ಸೋಮವಾರ, ಫೆಬ್ರವರಿ 24, 2020
19 °C

ಮತ್ತೆ ಮುಗ್ಗರಿಸಿದ ಭಾರತ: ಏಕದಿನ ಸರಣಿ ಕ್ಲೀನ್ ಸ್ವೀಪ್‌ ಸಾಧಿಸಿದ ಕಿವೀಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೌಂಟ್‌ ಮಾಂಗಾನೂಯಿ: ನ್ಯೂಜಿಲೆಂಡ್‌ ತಂಡ ಮಂಗಳವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಐದು ವಿಕೆಟ್‌ ಗಳಿಂದ ಗೆದ್ದು ಸರಣಿಯನ್ನು 3–0ಯಿಂದ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು.

ಇದರೊಂದಿಗೆ, 31 ವರ್ಷಗಳಲ್ಲಿ ಮೊದಲ ಬಾರಿ, ಎಲ್ಲ ಪಂದ್ಯಗಳು ನಡೆದ ಸರಣಿಯೊಂದರಲ್ಲಿ ಭಾರತ ‘ವೈಟ್‌ ವಾಷ್‌’ಗೆ ಒಳಗಾದಂತಾಯಿತು. 1989ರಲ್ಲಿ ವೆಸ್ಟ್‌ ಇಂಡೀಸ್‌, ಪ್ರವಾಸಿ ಭಾರತ ತಂಡವನ್ನು 5–0ಯಿಂದ ಸದೆಬಡಿದಿತ್ತು.

ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರುಗಳಲ್ಲಿ 296 ರನ್‌ ಗಳಿಸಿತು. ಕೆ.ಎಲ್‌.ರಾಹುಲ್‌ ಏಕ ದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದರು.

ನ್ಯೂಜಿಲೆಂಡ್‌ ಆರಂಭದಿಂದಲೇ ಆಕ್ರಮಣಕ್ಕಿಳಿಯಿತು. ಹೆನ್ರಿ ನಿಕೋಲ್ಸ್‌ 103 ಎಸೆತಗಳಲ್ಲಿ 80 ರನ್‌ ಬಾರಿಸಿದರೆ, ಗಪ್ಟಿಲ್‌ 46 ಎಸೆತಗಳಲ್ಲಿ 66 ರನ್‌ ಹೊಡೆದರು. ಮೊದಲ ವಿಕೆಟ್‌ಗೆ ಕೇವಲ 16.3 ಓವರುಗಳಲ್ಲಿ 106 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದರು.

ಅಂತಿಮ ಹಂತದಲ್ಲಿ ಟಾಮ್‌ ಲಥಾಮ್‌ ಜೊತೆಗೂಡಿದ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 28 ಎಸೆತಗಳಲ್ಲಿ 58 ರನ್‌ ಚಚ್ಚುವುದರೊಂದಿಗೆ ಸುಲಭ ಜಯ ತಂದುಕೊಟ್ಟರು.

ಶಾರ್ದೂಲ್‌ ಠಾಕೂರ್‌ ಮತ್ತು ನವದೀಪ್‌ ಸೈನಿ ದಂಡನೆಗೆ ಒಳಗಾದರು. ಜಸ್‌ಪ್ರೀತ್‌ ಬೂಮ್ರಾಗೆ ಸರಣಿಯಲ್ಲಿ ಒಂದೂ ವಿಕೆಟ್ ಪಡೆಯಲಾಗಲಿಲ್ಲ. ಚಾಹಲ್‌ ಪರಿಣಾಮಕಾರಿಯಾ ಗಿದ್ದರು. ಒಂದು ಹಂತದಲ್ಲಿ ಅವರು ಗಪ್ಟಿಲ್‌, ಕೇನ್‌ ವಿಲಿಯಮ್ಸನ್‌ ವಿಕೆಟ್‌ ಪಡೆದು ಕಿವೀಸ್‌ ಓಟಕ್ಕೆ ತಡೆಯೊಡ್ಡಿದರು.

ಜಿಮ್ಮಿ ನೀಶಮ್‌ ನಿರ್ಗಮಿಸಿದಾಗ ನ್ಯೂಜಿಲೆಂಡ್‌ ಮೊತ್ತ 5 ವಿಕೆಟ್‌ಗೆ 220. ಟಾಮ್‌ ಲಥಾಮ್‌ ಅವರನ್ನು ಕೂಡಿ ಕೊಂಡ ಗ್ರ್ಯಾಂಡ್‌ಹೋಮ್‌ ಆಕ್ರಮಣ ಕಾರಿಯಾಗಿ ಆಡಿ 17 ಎಸೆತಗಳಿರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಗ್ರ್ಯಾಂಡ್‌ಹೋಮ್‌ ಇನಿಂಗ್ಸ್‌ನಲ್ಲಿ ಆರು ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು.

ಮಿಂಚಿದ ರಾಹುಲ್‌: ಐದನೇ ಕ್ರಮಾಂದಲ್ಲಿ ಆಡಿದ ರಾಹುಲ್‌ ಶತಕ, ಭಾರತದ ಇನಿಂಗ್ಸ್‌ನಲ್ಲಿ ಗಮನ ಸೆಳೆಯಿತು. 113 ಎಸೆತಗಳ ಅವರ ಇನಿಂಗ್ಸ್‌ನಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳಿದ್ದವು. ಮಯಂಕ್‌ ಅಗರವಾಲ್ ಮತ್ತು ವಿರಾಟ್‌ ಕೊಹ್ಲಿ ವಿಫಲರಾದರು. ಪೃಥ್ವಿ ಶಾ 13ನೇ ಓವರ್‌ನಲ್ಲಿ ರನೌಟ್‌ ಆದರು. ಒಂದು ಹಂತದಲ್ಲಿ 62 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದು ಕೊಂಡಿದ್ದ ಭಾರತಕ್ಕೆ ರಾಹುಲ್‌, ಎರಡು ಉಪಯುಕ್ತ ಜೊತೆಯಾಟಗಳ ಮೂಲಕ ಉತ್ತಮ ಮೊತ್ತ ಗಳಿಸಲು ನೆರವಾದರು.

ಶ್ರೇಯಸ್‌ ಅಯ್ಯರ್‌ (63 ಎಸೆತಗಳಲ್ಲಿ 62) ಜೊತೆ ನಾಲ್ಕನೇ ವಿಕೆಟ್‌ಗೆ ನೂರು ರನ್‌ ಸೇರಿಸಿದ ರಾಹುಲ್‌, ಕರ್ನಾಟಕದ ಇನ್ನೊಬ್ಬ ಆಟಗಾರ ಮನೀಶ್‌ ಪಾಂಡೆ (48 ಎಸೆತಗಳಲ್ಲಿ 42) ಜೊತೆ ಐದನೇ ವಿಕೆಟ್‌ಗೆ 107 ರನ್‌ ಪೇರಿಸಿದರು. ಮಧ್ಯಮ ವೇಗಿ ಹಮಿಷ್‌ ಬೆನೆಟ್‌ 64 ರನ್ನಿಗೆ 4 ವಿಕೆಟ್‌ ಪಡೆದರು.

ಕೊಹ್ಲಿ ಪಡೆಗೆ ಕಿವೀಸ್ ತಿರುಗೇಟು

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧಿಸಿ ಆತ್ಮ ವಿಶ್ವಾಸದಿಂದ ಬೀಗುತ್ತಿದ್ದ ಕೊಹ್ಲಿ ಪಡೆಗೆ ಕಿವೀಸ್‌ ಪೆಟ್ಟು ನೀಡಿತು. ಏಕದಿನ ಸರಣಿಯಲ್ಲಿ ದಿಟ್ಟ ಆಟವಾಡಿದ ಆತಿಥೇಯ ತಂಡ ಮೂರೂ ಪಂದ್ಯಗಳನ್ನು ಗೆದ್ದು ತಿರುಗೇಟು ನೀಡಿತು.

ನಾಯಕ ಕೇನ್‌ ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ಟಾಮ್‌ ಲಾಥಮ್‌ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಟ್ಟಿದ್ದರು.

ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 348 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿ ಗೆದ್ದಿದ್ದ ಕಿವೀಸ್‌, ಆಕ್ಲೆಂಡ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು 22 ರನ್‌ ನಿಂದ ಜಯಿಸಿ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿತ್ತು.

21ರಿಂದ ಟೆಸ್ಟ್ ಸರಣಿ
ಉಭಯ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಯು ಇದೇ ತಿಂಗಳು 21ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ (ಫೆ.21–25) ಹಾಗೂ ಎರಡನೇ ಪಂದ್ಯ ಕ್ರೈಸ್ಟ್‌ ಚರ್ಚ್‌ನಲ್ಲಿ (ಫೆ.29–ಮಾ.04) ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)