ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA Test: ರಬಾಡ ಆರ್ಭಟ, ರಾಹುಲ್ ಹೋರಾಟ

Published 26 ಡಿಸೆಂಬರ್ 2023, 16:08 IST
Last Updated 26 ಡಿಸೆಂಬರ್ 2023, 19:53 IST
ಅಕ್ಷರ ಗಾತ್ರ

ಸೆಂಚುರಿಯನ್: ವೇಗದ ಬೌಲರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಅಮೋಘ ಲಯದಲ್ಲಿ ಬೌಲಿಂಗ್‌ ಮಾಡಿದ ಕಗಿಸೊ ರಬಾಡ (44ಕ್ಕೆ5) ಅವರು ಭಾರತದ ಪ್ರಮುಖ ಬ್ಯಾಟರ್‌ಗಳನ್ನು ಕಾಡಿದರು. ಮಂಗಳವಾರ ಆರಂಭವಾದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 8 ವಿಕೆಟ್‌ಗೆ 208 ರನ್‌ಗಳೊಡನೆ ದಿನದಾಟ ಮುಗಿಸಿತು. ವೇಗಿಗಳ ಆರ್ಭಟದ ನಡುವೆಯೂ ಕೆಚ್ಚೆದೆಯಿಂದ ಆಡಿದ ಕೆ.ಎಲ್‌.ರಾಹುಲ್‌ (ಅಜೇಯ 70, 105 ಎಸೆತ) ಅರ್ಧಶತಕ ಹೊಡೆದು ತಂಡದ ರಕ್ಷಣೆಗೆ ನಿಂತರು.

ಸೂಪರ್‌ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಪಂದ್ಯ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಮಳೆ, ಮಂದ ಬೆಳಕಿನಿಂದಾಗಿ ಬೇಗನೇ  ಮುಕ್ತಾಯಗೊಂಡಿತು. 59 ಓವರುಗಳ ಆಟವಷ್ಟೇ ಸಾಧ್ಯವಾಯಿತು. ರಬಾಡಾ (44ಕ್ಕೆ5) ಅವರು ಎರಡು ನಿರ್ಣಾಯಕ ಸ್ಪೆಲ್‌ಗಳಲ್ಲಿ ಭಾರತದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಟಾಸ್‌ ಗೆದ್ದ ತೆಂಬಾ ಬವುಮಾ ನಿರೀಕ್ಷೆಯಂತೆ ಬೌಲಿಂಗ್ ಆಯ್ದುಕೊಂಡಿದ್ದರು.

ಮೊದಲ ಸ್ಪೆಲ್‌ನಲ್ಲಿ ನಾಯಕ ರೋಹಿತ್‌ ಶರ್ಮಾ (5) ಅವರ ವಿಕೆಟ್‌ ಪಡೆದಿದ್ದ ರಬಾಡ, ಎರಡನೇ ಸ್ಪೆಲ್‌ ವೇಳೆ ಅಮೋಘ ಎಸೆತದಲ್ಲಿ ವಿರಾಟ್‌ ಕೊಹ್ಲಿ (38) ಅವರ ವಿಕೆಟ್‌ ಕೂಡ ಪಡೆದರು. ಸ್ವಲ್ಪ ಒಳಕ್ಕೆ ಬಂದ ಚೆಂಡನ್ನು ಆಡುವಂತೆ ಪ್ರೇರೇಪಿಸಿದರು. ಕೊಹ್ಲಿ ಬ್ಯಾಟ್‌ಗೆ ತಾಗಿದ ಚೆಂಡು ವಿಕೆಟ್‌ ಕೀಪರ್‌ ಕೈಲ್‌ ವೆರೈನ್‌ ಕೈಸೇರಿತು. ಬೇರೂರಲು ಪರದಾಡಿದ ಶ್ರೇಯಸ್‌ ಅಯ್ಯರ್‌ ಅವರ ರಕ್ಷಣೆಯನ್ನು ಭೇದಿಸಿದ ಚೆಂಡು ಬ್ಯಾಟ್ ಮತ್ತು ಪ್ಯಾಡ್‌ ನಡುವಿನಿಂದ ನುಗ್ಗಿ ಬೇಲ್ಸ್‌ಗಳನ್ನು ಹಾರಿಸಿತು.

ರಬಾಡ ಟೆಸ್ಟ್‌ನಲ್ಲಿ 15ನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ವಿಶ್ವಾಸದಿಂದ ಆಡುತ್ತಿದ್ದ ಶಾರ್ದೂಲ್ ಠಾಕೂರ್ (24) ಅವರ ಬಳಿ ರಬಾಡ ಅವರ ಬೌನ್ಸರ್‌ ಒಂದಕ್ಕೆ ಉತ್ತರವಿರಲಿಲ್ಲ. ನಂತರ ಅಶ್ವಿನ್‌ ವಿಕೆಟ್ ಕೂಡ ಪಡೆದರು. ಹಿಮ್ಮಡಿ ನೋವಿನಿಂದ ಕೆಲ ತಿಂಗಳು  ವಿಶ್ರಾಂತಿಯಲ್ಲಿದ್ದ ರಬಾಡ ತಮ್ಮ ಪುನರಾಗಮನ ಪಂದ್ಯದಲ್ಲಿ ಲಯಕ್ಕೆ ಮರಳಲು ಸಮಯ ತೆಗೆದುಕೊಳ್ಳಲಿಲ್ಲ.

ಪದಾರ್ಪಣೆ ಪಂದ್ಯ ಆಡಿದ ನ್ಯಾಂಡ್ರೆ ಬರ್ಗರ್, ಯಶಸ್ವಿ ಜೈಸ್ವಾಲ್‌ ಮತ್ತು ಶುಭಮನ್ ಗಿಲ್‌ ಅವರ ವಿಕೆಟ್‌ ಪಡೆದು ಆರಂಭಿಕ ಆಘಾತ ನೀಡಿದರು. ಅದಕ್ಕೆ ಮೊದಲೇ ನಾಯಕ ರೋಹಿತ್‌ ಅವರು ರಬಾಡ ಅವರ ಬೌನ್ಸರ್ ಎಸೆತವನ್ನು ಹುಕ್‌ ಮಾಡುವ ಯತ್ನದಲ್ಲಿ ಲಾಂಗ್‌ಲೆಗ್‌ನಲ್ಲಿ ಕ್ಯಾಚಿತ್ತಿದ್ದರು. ಭಾರತದ ಮೊದಲ ಮೂವರು ವಿಕೆಟ್‌ಗಳು 11 ಓವರುಗಳಲ್ಲಿ 24 ರನ್‌ಗಳಾಗುಷ್ಟರಲ್ಲಿ ಬಿದ್ದಿದ್ದವು. ಚೆಂಡಿಗೆ ಸ್ವಿಂಗ್‌ ಮತ್ತು ಅಸಮಾನ ಬೌನ್ಸ್‌ ನೀಡುತ್ತಿದ್ದ ಅನುಕೂಲಕರ ಪಿಚ್‌ನಲ್ಲಿ ಬರ್ಗರ್‌, ಕೋಝಿ, ರಬಾಡ, ಯಾನ್ಸೆನ್ ಅವರ ದಾಳಿಯೆದುರು ಭಾರತದ ಬ್ಯಾಟರ್‌ಗಳ ಪರದಾಟ ಮುಂದುವರಿಯಿತು.

‘ವರ್ಷಕ್ಕೆ ಎರಡು ಟೆಸ್ಟ್‌: ರಬಾಡಾಗೆ ದಾಖಲೆ ಹೇಗೆ ಸಾಧ್ಯ?’

ಕಗಿಸೊ ರಬಾಡ ಈಗಾಗಲೇ ದಕ್ಷಿಣ ಆಫ್ರಿಕಾದ ಶ್ರೇಷ್ಠ ಬೌಲರ್‌ಗಳ ಸಾಲಿನಲ್ಲಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ತಂಡ ವರ್ಷಕ್ಕೆ ಕೆಲವೇ ಕೆಲವು ಟೆಸ್ಟ್‌ ಆಡಿದರೆ ಅವರು ಎಂದಿಗೂ ಡೇಲ್‌ ಸ್ಟೀನ್ ಅವರ 439 ವಿಕೆಟ್‌ಗಳ ದಾಖಲೆ ಮುರಿಯಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ವೇಗದ ಬೌಲರ್ ಮಖಾಯ ಎಂಟಿನಿ ಮಂಗಳವಾರ ಹೇಳಿದರು.

ಈಗ ಭಾರತ ವಿರುದ್ಧ ಆಡುತ್ತಿರುವ ಟೆಸ್ಟ್‌ ಪಂದ್ಯ ದಕ್ಷಿಣ ಆಫ್ರಿಕಾ ಈ ವರ್ಷ ಆಡುತ್ತಿರುವ ಕೇವಲ ಮೂರನೇ ಟೆಸ್ಟ್‌ ಪಂದ್ಯವಾಗಿದೆ.

ಈಗ 285 ವಿಕೆಟ್‌ಗಳನ್ನು ಪಡೆದಿರುವ ರಬಾಡ ಅವರು ಹರಿಣಗಳ ನಾಡಿನ ದಿಗ್ಗಜ ಬೌಲರ್‌ಗಳಾದ ಆ್ಯಲನ್ ಡೊನಾಲ್ಡ್‌, ಶಾನ್ ಪೊಲಾಕ್‌, ಡೇಲ್‌ ಸ್ಟೀನ್ ಮತ್ತು ಸ್ವತಃ ಎಂಟಿನಿ ಸಾಲಿಗೆ ಸೇರುವರೇ ಎಂಬ ಪ್ರಶ್ನೆ ಎಂಟಿನಿ ಅವರಿಗೆ ಎದುರಾಯಿತು. ಎಂಟಿನಿ ಟೆಸ್ಟ್‌ಗಳಲ್ಲಿ 390 ವಿಕೆಟ್‌ಗಳನ್ನು ಗಳಿಸಿದ್ದಾರೆ.

‘ಅವರು ಈಗಾಗಲೇ ಆ (ದಿಗ್ಗಜರ) ಸಾಲಿನಲ್ಲಿದ್ದಾರೆ. ಈ ಮೇಲಿನ ಬೌಲರ್‌ಗಳು 400 ವಿಕೆಟ್‌ಗಳನ್ನು ದಾಟಿದ್ದಾರೆ. ಕೆಜಿ (ರಬಾಡ) 300 ವಿಕೆಟ್‌ಗಳ ಮೈಲಿಗಲ್ಲಿನ ಬೆನ್ನತ್ತಿದ್ದಾರೆ. ಆದರೆ ನಮಗೆ ದೊಡ್ಡ ಸಮಸ್ಯೆಯಿದೆ. ವರ್ಷಕ್ಕೆ ಎರಡು ಟೆಸ್ಟ್‌ ಆಡುತ್ತೀರಿ. ಏನಿದು? ಆ ದಾಖಲೆ ತಲುಪುವವರೆಗೆ ಅವರು ಆಡಲು ಆಗುತ್ತದೆಯೇ?’ ಎಂದು ವೀಕ್ಷಕವಿವರಣೆಗಾರರೂ ಆಗಿರುವ ಎಂಟಿನಿ ಪ್ರಶ್ನಿಸಿದರು

ರಾಹುಲ್‌ ಹೋರಾಟ:

ಈ ನಡುವೆ ಕೆ.ಎಲ್‌.ರಾಹುಲ್ ಎಚ್ಚರಿಕೆ ಮಿಶ್ರಿತ ಆಟವಾಡಿದರು. ಕಳೆದ ಪ್ರವಾಸದ ವೇಳೆ ಇದೇ ಕ್ರೀಡಾಂಗಣದಲ್ಲಿ ಶತಕ ಬಾರಿಸಿದ್ದ ರಾಹುಲ್ ಈ ಬಾರಿಯೂ ಒತ್ತಡದ ಪರಿಸ್ಥಿತಿಯಲ್ಲೇ ತಂಡದ ರಕ್ಷಣೆಗೆ ನಿಂತರು. ಅವರು ಎರಡು ಸಿಕ್ಸರ್‌, 10 ಬೌಂಡರಿಗಳನ್ನು ಬಾರಿಸಿದರು. ಕೆಳಕ್ರಮಾಂಕದ ಆಟಗಾರರ (ಶಾರ್ದೂಲ್‌ ಠಾಕೂರ್‌, ಬೂಮ್ರಾ) ಜೊತೆ ಅವರು ಟೀ ವಿರಾಮದ ನಂತರ ಅರ್ಧ ಶತಕವನ್ನೂ ದಾಟಿದರು.

ಸ್ಕೋರ್‌ ಕಾರ್ಡ್‌

ಒಂದನೇ ಇನಿಂಗ್ಸ್‌: ಭಾರತ: 8 ವಿಕೆಟ್‌ಗೆ 208 (59 ಓವರ್‌)

ಜೈಸ್ವಾಲ್ ಸಿ ವೆರೈನ್ ಬಿ ಬರ್ಗರ್‌ 17 (37ಎ, 4x4)

ರೋಹಿತ್‌ ಸಿ ಬರ್ಗರ್ ಬಿ ರಬಾಡ 5 (14ಎ, 4x1)

ಗಿಲ್‌ ಸಿ ವೆರೈನ್ ಬಿ ಬರ್ಗರ್ 2 (12ಎ)

ಕೊಹ್ಲಿ ಸಿ ವೆರೈನ್‌ ಬಿ ರಬಾಡ 38 (64ಎ, 4x5)

ಶ್ರೇಯಸ್‌ ಬಿ ರಬಾಡ 31 (50ಎ, 4x3, 6x1)

ರಾಹುಲ್ ಔಟಾಗದೆ 70 (105ಎ, 4x10, 6x2)

ಅಶ್ವಿನ್‌ ಸಿ ಸಬ್ (ಮುಲ್ಡರ್‌) ಬಿ ರಬಾಡ 8 (11ಎ, 4x2)

ಶಾರ್ದೂಲ್ ಸಿ ಎಲ್ಗರ್ ಬಿ ರಬಾಡ 24 (33ಎ, 4x3)

ಬೂಮ್ರಾ ಬಿ ಯಾನ್ಸೆನ್ 1 (19ಎ)

ಸಿರಾಜ್‌ ಔಟಾಗದೆ 0 (10ಎ)

ಇತರೆ: 12 (ಬೈ 1, ಲೆಗ್‌ಬೈ 8, ನೋಬಾಲ್‌ 1, ವೈಡ್‌ 2)

ವಿಕೆಟ್ ಪತನ: 1–13 (ರೋಹಿತ್‌, 4.6), 2–23 (ಯಶಸ್ವಿ, 9.4), 3–24 (ಗಿಲ್‌, 11.1), 4–92 (ಶ್ರೇಯಸ್‌, 26.6), 5–107 (ಕೊಹ್ಲಿ, 30.6), 6–121 (ಅಶ್ವಿನ್‌, 34.6), 7–164 (ಶಾರ್ದೂಲ್ ಠಾಕೂರ್, 46.2), 8–191 (ಜಸ್ಪ್ರೀತ್‌ ಬೂಮ್ರಾ, 54.3),

ಬೌಲಿಂಗ್‌: ಕಗಿಸೊ ರಬಾಡ 17–3–44–5, ಮಾರ್ಕೊ ಯಾನ್ಸೆನ್‌ 15–1–52–1, ನ್ಯಾಂಡ್ರೆ ಬರ್ಗರ್‌ 15–4–50–2, ಜೆರಾಲ್ಡ್ ಕೋಝಿ 12–1–53–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT