ಶನಿವಾರ, ಮಾರ್ಚ್ 28, 2020
19 °C

IND vs SA | ಕೊರೊನಾ ಭೀತಿ: ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆಗೆ ಕಡಿವಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮಾಶಾಲಾ: ಎಲ್ಲೆಡೆ ಕೊರೊನಾ ವೈರಸ್‌ ಭೀತಿ ಆವರಿಸಿರುವುದರಿಂದ, ಕ್ರಿಕೆಟ್‌ ಪಂದ್ಯದ ವೇಳೆ ಚೆಂಡಿನ ಹೊಳಪನ್ನು ಹೆಚ್ಚಿಸಲು ಬೌಲರ್‌ಗಳು ಎಂಜಲು (ಉಗುಳು) ಬಳಸುವುದಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಇಂದು ನಡೆಯಲಿರುವ ಭಾರತ ತಂಡದ ಸಭೆ ವೇಳೆ ತಂಡದ ವೈದ್ಯರು ಆಟಗಾರರಿಗೆ ಈ ಕುರಿತು ಸೂಚನೆ ನಿಡಲಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರಮುಖ ಬೌಲರ್‌ ಭುವನೇಶ್ವರ್‌ ಕುಮಾರ್‌ ಕಳವಳ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯು ನಾಳೆಯಿಂದ ಆರಂಭವಾಗಲಿದೆ. ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಆ ಕುರಿತು ಭುವಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಬಗ್ಗೆ (ಎಂಜಲು ಬಳಸುವ ಬಗ್ಗೆ) ನಾವು ಯೋಚಿಸುತ್ತಿದ್ದೇವೆ. ನಾವು ಎಂಜಲು ಬಳಸುವುದಿಲ್ಲ ಎಂದು ಈಗಲೇ ಹೇಳಲಾರೆ. ಏಕೆಂದರೆ, ಹುಗುಳು ಬಳಸದೇ ಇದ್ದರೆ ಚೆಂಡನ್ನು ಹೊಳಪುಗೊಳಿಸಲು ಸಾಧ್ಯವಾಗುವುದಿಲ್ಲ. ಆಗ ದಂಡನೆಗೆ ಒಳಗಾಗಬೇಕಾಗುತ್ತದೆ. ನಂತರ ನೀವೆಲ್ಲ ನಾವು ಸರಿಯಾಗಿ ಬೌಲಿಂಗ್‌ ಮಾಡಲಿಲ್ಲ ಎನ್ನುತ್ತೀರಿ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಆದಾಗ್ಯೂ, ಇದು ತುಂಬಾ ಮುಖ್ಯವಾದ ವಿಚಾರ. ಇಂದು ನಡೆಯಲಿರುವ ತಂಡದ ಸಭೆಯಲ್ಲಿ ಯಾವೆಲ್ಲ ಸೂಚನೆಗಳನ್ನು ನೀಡಲಾಗುತ್ತದೆ ಮತ್ತು ಬೇರೆ ಏನಾದರೂ ಆಯ್ಕೆಗಳು ಇವೆಯೇ ಎಂಬುದನ್ನು ಕಾದುನೋಡಬೇಕಿದೆ. ನಮಗೆ ಯಾವೆಲ್ಲ ಸಲಹೆ ನೀಡಲಾಗುತ್ತದೆ ಎಂಬುದು ವೈದ್ಯರ ನಿರ್ಧಾರದ ಮೇಲೆ ನಿಂತಿದೆ’ ಎಂದು ತಿಳಿಸಿದ್ದಾರೆ.

ಇದುವರೆಗೆ ದೇಶದಲ್ಲಿ 44 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ವೈರಸ್‌ನಿಂದಾಗಿ ಈಗಾಗಲೇ ಕೆಲವು ಪ್ರಮುಖ ಕ್ರೀಡಾಕೂಟಗಳನ್ನು ಮುಂದೂಡಲಾಗಿದ್ದು, ಕೆಲವನ್ನು ರದ್ದುಪಡಿಸಲಾಗಿದೆ. ಹೀಗಾಗಿ ಸೋಂಕಿನಿಂದಾಗಿ ಈ ವರ್ಷದ ಐಪಿಎಲ್‌ಗೂ ತೊಡಕಾಗಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭುವಿ, ‘ಆ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಏಕೆಂದರೆ, ದೇಶದಲ್ಲಿ ಸದ್ಯ ಗಂಭೀರ ಪರಿಸ್ಥಿತಿ ಇದೆ. ಆದರೆ, ನಮ್ಮಿಂದ ಸಾಧ್ಯವಿರುವ ಎಲ್ಲ ಮುನ್ನಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳುತ್ತೇವೆ. ನಮ್ಮೊಡನೆ ತಂಡದ ವೈದ್ಯರು ಇರುತ್ತಾರೆ. ನಾವು ಏನು ಮಾಡಬೇಕು, ಮಾಡಬಾರದು ಎಂಬ ಸೂಚನೆಗಳನ್ನು ನೀಡುತ್ತಾರೆ. ಹೀಗಾಗಿ ವೈರಸ್‌ ಹರಡುವುದಿಲ್ಲ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

ಸರಣಿಯ ಎರಡನೇ ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಲಖನೌ ಮತ್ತು ಕೋಲ್ಕತ್ತದಲ್ಲಿ ಮಾರ್ಚ್‌ 15 ಮತ್ತು 18ರಂದು ನಡೆಯಲಿವೆ. ಟೂರ್ನಿ ವೇಳೆ ಎರಡೂ ತಂಡಗಳ ಆಟಗಾರರು ಸುರಕ್ಷತಾ ಕ್ರಮಗಳನ್ನು ಅನುಸರಿಸಲಿದ್ದಾರೆ. ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಹಸ್ತಲಾಘವ ನೀಡುವುದರಿಂದ ದೂರ ಉಳಿಯಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು