ನವದೆಹಲಿ: ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯಿಂದ ಭಾರತ ತಂಡದ ನಾಯಕ ಕೆ.ಎಲ್.ರಾಹುಲ್ ಹೊರಗುಳಿಯಲಿದ್ದಾರೆ. ಸರಣಿ ಆರಂಭಕ್ಕೆ ಒಂದು ದಿನ ಬಾಕಿ ಇರುವಂತೆ ಈ ನಿರ್ಧಾರ ಹೊರಬಿದ್ದಿದೆ.
ಗಾಯದ ಸಮಸ್ಯೆಯಿಂದಾಗಿ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರಿಗೆ ತಂಡದ ನಾಯಕತ್ವದ ಹೊಣೆ ನೀಡಿದ್ದು, ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಗುರುವಾರದಿಂದ ಟಿ20 ಕ್ರಿಕೆಟ್ ಸರಣಿಯು ಆರಂಭವಾಗಲಿದ್ದು, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳಾಗಿ ಋತುರಾಜ್ ಗಾಯಕ್‌ವಾಡ್ ಮತ್ತು ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಬಿರುಸಿನ ಆಟದಿಂದ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಉಪ ನಾಯಕನನ್ನಾಗಿ ಬಿಸಿಸಿಐ ಹೆಸರಿಸಿದೆ.
ಇದನ್ನೂ ಓದಿ– ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮಿಥಾಲಿ ರಾಜ್ ವಿದಾಯ
ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರೂ ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ ಬ್ಯಾಟಿಂಗ್ ಅಭ್ಯಾಸದ ವೇಳೆ ಬಲಗೈಗೆ ಗಾಯ ಮಾಡಿಕೊಂಡಿದ್ದು, ಅವರೂ ಸಹ ಈ ಸರಣಿಯಿಂದ ಹೊರಗುಳಿಯಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.