ಶನಿವಾರ, ಮಾರ್ಚ್ 25, 2023
26 °C

IND vs ENG: ಎರಡನೇ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ರೋಹಿತ್– ರಾಹುಲ್ ಆಸರೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ಓಲಿ ಪೋಪ್ ಮತ್ತು ಕ್ರಿಸ್ ವೋಕ್ಸ್‌ ಅವರ ಅಮೋಘ ಅರ್ಧಶತಕಗಳ ಬಲದಿಂದ ಆತಿಥೇಯ ಇಂಗ್ಲೆಂಡ್ ತಂಡವು ಭಾರತದ ಎದುರಿನ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿತು.

ದ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಇಂಗ್ಲೆಂಡ್ ತಂಡವು 84 ಓವರ್‌ಗಳಲ್ಲಿ 290 ರನ್‌ ಗಳಿಸಿ ಆಲೌಟ್ ಆಯಿತು. 99 ರನ್‌ಗಳ ಮುನ್ನಡೆ ಪಡೆಯಿತು.

ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 43 ರನ್‌ ಗಳಿಸಿದೆ. ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಮೊತ್ತವನ್ನು ಹಿಂದಿಕ್ಕಬೇಕಾದರೆ ತಂಡ ಇನ್ನೂ 56 ರನ್ ಗಳಿಸಬೇಕಾಗಿದೆ.

ಉಮೇಶ್ ಯಾದವ್ (76ಕ್ಕೆ3) ಮತ್ತು ಜಸ್‌ಪ್ರೀತ್ ಬೂಮ್ರಾ (67ಕ್ಕೆ2) ಅವರ ಶಿಸ್ತಿನ ದಾಳಿಯಿಂದಾಗಿ ಆತಿಥೇಯ ಇಂಗ್ಲೆಂಡ್ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ಪೋಪ್ (81; 159ಎ) ಮತ್ತು ವೋಕ್ಸ್ (50; 60ಎ) ತಂಡದ ಆತಂಕವನ್ನು ದೂರ ಮಾಡಿದರು.

ಅವರಿಗೆ ಜಾನಿ ಬೆಸ್ಟೊ (37) ಮತ್ತು ಮೋಯಿನ್ ಅಲಿ (35 ) ಉತ್ತಮ ಜೊತೆ ನೀಡಿದರು.

ಗುರುವಾರ ಭಾರತ ತಂಡವು 191 ರನ್‌ಗಳಿಗೆ ಆಲೌಟ್ ಆಗಿತ್ತು. ದಿನದಾಟದ ಕೊನೆಗೆ ಇಂಗ್ಲೆಂಡ್ 17 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 53 ರನ್ ಗಳಿಸಿತ್ತು. ಶುಕ್ರವಾರ ಬೆಳಿಗ್ಗೆ ಕ್ರೇಗ್ ಓವರ್ಟನ್ ಮತ್ತು ಡೇವಿಡ್ ಮಲಾನ್ ಬೇಗನೆ  ಔಟಾದಾಗ ತಂಡದ ಮೊತ್ತ 100ರ ಗಡಿಯನ್ನೂ ದಾಟಿರಲಿಲ್ಲ.

ಈ ಹಂತದಲ್ಲಿ ಜೊತೆಯಾದ ಪೋಪ್ ಮತ್ತು ಜಾನಿ ಆರನೇ ವಿಕೆಟ್ ಜೊತೆಯಾಟದಲ್ಲಿ 89 ರನ್‌ಗಳನ್ನು ಸೇರಿಸಿದರು. ಇದು ತಂಡಕ್ಕೆ ಬಲ ತುಂಬಿತು.

ಬೆಸ್ಟೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಮೊಹಮ್ಮದ್ ಸಿರಾಜ್ ಈ ಜೊತೆಯಾಟವನ್ನು ಮುರಿದರು. ಆದರೆ ಕ್ರೀಸ್‌ನಲ್ಲಿದ್ದ ಪೋಪ್ ಅವರು ಮೋಯಿನ್ ಅಲಿ ಜೊತೆಗೆ ಏಳನೇ ವಿಕೆಟ್‌ ಜೊತೆಯಾಟದಲ್ಲಿ 73 ರನ್ ಸೇರಿಸುವಲ್ಲಿ ಯಶಸ್ವಿಯಾದರು. ಸ್ಪಿನ್ನರ್ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಮೋಯಿನ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.

ಕ್ರೀಸ್‌ಗೆ ಬಂದ ಕ್ರಿಸ್ ವೋಕ್ಸ್‌ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಪೋಪ್ ಜೊತೆಗೆ ಮತ್ತೊಂದು ದೊಡ್ಡ ಜೊತೆಯಾಟವಾಡುವತ್ತ ಸಾಗಿದ್ದರು. ಆದರೆ, ಶಾರ್ದೂಲ್ ಠಾಕೂರ್ ಎಸೆತವನ್ನು ತಪ್ಪಾಗಿ ಅಂದಾಜಿಸಿ ಆಡಿದ ಪೋಪ್ ಕ್ಲೀನ್ ಬೌಲ್ಡ್ ಆದರು. ಆದರೆ ಮುಂದಿನ ಹಂತದಲ್ಲಿ ವೋಕ್ಸ್‌ ಬೀಸಾಟ ರಂಗೇರಿತು. ಅದರಿಂದಾಗಿ ಮುನ್ನಡೆಯ ಅಂತರ ಹೆಚ್ಚಾಯಿತು.

ಕ್ರಿಸ್ ರನ್‌ಔಟ್ ಆಗುವುದರೊಂದಿಗೆ ಇಂಗ್ಲೆಂಡ್ ಇನಿಂಗ್ಸ್‌ಗೆ ತೆರೆ ಬಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು