ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ 1st T20I : ರೋಹಿತ್, ಸೂರ್ಯ ಮಿಂಚು; ಭಾರತಕ್ಕೆ 5 ವಿಕೆಟ್ ಗೆಲುವು

Last Updated 17 ನವೆಂಬರ್ 2021, 17:20 IST
ಅಕ್ಷರ ಗಾತ್ರ

ಜೈಪುರ: ನಾಯಕ ರೋಹಿತ್ ಶರ್ಮಾ (48) ಹಾಗೂ ಸೂರ್ಯಕುಮಾರ್ ಯಾದವ್ (62) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ. ಅಲ್ಲದೆ ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ ಸೂಪರ್-12ರ ಹಂತದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಜೈಪುರದ ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಜಿಲೆಂಡ್ ತಂಡವು ಮಾರ್ಟಿನ್ ಗಪ್ಟಿಲ್ (70) ಹಾಗೂ ಮಾರ್ಕ್ ಚಾಪ್‌ಮನ್ (63) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಭಾರತ ರೋಹಿತ್, ಸೂರ್ಯಕುಮಾರ್ ಹಾಗೂ ರಿಷಭ್ ಪಂತ್ ಉಪಯುಕ್ತ ಆಟದ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ನೀಡಿದರು. ಈ ಪೈಕಿ ಟ್ರೆಂಟ್ ಬೌಲ್ಟ್ ಓವರ್‌ವೊಂದರಲ್ಲಿ ರೋಹಿತ್, ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 21 ರನ್ ಸೊರೆಗೈದರು.

ಉತ್ತಮ ಆಟವಾಡುತ್ತಿದ್ದ ರಾಹುಲ್ (15) ಅವರನ್ನು ಸ್ಯಾಂಟ್ನರ್ ಹೊರದಬ್ಬಿದರು. ಈ ನಡುವೆ ಸೂರ್ಯಕುಮಾರ್ ಯಾದವ್ ಜೊತೆಗೂಡಿದ ರೋಹಿತ್ ತಂಡವನ್ನು ಮುನ್ನಡೆಸಿದರು.

ಅಂತಿಮ 60 ಎಸೆತಗಳಲ್ಲಿ ಭಾರತದ ಗೆಲುವಿಗೆ 80 ರನ್‌ಗಳ ಅಗತ್ಯವಿತ್ತು. ಉತ್ತಮವಾಗಿ ಆಡುತ್ತಿದ್ದ ರೋಹಿತ್ ಕೇವಲ ಎರಡು ರನ್ ಅಂತರದಿಂದ ಅರ್ಧಶತಕ ವಂಚಿತರಾದರು. ಆಗಲೇ ಸೂರ್ಯಕುಮಾರ್ ಜೊತೆಗೆ ಮಗದೊಂದು ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ನಾಯಕನ ಇನ್ನಿಂಗ್ಸ್ ಕಟ್ಟಿದ ರೋಹಿತ್ 36 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು.

ಅತ್ತ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದ ಸೂರ್ಯಕುಮಾರ್ 34 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಭಾರತ ಗೆಲುವಿನ ಸನಿಹದಲ್ಲಿ ಸೂರ್ಯಕುಮಾರ್ ವಿಕೆಟ್ ನಷ್ಟವಾಯಿತು. 40 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಸೂರ್ಯಕುಮಾರ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (5) ಔಟ್ ಆಗಿರುವುದು ಪಂದ್ಯ ರೋಚಕ ಹಂತವನ್ನು ತಲುಪಲು ಕಾರಣವಾಯಿತು. ಅಂತಿಮ ಓವರ್‌ನಲ್ಲಿ ಗೆಲುವಿಗೆ 10 ರನ್ ಬೇಕಿತ್ತು.

ಅಂತಿಮ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್ (4) ವಿಕೆಟ್ ನಷ್ಟವಾದರೂ ನಾಲ್ಕನೇ ಎಸೆತವನ್ನು ಬೌಂಡರಿಗಟ್ಟಿದ ರಿಷಭ್ ಪಂತ್ (17*) ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಗಪ್ಟಿಲ್, ಚಾಪ್‌ಮನ್ ಫಿಫ್ಟಿ; ನ್ಯೂಜಿಲೆಂಡ್ 164/6
ಈ ಮೊದಲು ಕಿವೀಸ್ ಆರಂಭ ಉತ್ತಮವಾಗಿರಲಿಲ್ಲ. ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಡೆರಿಲ್ ಮಿಚೆಲ್ (0) ಅವರನ್ನು ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹೊರದಬ್ಬಿದರು.

ಈ ಹಂತದಲ್ಲಿ ಜೊತೆಗೂಡಿದ ಗಪ್ಟಿಲ್ ಹಾಗೂ ಚಾಪ್‌ಮನ್ ದ್ವಿತೀಯ ವಿಕೆಟ್‌ಗೆ ಶತಕದ (109) ಜೊತೆಯಾಟ ಕಟ್ಟಿದರು. ಈ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು.

42 ಎಸೆತಗಳನ್ನು ಎದುರಿಸಿದ ಗಪ್ಟಿಲ್ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 70 ರನ್ ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಚಾಪ್‌ಮನ್ 50 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು.

ಇನ್ನುಳಿದಂತೆ ಟಿಮ್ ಸೀಫರ್ಟ್ (12), ಗ್ಲೆನ್ ಫಿಲಿಪ್ಸ್ (0), ರಚಿನ್ ರವೀಂದ್ರ (7), ಮಿಚೆಲ್ ಸ್ಯಾಂಟ್ನರ್ (4*) ರನ್ ಗಳಿಸಿದರು. ಭಾರತದ ಪರ ಆರ್. ಅಶ್ವಿನ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಎರಡು ಮತ್ತು ದೀಪಕ್ ಚಾಹರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT