ಮಂಗಳವಾರ, ಮೇ 18, 2021
24 °C

IND vs ENG: ವಿರಾಟ್ ಪಡೆಗೆ 'ಟಿ20 ಸರಣಿ' ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನೀಡಿದ ಭರ್ಜರಿ ಆರಂಭದ ಬಲದಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿತು.

ಶನಿವಾರ ರಾತ್ರಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ನಾಯಕ ಏಯಾನ್ ಮಾರ್ಗನ್‌ ಕೈಕೈ ಹಿಸುಕಿಕೊಳ್ಳಬೇಕಾಯಿತು. ಸತತ ವೈಫಲ್ಯ ಅನುಭವಿಸಿದ ಕೆ.ಎಲ್. ರಾಹುಲ್ ಅವರನ್ನು ಕೈಬಿಟ್ಟ ವಿರಾಟ್ ತಾವೇ ರೋಹಿತ್ ಜೊತೆಗೆ ಇನಿಂಗ್ಸ್‌ ಆರಂಭಿಸಿದರು. ಇವರಿಬ್ಬರ ಬಿರುಸಿನ ಅರ್ಧಶತಕಗಳ ಬಲದಿಂದ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 224 ರನ್ ಗಳಿಸಿತು.

ರೋಹಿತ್ (64; 34 ಎಸೆತ) ಮತ್ತು ವಿರಾಟ್ (ಔಟಾಗದೆ 80; 52ಎ)  ಇಬ್ಬರು ಮೊದಲ ವಿಕೆಟ್‌ಗೆ 94 ರನ್‌ ಸೇರಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದ ನಿರಾಶೆಯನ್ನು ಹೊಡೆದೋಡಿಸುವಂತೆ ಹಿಟ್‌ಮ್ಯಾನ್‌ ಆರ್ಭಟಿಸಿದರು. ಇಂಗ್ಲೆಂಡ್‌ನ ಬೌಲರ್‌ಗಳು ಉತ್ತಮ ಲೈನ್ ಮತ್ತು ಲೆಂಗ್ತ್‌ ನಿರ್ವಹಿಸಿದರೂ ರೋಹಿತ್ ಅವರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.   ಅವರ ಬ್ಯಾಟ್‌ನಿಂದ ಒಟ್ಟು ಐದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳು ಸಿಡಿದವು. ಒಂಬತ್ತನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್‌ ಎಸೆತದಲ್ಲಿ ಬೌಲ್ಡ್‌ ಆದ ರೋಹಿತ್ ಮರಳಿದರು.

ಕ್ರೀಸ್‌ಗೆ ಬಂದ ಇನ್ನೊಬ್ಬ ಮುಂಬೈಕರ್ ಸೂರ್ಯಕುಮಾರ್ ಯಾದವ್ (32; 17ಎ) ತಮ್ಮ ನಿರ್ಭೀತ ಬ್ಯಾಟಿಂಗ್‌ ಕೌಶಲವನ್ನು ಮತ್ತೊಮ್ಮೆ ಮೆರೆದರು. ನಾಯಕ ವಿರಾಟ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 49 ರನ್‌ ಸೇರಿಸಿದರು. ಅವರ ರನ್‌ ಗಳಿಕೆಯ ವೇಗದ ಮುಂದೆ ಬೌಲರ್‌ಗಳು ನಿರುತ್ತರರಾಗಿದ್ದರು.  ಹತ್ತು ಓವರ್‌ಗಳು ಮುಗಿಯುವ ಮುನ್ನವೇ ತಂಡದ ಮೊತ್ತ ನೂರರ ಗಡಿ ದಾಟಿತು.  ಸ್ಪಿನ್ನರ್ ಆದಿಲ್ ರಶೀದ್ ಹಾಕಿದ 14ನೇ ಓವರ್‌ನಲ್ಲಿ ಬೌಂಡರಿಲೈನ್‌ನಲ್ಲಿ ಕ್ರಿಸ್ ಜೋರ್ಡಾನ್ ಮತ್ತು ಜೇಸನ್ ರಾಯ್ ಅವರ ಸಂಘಟಿತ ಪ್ರಯತ್ನದ ಫಲವಾಗಿ ಸೂರ್ಯ ಆಟಕ್ಕೆ ತೆರೆಬಿತ್ತು. ಸೂರ್ಯ ಹೊಡೆತಕ್ಕೆ ಚೆಂಡು ಬೌಂಡರಿಗೆರೆ ದಾಟುವತ್ತ ಸಾಗಿತ್ತು. ಆದರೆ ಲಾಂಗ್‌ ಆನ್‌ನಿಂದ ವೇಗವಾಗಿ ಓಡಿಬಂದ ಜೋರ್ಡಾರ್ನ್‌ ತಮ್ಮ ಬಲಗೈನಲ್ಲಿ ಚೆಂಡನ್ನು ಕ್ಯಾಚ್ ಮಾಡಿದರು. ತಮ್ಮ  ಓಟದ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗದ ಅವರು, ಬೌಂಡರಿ ಗೆರೆಯಾಚೆ ಹೆಜ್ಜೆ ಇಡುವ ಮುನ್ನ  ಇನ್ನೊಬ್ಬ ಫೀಲ್ಡರ್ ಜೇಸನ್‌ ರಾಯ್‌ಗೆ ಚೆಂಡು ಎಸೆದರು. ರಾಯ್ ಹಿಡಿತಕ್ಕೆ ಪಡೆದರು. ಇದರಿಂದಾಗಿ ಸೂರ್ಯ ನಿರ್ಗಮಿಸಬೇಕಾಯಿತು.

ಮಾರ್ಗನ್ ಬಳಗಕ್ಕೆ ಇದರ ನಂತರ ಸಂಭ್ರಮಿಸುವ ಅವಕಾಶವನ್ನು ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯ ಕೊಡಲಿಲ್ಲ. ಅಪರೂಪಕ್ಕೆಂಬಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ ಆರಂಭಿಸಿದ ಕೊಹ್ಲಿ ತಮ್ಮ ಆಟದ ವೇಗ ಹೆಚ್ಚಿಸಿಕೊಂಡರು. ಚುಟುಕು ಕ್ರಿಕೆಟ್‌ನಲ್ಲಿ 28ನೇ ಅರ್ಧಶತಕ ಪೂರೈಸಿದರು. ಅದಕ್ಕಾಗಿ 36 ಎಸೆತಗಳನ್ನು ಎದುರಿಸಿದರು. ಈ ಸರಣಿಯಲ್ಲಿ ಅವರು ಮೂರನೇ ಸಲ 50ರ ಗಡಿ ದಾಟಿದರು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ಹಾರ್ದಿಕ್ ಪಾಂಡ್ (39; 17ಎಸೆತ) ಕೂಡ  ತಮ್ಮ ಭುಜಬಲ ಪರಾಕ್ರಮ ಮೆರೆದರು. ವುಡ್ ಹಾಕಿದ 16ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಹೊಡೆದ ಪಾಂಡ್ಯ, 19ನೇ ಓವರ್‌ನಲ್ಲಿ ಜೋರ್ಡಾನ್ ಎಸೆತಗಳಲ್ಲಿ ಎರಡು ಸಿಕ್ಸರ್‌ ಗಳಿಸಿದರು. ಹಾರ್ದಿಕ್ ಮತ್ತು ವಿರಾಟ್ ಅಬ್ಬರದ ಆಟದಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 67 ರನ್‌ಗಳು ಹರಿದುಬಂದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು