಿಂಚ್ ಕಮ್‌ಬ್ಯಾಕ್
ಅತ್ತ ಗಾಯದಿಂದ ಚೇತರಿಸಿಕೊಂಡಿರುವ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ತಂಡಕ್ಕೆ ಪುನರಾಗಮನ ಮಾಡಿದ್ದರು. ಗಾಯದ ಹಿನ್ನೆಲೆಯಲ್ಲಿ ಫಿಂಚ್ ದ್ವಿತೀಯ ಪಂದ್ಯಕ್ಕೆ ಅಲಭ್ಯವಾಗಿದ್ದರು. ಇವರಿಗೆ ಮಾರ್ಕಸ್ ಸ್ಟೋಯಿನಿಸ್ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ಈ ಮೊದಲು ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಏಕದಿನ ಸರಣಿಯಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಆಡುವ ಬಳಗ ಇಂತಿದೆ:

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್‌.ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್‌), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ದೀಪಕ್ ಚಾಹರ್‌, ಟಿ.ನಟರಾಜನ್‌, ಶಾರ್ದೂಲ್ ಠಾಕೂರ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್ (ನಾಯಕ), ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್‌, ಡಾರ್ಸಿ ಶಾರ್ಟ್‌, ಮೊಯಿಸಸ್ ಹೆನ್ರಿಕ್ಸ್, ಡ್ಯಾನಿಯಲ್ ಸ್ಯಾಮ್ಸ್‌, ಸೀನ್ ಅಬಾಟ್‌, ಮಿಷೆಲ್ ಸ್ವೆಪ್ಸನ್‌, ಆ್ಯಂಡ್ರ್ಯೂ ಟೈ ಮತ್ತು ಆ್ಯಡಂ ಜಂಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT