ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕನ್ನರ ವಿರುದ್ಧ ಭಾರತ ‘ಎ’ ಮೇಲುಗೈ

ಜಯಂತ್ ಯಾದವ್‌ಗೆ 3 ವಿಕೆಟ್‌; ಅನ್ಮೋಲ್‌ಪ್ರೀತ್‌, ಸಿದ್ದೇಶ್‌, ಭರತ್‌ ಅರ್ಧಶತಕ
Last Updated 1 ಜೂನ್ 2019, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರವಾಸಿ ಶ್ರೀಲಂಕಾ ‘ಎ’ ತಂಡದ ಪ್ರತಿರೋಧವನ್ನು ಮೆಟ್ಟಿ ನಿಂತ ಭಾರತ ‘ಎ’ ತಂಡ ಇಲ್ಲಿ ನಡೆಯುತ್ತಿರುವ ‘ಟೆಸ್ಟ್‌’ ಪಂದ್ಯದಲ್ಲಿ ಆಧಿಪತ್ಯ ಸ್ಥಾಪಿಸಿದೆ.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 57 ರನ್‌ಗಳ ಮುನ್ನಡೆ ಗಳಿಸಿದ ಭಾರತ ‘ಎ’ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳಿಗೆ 216 ರನ್ ಗಳಿಸಿದೆ. ಈ ಮೂಲಕ ಒಟ್ಟಾರೆ 273 ರನ್‌ಗಳ ಮುನ್ನಡೆ ಸಾಧಿಸಿದೆ.

ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ ಕೆ.ಎಸ್.ಭರತ್ ಶತಕದ ಬಲದಿಂದ ಆತಿಥೇಯರು 269 ರನ್‌ ಗಳಿಸಿದ್ದರು. ದಿನದಾಟದ ಮುಕ್ತಾಯಕ್ಕೆ ಶ್ರೀಲಂಕಾ 4ಕ್ಕೆ 87 ರನ್‌ ಗಳಿಸಿತ್ತು.

ಕ್ರೀಸ್‌ನಲ್ಲಿದ್ದ ನಿರೋಷನ್ ಡಿಕ್ವೆಲ್ಲಾ ಮತ್ತು ಪ್ರಿಯಮಲ್ ಪೆರೇರ ಶನಿವಾರ ಬೆಳಿಗ್ಗೆ ಬೇಗನೇ ಔಟಾದರು. ಆದರೆ ಕಮಿಂದು ಮೆಂಡಿಸ್ (68; 105 ಎಸೆತ, 11 ಬೌಂಡರಿ) ಏಕಾಂಗಿ ಹೋರಾಟದ ಮೂಲಕ ತಂಡದ ಮೊತ್ತವನ್ನು 200 ರನ್ ದಾಟಿಸಿದರು. ಮೊದಲ ದಿನ ತಲಾ ಎರಡು ವಿಕೆಟ್ ಕಬಳಿಸಿದ್ದ ಸಂದೀಪ್‌ ವಾರಿಯರ್ ಮತ್ತು ಶಿವಂ ದುಬೆಗೆ ಎರಡನೇ ದಿನ ಮಿಂಚಲು ಆಗಲಿಲ್ಲ. ಆದರೆ ಜಯಂತ್ ಯಾದವ್ ಮೂರು ವಿಕೆಟ್ ಉರುಳಿಸಿ ಮುನ್ನಡೆಗೆ ಮಹತ್ವದ ಕಾಣಿಕೆ ನೀಡಿದರು.

ಮತ್ತೊಮ್ಮೆ ಭರತ್ ಕಾರುಬಾರು: ಎರಡನೇ ಇನಿಂಗ್ಸ್‌ನ ಆರಂಭದಲ್ಲಿ ಭಾರತ ತಂಡ ಎಡವಿತು. ಮೊದಲ ಪಂದ್ಯದ ಹೀರೊಗಳಾದ ಪ್ರಿಯಾಂಕ್ ಪಾಂಚಾಲ್ ಮತ್ತು ಅಭಿಮನ್ಯು ಈಶ್ವರನ್ ಎರಡನೇ ಇನಿಂಗ್ಸ್‌ನಲ್ಲೂ ಎಡವಿದರು.

ಆದರೆ ಅನ್ಮೋಲ್ ಪ್ರೀತ್ ಸಿಂಗ್ (60;69 ಎ, 9 ಬೌಂ), ಸಿದ್ದೇಶ್ ಲಾಡ್‌ (58; 76 ಎ, 6 ಬೌಂ) ಮತ್ತು ಭರತ್ (60; 56 ಎ, 2 ಸಿಕ್ಸರ್, 4 ಬೌಂ) ಅವರ ಉತ್ತಮ ಆಟದ ನೆರವಿನಿಂದ ತಂಡ ಉತ್ತಮ ಮೊತ್ತ ಕಲೆ ಹಾಕಿತು.

44 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ಅನ್ಮೋಲ್ ಮತ್ತು ಸಿದ್ದೇಶ್‌ 63 ರನ್ ಸೇರಿಸಿದರು. ನಾಲ್ಕನೇ ವಿಕೆಟ್‌ಗೆ ಸಿದ್ದೇಶ್ ಮತ್ತು ಭರತ್‌ 99 ರನ್‌ಗಳ ಜೊತೆಯಾಟ ಆಡಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ ‘ಎ’: 269; ಶ್ರೀಲಂಕಾ ‘ಎ’ (ಶುಕ್ರವಾರ 18 ಓವರ್‌ಗಳಲ್ಲಿ 4ಕ್ಕೆ 87): 60 ಓವರ್‌ಗಳಲ್ಲಿ 212 (ನಿರೋಷನ್ ಡಿಕ್ವೆಲ್ಲಾ 39, ಪ್ರಿಯಮಲ್ ಪೆರೇರ 36, ಕಮಿಂದು ಮೆಂಡಿಸ್ 68; ಸಂದೀಪ್ ವಾರಿಯರ್ 32ಕ್ಕೆ2, ಶಿವಂ ದುಬೆ 44ಕ್ಕೆ2, ಜಯಂತ್ ಯಾದವ್ 24ಕ್ಕೆ3); ಎರಡನೇ ಇನಿಂಗ್ಸ್‌: ಭಾರತ ‘ಎ’: 46 ಓವರ್‌ಗಳಲ್ಲಿ 6ಕ್ಕೆ 216 (ಪ್ರಿಯಾಂಕ್ ಪಾಂಚಾಲ್ 15, ಅನ್ಮೋಲ್ ಪ್ರೀತ್ ಸಿಂಗ್ 60, ಸಿದ್ದೇಶ್ ಲಾಡ್ 58, ಕೆ.ಎಸ್.ಭರತ್‌ 60; ವಿಶ್ವ ಫರ್ನಾಂಡೊ 53ಕ್ಕೆ2, ಮಲಿಂದ ಪುಷ್ಪಕುಮಾರ 34ಕ್ಕೆ1, ಲಕ್ಷಣ ಸಂದಗನ್48ಕ್ಕೆ2, ಕಮಿಂದು ಮೆಂಡಿಸ್ 26ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT