ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲುಟಿಸಿ ಫೈನಲ್ ಪ್ರವೇಶ ನಿಯಮ ತಿದ್ದುಪಡಿಗೆ ರವಿಶಾಸ್ತ್ರಿ ಕಿಡಿ

ಶೇಕಡಾವಾರು ಪಾಯಿಂಟ್ಸ್‌ ಪದ್ಧತಿಗೆ ಭಾರತದ ಕೋಚ್ ಅಸಮಾಧಾನ; ಐಸಿಸಿ ಬಗ್ಗೆ ಟೀಕೆ
Last Updated 7 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಅಹಮದಾಬಾದ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶದ ಅರ್ಹತಾ ಮಾನದಂಡವನ್ನು ಬದಲಾಯಿಸಿದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಮಕ್ಕೆ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಮೊಟೇರಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡವು ಗೆಲುವು ಸಾಧಿಸಿತ್ತು. ಅದರೊಂದಿಗೆ ಸರಣಿಯಲ್ಲಿ 3–1ರಿಂದ ಗೆದ್ದು ಡಬ್ಲುಟಿಸಿಗೆ ಅರ್ಹತೆ ಗಿಟ್ಟಿಸಿತ್ತು.

ಹೋದ ವರ್ಷ ಕೋವಿಡ್ –19 ಕಾರಣದಿಂದ ವಿಶ್ವದಾದ್ಯಂತ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿದ್ದವು. ಆ ಸಂದರ್ಭದಲ್ಲಿ ಡಬ್ಲುಟಿಸಿಯ ಟೆಸ್ಟ್ ಸರಣಿಗಳಲ್ಲಿಕೆಲವು ರದ್ದಾಗಿದ್ದವು. ಆದ್ದರಿಂದ ಐಸಿಸಿಯು ಪಾಯಿಂಟ್ ಪದ್ಧತಿಯ ನಿಯಮ ಬದಲಿಸಿ, ಪಂದ್ಯಗಳ ಜಯದ ಶೇಕಡಾವಾರು ಪಾಯಿಂಟ್‌ ಪದ್ಧತಿಯನ್ನು ಜಾರಿಗೆ ತಂದಿತ್ತು.

ಈ ನಿಯಮದ ಕುರಿತು ಶಾಸ್ತ್ರಿ, ‘ಹೋದ ಅಕ್ಟೋಬರ್‌ನಲ್ಲಿ ಕೋವಿಡ್ ಕಾರಣ ನಾನು ಮನೆಯಲ್ಲಿಯೇ ಉಳಿಯಬೇಕಾಯಿತು. ಆಗ ನಮ್ಮ ತಂಡವು ಬೇರೆಲ್ಲ ತಂಡಗಳಿಗಿಂತಲೂ ಅತಿ ಹೆಚ್ಚು (360 ಪಾಯಿಂಟ್) ಹೊಂದಿತ್ತು. ಕೊರೊನಾ ಲಾಕ್‌ಡೌನ್‌ಗಿಂತ ಮುನ್ನ ಮೂರು ಟೆಸ್ಟ್ ಸರಣಿಯಲ್ಲಿ ಗೆದ್ದು, ಒಂದರಲ್ಲಿ ತಂಡವು ಸೋತಿತ್ತು. ಆದರೆ ಹೊಸ ಪಾಯಿಂಟ್ ಪದ್ದತಿ ಜಾರಿಗೆ ಬಂದಾಗ ನಾವು ಒಂದರಿಂದ ಮೂರನೇ ಸ್ಥಾನಕ್ಕೆ ಜಾರಿದ್ದೆವು’ ಎಂದು ವಿವರಿಸಿದರು.

‘ಕೊರೊನಾ ಕಾರಣದಿಂದಾಗಿ ಬಹಳಷ್ಟು ತಂಡಗಳು ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಆ ಪರಿಸ್ಥಿತಿಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಮ್ಮ ಸ್ಥಿತಿ ನೋಡಿ. ಎಲ್ಲರಗಿಂತ 60–70 ಪಾಯಿಂಟ್ಸ್‌ ಹೆಚ್ಚಿದ್ದರೂ ಕೂಡ ಆಸ್ಟ್ರೇಲಿಯಾಗಿ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಅಲ್ಲದೇ ಅಲ್ಲಿ ಸರಣಿ ಜಯಸುವ ಒತ್ತಡ ಬೇರೆ. ಒಂದೊಮ್ಮೆ ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿದ್ದರೆ, ಇಲ್ಲಿ ಇಂಗ್ಲೆಂಡ್ ವಿರುದ್ಧ ನಾವು 4–0ಯಿಂದ ಸರಣಿ ಗೆಲ್ಲಬೇಕಿತ್ತು. 500ರ ಸಮೀಪ ಪಾಯಿಂಟ್ಸ್‌ ಪಡೆದರೂ ಡಬ್ಲುಟಿಸಿಗೆ ಅರ್ಹತೆ ಪಡೆಯುವುದು ಖಚಿತವಿರಲಿಲ್ಲ. ಇದು ನಿಯಮ’ ಎಂದು ರವಿಶಾಸ್ತ್ರಿ ಖಾರವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT