ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಸರಣಿ ಮುನ್ನಡೆಯತ್ತ ರಹಾನೆ ಬಳಗದ ಚಿತ್ತ

ಬಾರ್ಡರ್‌–ಗಾವಸ್ಕರ್ ಟ್ರೋಫಿ: ಮೂರನೇ ಟೆಸ್ಟ್‌ ಇಂದಿನಿಂದ: ಸಿಡ್ನಿಯಲ್ಲಿ ರೋಹಿತ್ –ವಾರ್ನರ್ ಮುಖಾಮುಖಿ
Last Updated 6 ಜನವರಿ 2021, 15:50 IST
ಅಕ್ಷರ ಗಾತ್ರ

ಸಿಡ್ನಿ: ಈ ಸಲದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವು ಕಳೆದ ಇಪ್ಪತ್ತು ದಿನಗಳಲ್ಲಿ ಅಧೋಗತಿ ಮತ್ತು ಯಶಸ್ಸಿನ ಪರಾಕಾಷ್ಠೆ ಎರಡನ್ನೂ ಕಂಡಿದೆ.

ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲಿನ ನಂತರ ಮೆಲ್ಬರ್ನ್‌ನಲ್ಲಿ ಪುಟಿದೆದ್ದ ರೀತಿ ಅಮೋಘ ನಿದರ್ಶನವಾಯಿತು. ಇದರಿಂದಾಗಿ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. ಇದೀಗ ಇನ್ನುಳಿದಿರುವ ಎರಡು ಪಂದ್ಯಗಳಲ್ಲಿಗೆಲುವಿನ ಕನಸು ಕಾಣುತ್ತಿದೆ.

ಅದರಲ್ಲೂ ಗುರುವಾರ ಸಿಡ್ನಿಯಲ್ಲಿ ಆರಂಭವಾಗಲಿರುವ ಮೂರನೇ ಪಂದ್ಯವು ಸರಣಿ ಜಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಇದರಲ್ಲಿ ಗೆದ್ದ ತಂಡಕ್ಕೆ ಸರಣಿ ಕಿರೀಟ ಧರಿಸುವ ಅವಕಾಶ ಇದೆ. ಆದ್ದರಿಂದ ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಲಿದೆ.

ರೋಹಿತ್–ವಾರ್ನರ್ ಮುಖಾಮುಖಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತದ ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಅವರಿಬ್ಬರೂ ಮುಖಾಮುಖಿಯಾಗಲಿದ್ದಾರೆ.

ಯುಎಇಯಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಾಯಗೊಂಡಿದ್ದ ರೋಹಿತ್ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಿರಲಿಲ್ಲ. ಕ್ವಾರಂಟೈನ್‌ ನಿಯಮ ಪಾಲನೆಗಾಗಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೂ ಲಭ್ಯರಾಗಲಿಲ್ಲ. ಇದೀಗ ಫಾರ್ಮ್‌ ಕಳೆದುಕೊಂಡಿರುವ ಮಯಂಕ್ ಅಗರವಾಲ್ ಬದಲು ಇನಿಂಗ್ಸ್ ಆರಂಭಿಸಲಿದ್ದರೆ. ಮೆಲ್ಬರ್ನ್‌ನಲ್ಲಿ ಪದಾರ್ಪಣೆ ಮಾಡಿದ್ದ ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಜೊತೆಯಾಗಲಿದ್ಧಾರೆ. ಕೆ.ಎಲ್. ರಾಹುಲ್ ಗಾಯಗೊಂಡು ಹೊರಗುಳಿದ ಕಾರಣ, ಆಯ್ಕೆಗೆ ಪರಿಗಣಿಸಿಲ್ಲ. ಇದರಿಂದಾಗಿ ಹನುಮವಿಹಾರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಮತ್ತೊಂದು ಅವಕಾಶ ಲಭಿಸಿದೆ.

ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ ಲಯಕ್ಕೆ ಮರಳಿದರೆ ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಮೇಲಿನ ಒತ್ತಡ ತುಸು ಕಡಿಮೆಯಾಗಬಹುದು.

ಆಸ್ಟ್ರೇಲಿಯಾ ತಂಡದ ಆರಂಭಿಕ ಜೋಡಿಯೂ ಈ ಸರಣಿಯಲ್ಲಿ ಅಂಹತ ಉತ್ತಮವಾದ ಆಟವಾಡಿಲ್ಲ. ಆದ್ದರಿಂದ ಗಾಯದಿಂದ ಚೇತರಿಸಿಕೊಂಡು ಬಂದಿರುವ ಡೇವಿಡ್ ವಾರ್ನರ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಸ್ಪೋಟಕ ಶೈಲಿಯ ಬ್ಯಾಟ್ಸ್‌ಮನ್ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಅಮೋಘವಾದ ದಾಖಲೆ ಹೊಂದಿದ್ದಾರೆ. ಆದ್ದರಿಂದ ಅವರ ಮೇಲೆ ಈಗ ಅಪಾರ ನಿರೀಕ್ಷೆ ಇದೆ. ಮ್ಯಾಥ್ಯೂ ವೇಡ್ ಜೊತೆಗೆ ಅವರು ಇನಿಂಗ್ಸ್ ಆರಂಭಿಸಬಹುದು.

ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್ ಸ್ಮಿತ್ ಲಯದಲ್ಲಿ ಇಲ್ಲ. ಇದುಆತಿಥೇಯರ ಚಿಂತೆಗೆ ಕಾರಣವಾಗಿದೆ. ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ಸ್ಮಿತ್ ಪದಚಲನೆಯನ್ನು ಸರಿಯಾಗಿ ಗುರುತಿಸಿ ಬೌಲಿಂಗ್ ಮಾಡುತ್ತಿದ್ದಾರೆ. ಆದ್ದರಿಂದಾಗಿಯೇ ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಎರಡು ಬಾರಿ ಅಶ್ವಿನ್ ಮತ್ತು ಒಂದು ಸಲ ಬೂಮ್ರಾಗೆ ಸ್ಮಿತ್ ವಿಕೆಟ್ ಒಪ್ಪಿಸಿದ್ದಾರೆ.

ಮಾರ್ನಸ್ ಲಾಬುಷೇನ್, ಹೊಸಬ ವಿಲ್ ಪುಕೊವಸ್ಕಿ, ಕ್ಯಾಮರಾನ್ ಗ್ರಿನ್ ಅವರು ತಮ್ಮ ಹೊಣೆಯನ್ನು ನಿಭಾಯಿಸಿದರೆ ಈ ಬಾರಿ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾದೀತು.

ನವದೀಪ್ ಸೈನಿಗೆ ಅವಕಾಶ: ಅಜಿಂಕ್ಯ ರಹಾನೆ ಬಳಗವು ಇಲ್ಲಿ ಮೂವರು ಮಧ್ಯಮವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಿದೆ. ದೆಹಲಿ ತಂಡಕ್ಕೆ ಆಡುವ ನವದೀಪ ಸೈನಿಗೆ ಪದಾರ್ಪಣೆ ಅವಕಾಶ ಸಿಕ್ಕಿದೆ. ಜಸ್‌ಪ್ರೀತ್ ಬೂಮ್ರಾ, ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿ ಮಿಂಚಿದ್ದ ಮೊಹಮ್ಮದ್ ಸಿರಾಜ್ ಜೊತೆಗೆ ವೇಗದ ವಿಭಾಗದ ಹೊಣೆಯನ್ನು ಸೈನಿ ಹಂಚಿಕೊಳ್ಳುವರು. ಅಶ್ವಿನ್ ಮತ್ತು ರವೀಂದ್ರ ಜಡೇಜ ಸ್ಪಿನ್ ಕೆಲಸ ನಿರ್ವಹಿಸುವರು. ಹೋದ ಪಂದ್ಯದಲ್ಲಿ ಜಡೇಜ ಅರ್ಧಶತಕವನ್ನೂ ಬಾರಿಸಿದ್ದರು.

ತಂಡಗಳು

ಭಾರತ: ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ.

ಆಸ್ಟ್ರೇಲಿಯಾ: ಟೀಮ್ ಪೇನ್ (ನಾಯಕ–ವಿಕೆಟ್‌ಕೀಪರ್), ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ವಿಲ್ ಪುಕೊವಸ್ಕಿ, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರಾನ್ ಗ್ರೀನ್, ನೇಥನ್ ಲಯನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಮಾರ್ಕಸ್ ಹ್ಯಾರಿಸ್, ಮಿಚೆಲ್ ಸ್ವಿಪ್ಸನ್, ಮಿಚೆಲ್ ನೆಸೆರ್.

ಪಂದ್ಯ ಆರಂಭ: ಬೆಳಿಗ್ಗೆ 5ರಿಂದ

ನೇರಪ್ರಸಾರ: ಸೋನಿ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT