ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG ರಾಹುಲ್ ಶತಕದ ಅಬ್ಬರ, ಪಂತ್ ಅರ್ಧಶತಕದ ಮಿಂಚು

Last Updated 26 ಮಾರ್ಚ್ 2021, 11:41 IST
ಅಕ್ಷರ ಗಾತ್ರ

ಪುಣೆ: ಭಾರತ ಕ್ರಿಕೆಟ್ ತಂಡದ ಬಲಗೈ ಅನುಭವಿ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಐದನೇ ಶತಕ ಸಾಧನೆ ಮಾಡಿದ್ದಾರೆ.

ಇನ್ನೊಂದೆಡೆ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಅಬ್ಬರಿಸಿದ್ದಾರೆ. ಇದಕ್ಕೂಮೊದಲು ನಾಯಕ ವಿರಾಟ್ ಕೊಹ್ಲಿ ಕೂಡಾ ಫಿಫ್ಟಿ ಸಾಧನೆ ಮಾಡಿದ್ದರು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ರಾಹುಲ್-ಪಂತ್ ಜೋಡಿಯು ಧೂಳೀಪಟಗೈದಿದೆ.

ಆಂಗ್ಲರ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ರಾಹುಲ್ ಆಕರ್ಷಕ ಶತಕ ಸಾಧನೆ ಮಾಡಿದರು. ಗಾಯಾಳು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸಿಗಿಳಿದ ರಾಹುಲ್ ತಮ್ಮ ನೈಜ ಸಾಮರ್ಥ್ಯವನ್ನು ನಿರೂಪಿಸಿದರು.

ಇತ್ತೀಚೆಗಷ್ಟೇ ಟಿ20 ಸರಣಿಯಲ್ಲಿ ರಾಹುಲ್ ಸತತ ವೈಫಲ್ಯವನ್ನು ಎದುರಿಸಿದ್ದರು. ಆದರೆ ಏಕದಿನದಲ್ಲಿ ಫಾರ್ಮ್‌ಗೆ ಮರಳುವ ಮೂಲಕ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.

114 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.

ಅತ್ತ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡಿರುವ ರಿಷಭ್ ಪಂತ್ ಏಕದಿನದಲ್ಲೂ ಅದ್ಭುತ ಫಾರ್ಮ್ ಮುಂದುವರಿಸಿದರು. ಈ ಮೂಲಕ ಟೆಸ್ಟ್, ಟಿ20 ಬಳಿಕ ಏಕದಿನದಲ್ಲೂ ಬಹುಮೂಲ್ಯ ಸೇವೆಯನ್ನು ನೀಡಿದ್ದಾರೆ.

ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪಂತ್, ಆಂಗ್ಲ ಬೌಲಿಂಗ್ ಪಡೆಯನ್ನು ಮನಬಂದಂತೆ ದಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT