ಕ್ರಿಕೆಟ್‌: ಭಾರತಕ್ಕೆ ಮುನ್ನಡೆಯ ಭರವಸೆ –ಧೋನಿ, ಕೇದಾರ್ ಮೇಲೆ ಕಣ್ಣು

ಬುಧವಾರ, ಮಾರ್ಚ್ 20, 2019
31 °C
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ಎರಡನೇ ಪಂದ್ಯ

ಕ್ರಿಕೆಟ್‌: ಭಾರತಕ್ಕೆ ಮುನ್ನಡೆಯ ಭರವಸೆ –ಧೋನಿ, ಕೇದಾರ್ ಮೇಲೆ ಕಣ್ಣು

Published:
Updated:
Prajavani

ನಾಗಪುರ: ಮೊದಲ ಪಂದ್ಯದಲ್ಲಿ ಪರಾಕ್ರಮ ಮೆರೆದಿರುವ ಭಾರತ ತಂಡ ಆಸ್ಟ್ರೇಲಿಯಾ ಎದುರು ಮತ್ತೊಂದು ಜಯದತ್ತ ದಿಟ್ಟ ಹೆಜ್ಜೆ ಇರಿಸಿದೆ. ಮಂಗಳವಾರ ಇಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಗೆದ್ದು ಮುನ್ನಡೆ ಹೆಚ್ಚಿಸಲು ವಿರಾಟ್ ಕೊಹ್ಲಿ ಬಳಗ ಪ್ರಯತ್ನಿಸಲಿದೆ.

ವಿಶ್ವಕಪ್‌ನ ಪೂರ್ವಭಾವಿ ಅಭ್ಯಾಸ ಎಂದೇ ಪರಿಗಣಿಸಲಾಗಿರುವ ಸರಣಿಯ ಮೊದಲ ಪಂದ್ಯ ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದಿತ್ತು. ಅದರಲ್ಲಿ ಆತಿಥೇಯರು ಆರು ವಿಕೆಟ್‌ಗಳ ಜಯ ಸಾಧಿಸಿದ್ದರು. ಟ್ವೆಂಟಿ–20 ಸರಣಿಯಲ್ಲಿ 2–0ಯಿಂದ ಸೋತಿದ್ದ ಭಾರತಕ್ಕೆ ಆ ಗೆಲುವು ಭರವಸೆ ಮೂಡಿಸಿದೆ. ವಿಶ್ವಕಪ್‌ಗೆ ಮೊದಲು ಇನ್ನು ನಾಲ್ಕು ಪಂದ್ಯಗಳು ಬಾಕಿ ಇವೆ. ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಆಟಗಾರರು ಯಾರು ಎಂಬುದು ಬಹುತೇಕ ಖಚಿತವಾಗಿದೆ. ಇಬ್ಬರು ಆಟಗಾರರನ್ನು ನಿರ್ಣಯಿಸುವುದು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಯುವ ಆಟಗಾರರಿಗೆ ಈ ಪಂದ್ಯಗಳು ಸವಾಲಿನದ್ದಾಗಲಿವೆ.

ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೈದರಾಬಾದ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಅವರಿಗೆ ಮತ್ತೊಂದು ಅವಕಾಶ ನೀಡಲು ತಂಡದ ಆಡಳಿತ ಮುಂದಾಗಲಿದೆ. ಹೀಗಾಗಿ ಕೆ.ಎಲ್‌.ರಾಹುಲ್‌ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಆರಂಭಿಕ ಬ್ಯಾಟ್ಸ್‌ಮನ್‌ ಮತ್ತು ಉಪನಾಯಕ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್‌ ಮತ್ತೊಮ್ಮೆ ಮಿಂಚುವ ಭರವಸೆಯಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದರೂ ಚೇತರಿಸಿಕೊಳ್ಳಬಲ್ಲ ಅಂಬಟಿ ರಾಯುಡು ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆ.

ಮಹೇಂದ್ರ ಸಿಂಗ್ ಧೋನಿ ಮತ್ತು ಕೇದಾರ್ ಜಾಧವ್ ಮೊದಲ ಪಂದ್ಯದಲ್ಲಿ ಶತಕದ ಜೊತೆಯಾಟವಾಡಿ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು. ಮಂಗಳವಾರವೂ ಅವರು ಬ್ಯಾಟಿಂಗ್ ವೈಭವ ಮುಂದುವರಿಸುವ ಸಾಧ್ಯತೆ ಇದೆ. ವಿಜಯಶಂಕರ್ ಸ್ಥಾನದಲ್ಲಿ ರಿಷಭ್ ಪಂತ್ ಅವಕಾಶ ಪಡೆಯುವುದು ಖಚಿತವಾಗಿದೆ.

ಶಮಿ, ಬೂಮ್ರಾ ಮೇಲೆ ವಿಶ್ವಾಸ: ಮೊದಲ ಪಂದ್ಯದಲ್ಲಿ ತಲಾ ಎರಡು ವಿಕೆಟ್ ಉರುಳಿಸಿದ್ದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಮೇಲೆ ತಂಡ ವಿಶ್ವಾಸ ಇರಿಸಿದೆ. ಸ್ಪಿನ್ ವಿಭಾಗಕ್ಕೆ ಕುಲದೀಪ್ ಯಾದವ್ ಬಲ ತುಂಬಿದ್ದಾರೆ. ಆದರೆ ರವೀಂದ್ರ ಜಡೇಜ ಅವರ ಸ್ಥಾನದ ಬಗ್ಗೆ ಸಂದೇಹ ಮೂಡಿದ್ದು ಅವರ ಬದಲಿಗೆ ಯಜುವೇಂದ್ರ ಚಾಹಲ್‌ಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ.

ಅತ್ತ ಆಸ್ಟ್ರೇಲಿಯಾ ತಂಡ, ನಾಯಕ ಆ್ಯರನ್ ಫಿಂಚ್ ಅವರು ಫಾರ್ಮ್‌ ಕಳೆದುಕೊಂಡಿರುವುದರಿಂದ ಚಿಂತೆಗೆ ಈಡಾಗಿದೆ. ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅವರು ಎರಡನೇ ಪಂದ್ಯದಲ್ಲಿ ಎಂಟು ರನ್‌ ಗಳಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಉಸ್ಮಾನ್ ಖ್ವಾಜಾ, ಮಾರ್ಕಸ್ ಸ್ಟೊಯಿನಿಸ್‌ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ ಅವರ ವಿಕೆಟ್‌ಗಳನ್ನು ಸುಲಭವಾಗಿ ಉರುಳಿಸಲು ಭಾರತದ ಬೌಲರ್‌ಗಳಿಗೆ ಸಾಧ್ಯವಾಗಿತ್ತು. ಈ ಆತಂಕ ಆಸ್ಟ್ರೇಲಿಯಾವನ್ನು ಕಾಡುತ್ತಿದ್ದು ತಿರುಗೇಟು ನೀಡುವುದೇ ಎಂಬುದನ್ನು ಕಾದುನೋಡಬೇಕು.

ತಂಡಗಳ: ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ, ಅಂಬಟಿ ರಾಯುಡು, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್‌), ಕೇದಾರ್‌ ಜಾಧವ್‌, ವಿಜಯಶಂಕರ್‌, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್‌ ಶಮಿ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್‌, ರಿಷಭ್ ಪಂತ್‌, ಸಿದ್ಧಾರ್ಥ್ ಕೌಲ್‌, ಕೆ.ಎಲ್.ರಾಹುಲ್‌, ರವೀಂದ್ರ ಜಡೇಜ.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್‌ (ನಾಯಕ), ಡಿ’ಆರ್ಸಿ ಶಾರ್ಟ್‌, ಶಾನ್‌ ಮಾರ್ಶ್‌, ಮಾರ್ಕಸ್ ಸ್ಟೊಯಿನಿಸ್‌, ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ, ಪೀಟರ್‌ ಹ್ಯಾಂಡ್ಸ್‌ಕಂಬ್‌, ಆ್ಯಶ್ಟನ್‌ ಟರ್ನರ್‌, ಆ್ಯಡಂ ಜಂಪಾ, ಜೇಸನ್ ಬೆಹ್ರೆಂಡಾರ್ಫ್‌, ಜೇ ರಿಚರ್ಡ್ಸನ್‌, ಪ್ಯಾಟ್‌ ಕಮಿನ್ಸ್‌, ಆ್ಯಂಡ್ರ್ಯೂ ಟೈ, ನೇಥನ್ ಕಾಲ್ಟರ್‌ನೈಲ್‌, ನೇಥನ್ ಲಯನ್‌.

ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !