ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs BAN 2nd Test | ಮಳೆಗೆ ಮುಳುಗಿ ಹೋದ ಎರಡನೇ ದಿನದಾಟ

Published : 28 ಸೆಪ್ಟೆಂಬರ್ 2024, 7:24 IST
Last Updated : 28 ಸೆಪ್ಟೆಂಬರ್ 2024, 12:53 IST
ಫಾಲೋ ಮಾಡಿ
Comments

ಕಾನ್ಪುರ: ಶನಿವಾರವೂ ಮಳೆಯ ಆಟ ಮುಂದುವರಿಯಿತು. ಇದರಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಎರಡನೇ ಪಂದ್ಯದ ಎರಡನೇ ದಿನದಾಟವು ಮುಳುಗಿಹೋಯಿತು. 

ಮೊದಲ ದಿನವಾದ ಶುಕ್ರವಾರ ಕೇವಲ 35 ಓವರ್‌ಗಳ ಆಟ ನಡೆದಿತ್ತು. ಕಳೆದ ರಾತ್ರಿ ಪಿಚ್ ಮತ್ತು ಹೊರಾಂಗಣಕ್ಕೆ ಹಾಕಿದ್ದ ಹೊದಿಕೆಗಳನ್ನು ತೆಗೆಯಲಿಲ್ಲ. ದಿನದಾಟದ ಆರಂಭದ ಸಮಯಕ್ಕಿಂತ ಸುಮಾರು ಒಂದು ತಾಸು ಮುನ್ನವೇ ಭಾರತ ಮತ್ತು ಬಾಂಗ್ಲಾ ಆಟಗಾರರು ಮೈದಾನಕ್ಕೆ ಬಂದರು. 

ಆದರೆ  ಬೆಳಿಗ್ಗೆ 9.30ರ ಸುಮಾರಿಗೆ ಜೋರಾಗಿ ಮಳೆ ಸುರಿಯಿತು. ಈ ಸಂದರ್ಭದಲ್ಲಿ ಉಭಯ ತಂಡಗಳ ಆಟಗಾರರಿಗೆ ಹೋಟೆಲ್‌ಗೆ ಮರಳಿ ವಿಶ್ರಾಂತಿ ಪಡೆಯುವ ಅವಕಾಶವನ್ನು ನೀಡಲಾಯಿತು. ಮಳೆ ಮತ್ತು ಮೈದಾನದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಆಟಗಾರರೂ ಹೋಟೆಲ್‌ಗೆ ಮರಳುವ ಆಯ್ಕೆಯನ್ನೇ ಆರಿಸಿಕೊಂಡರು. ಒಂದೊಮ್ಮೆ ಪರಿಸ್ಥಿತಿ ಸುಧಾರಿಸಿದರೆ ಪಂದ್ಯ ಆಡಲು ಅವರು ಕ್ರೀಡಾಂಗಣಕ್ಕೆ ಬರುವ ನಿರೀಕ್ಷೆ ಇತ್ತು. ಅದರೆ ಅದು ಈಡೇರಲೇ ಇಲ್ಲ. ಏಕೆಂದರೆ  ಇಲ್ಲಿಯ ಸ್ಥಿತಿ ಸುಧಾರಣೆಯಾಗಲಿಲ್ಲ. ಮಧ್ಯಾಹ್ನ 2 ಗಂಟೆಗೆ ದಿನದಾಟ ರದ್ದು ಮಾಡಿರುವುದಾಗಿ ಘೋಷಿಸಲಾಯಿತು. 

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ; ಭಾನುವಾರವೂ ಹವಾಮಾನ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಮಳೆ ಮೋಡಗಳು ದಟ್ಟವಾಗಿ ಆವರಿಸಲಿದ್ದು, ಒಂದೆರಡು ಸಲ ಮಳೆಯಾಗಬಹುದು. ಶನಿವಾರ ರಾತ್ರಿಯೂ  ಮಳೆ ಜೋರಾಗಿ ಸುರಿಯಲಿದೆ ಎಂದೂ ಇಲಾಖೆ ತಿಳಿಸಿದೆ. 

ಇದರಿಂದಾಗಿ ಬಹಳ ದಿನಗಳ ನಂತರ ಗ್ರೀನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ನಿರಾಶೆಯಾಗಿದೆ. 

‘ಹೌದು; ಇಲ್ಲಿಯ ಹವಾಗುಣವು ಸರಿಯಿಲ್ಲ.  ಪಂದ್ಯ ನಡೆಯಲು ಅವಕಾಶವಾಗುತ್ತಿಲ್ಲ. ಆದರೆ ವಿರಾಟ್ (ಕೊಹ್ಲಿ) ಅವರನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತಿದೆ. ಭವಿಷ್ಯದಲ್ಲಿ ಮತ್ತೆ ವಿರಾಟ್ ಮತ್ತು ರೋಹಿತ್ (ಶರ್ಮಾ) ಅವರು ಇಲ್ಲಿ ಬಂದು ಆಡುವರೇ ಎಂಬುದು ಖಚಿತವಿಲ್ಲ. ಭಾನುವಾರವಾದರೂ ಮಳೆ ಬಿಡುವು ನೀಡಿ ಆಟ ನಡೆಯಲಿ’ ಎಂದು ಅಭಿಮಾನಿಯೊಬ್ಬರು ಆಶಯ ವ್ಯಕ್ತಪಡಿಸಿದರು

ಮಳೆಯಿಂದಾಗಿ ಮೊದಲ ದಿನದ ಅಂತ್ಯಕ್ಕೆ ಬಾಂಗ್ಲಾದೇಶ 35 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. ಭಾರತದ ಪರ ಆಕಾಶ್ ದೀಪ್ ಎರಡು ಮತ್ತು ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಗಳಿಸಿದ್ದಾರೆ.

ಚೆನ್ನೈಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 280 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT