ಶುಕ್ರವಾರ, ಮಾರ್ಚ್ 31, 2023
32 °C

ಭಾರತಕ್ಕೆ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಕಿರೀಟ; ಐತಿಹಾಸಿಕ ಸಾಧನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪೊಷೆಫ್‌ಸ್ಟ್ರೂಮ್‌: 19 ವರ್ಷದೊಳಗಿನ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಇದೇ ಮೊದಲ ಬಾರಿ ಆಯೋಜನೆಗೊಂಡಿರುವ ಐಸಿಸಿ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಎತ್ತಿ ಹಿಡಿದಿದೆ.

ಇಂಗ್ಲೆಂಡ್‌ ವಿರುದ್ಧ ಟಾಸ್‌ ಗೆದ್ದ ಭಾರತ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 17.1 ಓವರ್‌ಗಳಲ್ಲಿ 68 ರನ್ ಗಳಿಸಿ ಆಲೌಟ್ ಆಯಿತು. 

69 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಭಾರತದ ಪರ ಗೊಂಗಡಿ ತ್ರಿಷಾ 24, ಸೌಮ್ಯ ತಿವಾರಿ ಔಟಾಗದೆ 24 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

19 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಅನ್ನು ಇದೇ ಮೊದಲ ಸಲ ಆಯೋಜಿಸಲಾಗಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಶಫಾಲಿ ಪಡೆ ಚಾರಿತ್ರಿಕ ಸಾಧನೆ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಯುವಪಡೆಯ ನಾಯಕತ್ವದ 19 ವರ್ಷದ ಶಫಾಲಿ ಇತಿಹಾಸ ಬರೆದಿದ್ದಾರೆ. 

ಭಾರತದ ಸೀನಿಯರ್ ಮಹಿಳಾ ತಂಡವು ಇದುವರೆಗೂ ಯಾವುದೇ ಮಾದರಿಯಲ್ಲಿಯೂ ವಿಶ್ವಕಪ್ ಜಯಿಸಿಲ್ಲ. ಹೋದ ವರ್ಷ ವಿಶ್ವಕಪ್ ಫೈನಲ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಿದ್ದ ಮಹಿಳಾ ತಂಡದಲ್ಲಿ ಶಫಾಲಿ ಕೂಡ ಆಡಿದ್ದರು. 

ಮೋದಿ ಶುಭಾಶಯ: ಐಸಿಸಿ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ವಿಶೇಷ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಅಭಿನಂದನೆಗಳು. ನಮ್ಮ ಆಟಗಾರ್ತಿಯರು ಅತ್ಯುತ್ತಮ ಆಟವಾಡಿದ್ದಾರೆ. ಇವರ ಯಶಸ್ಸು ಮುಂಬರುವ ಆಟಗಾರ್ತಿಯರಿಗೆ ಸ್ಫೂರ್ತಿ ನೀಡುತ್ತದೆ. ತಂಡದ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು