ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ 19 ವರ್ಷದೊಳಗಿನವರ ವಿಶ್ವಕಪ್: ಭಾರತಕ್ಕೆ ಮೊದಲ ಎದುರಾಳಿ ವಿಂಡೀಸ್

ಮುಂದಿನ ಜನವರಿಯಲ್ಲಿ ಆರಂಭ
Published 18 ಆಗಸ್ಟ್ 2024, 13:55 IST
Last Updated 18 ಆಗಸ್ಟ್ 2024, 13:55 IST
ಅಕ್ಷರ ಗಾತ್ರ

ದುಬೈ: ಮಹಿಳೆಯರ 19 ವರ್ಷದೊಳಗಿನವರ ಟಿ20 ಕ್ರಿಕೆಟ್ ವಿಶ್ವಕಪ್ ಹಾಲಿ ಚಾಂಪಿಯನ್ ಭಾರತ ತಂಡವು ಮುಂದಿನ ವರ್ಷೆ ನಡೆಯಲಿರುವ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಮಲೇಷಿಯಾದಲ್ಲಿ ಜನವರಿ 18ರಿಂದ ಫೆಬ್ರುವರಿ 2ರವರೆಗೆ ಟೂರ್ನಿ ನಡೆಯಲಿದೆ. 

ಎ ಗುಂಪಿನಲ್ಲಿ ಆಡಲಿರುವ  ಭಾರತ ತಂಡವು ವಿಂಡೀಸ್, ಶ್ರೀಲಂಕಾ ಮತ್ತು ಆತಿಥೇಯ ಮಲೇಷಿಯಾವನ್ನು ಎದುರಿಸಲಿದೆ. ಹೋದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆದಿತ್ತು. 

ಈ ಬಾರಿಯ ಟೂರ್ನಿಯ ಬಿ ಗುಂಪಿನಲ್ಲಿ ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ತಾನ ಮತ್ತು ಅಮೆರಿಕ ತಂಡಗಳಿವೆ. ಸಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಸಮೊವಾ ಮತ್ತು ಆಫ್ರಿಕಾ ಖಂಡದ ಅರ್ಹತಾ ಸುತ್ತಿನಲ್ಲಿ ಗೆದ್ದ ತಂಡ ಪೈಪೋಟಿ ನಡೆಸಲಿವೆ. ಡಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ಮತ್ತು ಏಷ್ಯಾ ಖಂಡದ ಸುತ್ತಿನಲ್ಲಿ ಅರ್ಹತೆ ಪಡೆದ ತಂಡ ಇರಲಿವೆ. ರೌಂಡ್‌ ರಾಬಿನ್ ಲೀಗ್ ಪದ್ಧತಿಯಲ್ಲಿ ಟೂರ್ನಿ ನಡೆಯಲಿದೆ. 

ನಾಲ್ಕು ಗುಂಪುಗಳಿಂದ ತಲಾ ಮೂರು ತಂಡಗಳು ಸೂಪರ್ ಸಿಕ್ಸ್‌ ಹಂತಕ್ಕೆ ಅರ್ಹತೆ ಗಳಿಸುತ್ತವೆ. ಒಟ್ಟು 12 ತಂಡಗಳನ್ನು ಎರಡು  ಸೂಪರ್‌ ಸಿಕ್ಸ್ ಹಂತಗಳಲ್ಲಿ ವಿಂಗಡಿಸಲಾಗುತ್ತದೆ.  ಈ ಎರಡೂ ಗುಂಪುಗಳಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ. ಜ.31 ಮತ್ತು ಫೆ. 1ರಂದು ಸೆಮಿಫೈನಲ್‌ಗಳು ನಡೆಯಲಿವೆ. ಫೆ 2ರಂದು ಫೈನಲ್ ಪಂದ್ಯಆಯೋಜನೆಯಾಗಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳನ್ನೂ ನಿಗದಿಪಡಿಸಲಾಗಿದೆ. 

ಹೋದ ವರ್ಷ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಶಫಾಲಿ ವರ್ಮಾ ಮುನ್ನಡೆಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT