ಭಾನುವಾರ, ನವೆಂಬರ್ 29, 2020
25 °C

ಆರ್‌ಸಿಬಿ vs ಕೆಕೆಆರ್‌ ಪಂದ್ಯ: ಕೊಹ್ಲಿ 2 ಫೋರ್‌ ಸಿಡಿಸಿದರೆ ದಾಖಲಾಗುತ್ತೆ 500!

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ವಿರಾಟ್‌ ಕೊಹ್ಲಿ

ಅಬುಧಾಬಿ: ಅಕ್ಟೋಬರ್‌ 12ರಂದು ನಡೆದಿದ್ದ ಕೋಲ್ಕತ್ತ ನೈಟ್ ರೈಡರ್ಸ್‌(ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಹಣಾಹಣಿಯಲ್ಲಿ ಆರ್‌ಸಿಬಿ 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಎಬಿ ಡಿ ವಿಲಿಯರ್ಸ್‌ ಮತ್ತು ನಾಯಕ ವಿರಾಟ್‌ ಕೊಹ್ಲಿ ಅಬ್ಬರದ ಜೊತೆಯಾಟವು ಐಪಿಎಲ್‌ನಲ್ಲಿ ಹೊಸ ದಾಖಲೆಯನ್ನೂ ಸೃಷ್ಟಿಸಿತು. ಈಗ ಕೆಕೆಆರ್‌ ನಾಯಕತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದು, ಗೆಲುವಿಗೆ ತೀವ್ರ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ಇದೇ ಟೂರ್ನಿಯಲ್ಲಿ ಅಬುಧಾಬಿ ಕ್ರೀಡಾಂಗಣದಲ್ಲಿ ಕೆಕೆಆರ್‌ 9 ಪಂದ್ಯಗಳನ್ನು ಆಡಿದ್ದು, ಆ ಪೈಕಿ 5 ಪಂದ್ಯಗಳಲ್ಲಿ ಗೆದ್ದು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಇದೇ ಕ್ರೀಡಾಂಗಣದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇಂದು ಸಂಜೆ 7:30ಕ್ಕೆ (ಭಾರತೀಯ ಕಾಲಮಾನ) ಐಪಿಎಲ್‌ನ 39ನೇ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಆಟಗಾರರ ಹಲವು ವೈಯಕ್ತಿಕ ದಾಖಲೆಗಳು ಸೃಷ್ಟಿಯಾಗಬಹುದಾಗಿದೆ. ಕೆಕೆಆರ್‌ ತಂಡದ ನಾಯಕ ಏಯಾನ್‌ ಮಾರ್ಗನ್‌ ಈ ಪಂದ್ಯದಲ್ಲಿ ಎರಡು ಸಿಕ್ಸರ್‌ ಸಿಡಿಸಿದರೆ, ಐಪಿಎಲ್‌ ಪಯಣದಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಿದಂತಾಗುತ್ತದೆ. ಅದೇ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ 1 ಸಿಕ್ಸರ್‌ ಮತ್ತು 2 ಫೋರ್‌ಗಳನ್ನು ದಾಖಲಿಸಿದರೆ ಕ್ರಮವಾಗಿ 200 ಐಪಿಎಲ್‌ ಸಿಕ್ಸರ್‌ಗಳು ಹಾಗೂ ಫೋರ್‌ಗಳ ಸಂಖ್ಯೆ 500 ಮುಟ್ಟಲಿದೆ.

ಆರ್‌ಸಿಬಿ ವಿಕೆಟ್‌ ಕೀಪರ್‌ ಆಗಿರುವ ಎಬಿ ಡಿ ವಿಲಿಯರ್ಸ್‌ ಇನ್ನು ಎರಡು ಕ್ಯಾಚ್‌ ಪಡೆದರೆ ಐಪಿಎಲ್‌ನಲ್ಲಿ 100 ಕ್ಯಾಚ್‌ಗಳು ಅವರ ಖಾತೆಗೆ ಸೇರಲಿವೆ.

ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್‌ ಫಿಂಚ್‌ 2000 ಐಪಿಎಲ್‌ ರನ್‌ಗಳನ್ನು ಪೂರೈಸಲು 58 ರನ್‌ಗಳನ್ನು ಪೇರಿಸಬೇಕಿದೆ. ಕೆಕೆಆರ್‌ನ ಆ್ಯಂಡ್ರೆ ರಸೇಲ್‌ ಇಂದಿನ ಪಂದ್ಯದಲ್ಲಿ 8 ರನ್‌ ಗಳಿಸಿದರೆ, ಐಪಿಎಲ್‌ನಲ್ಲಿ ಅವರ ಒಟ್ಟಾರೆ ಸ್ಕೋರ್‌ 1500 ರನ್‌ ಆಗಲಿದೆ. ಕೆಕೆಆರ್‌ನ ಮತ್ತೊಬ್ಬ ಬ್ಯಾಟ್ಸ್‌ಮನ್‌ ರಾಹುಲ್‌ ತ್ರಿಪಾಠಿ 74 ರನ್‌ ಸಿಡಿಸಿದರೆ, ಅವರ ಐಪಿಎಲ್‌ ಸ್ಕೋರ್‌ 1000 ರನ್‌ ಮುಟ್ಟಲಿದೆ.

ಈಗಾಗಲೇ 12 ಪಾಯಿಂಟ್ಸ್‌ಗಳನ್ನು ಸಂಗ್ರಹಿಸಿಕೊಂಡಿರುವ ವಿರಾಟ್ ಕೊಹ್ಲಿ ಬಳಗವು ಮತ್ತೊಂದು ಜಯದ ಕನಸಿನಲ್ಲಿದೆ.  10 ಪಾಯಿಂಟ್ ಗಳಿಸಿರುವ ಕೋಲ್ಕತ್ತ ಸಹ ಹೊಸ ನಾಯಕನ ನೇತೃತ್ವದಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ಕೆಕೆಆರ್‌ಗೆ ಏಯಾನ್ ಮಾರ್ಗನ್ ಸಾರಥ್ಯವಿದ್ದು, ಲಾಕಿ ಫರ್ಗ್ಯುಸನ್ ಬೌಲಿಂಗ್‌ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ದಿನೇಶ್ ಕಾರ್ತಿಕ್‌, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ ಮಿಂಚುತ್ತಿದ್ದಾರೆ. ಇನ್ನೂ ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಬ್ಯಾಟಿಂಗ್‌ ಬಲವಿದೆ. ಬೌಲಿಂಗ್‌ನಲ್ಲಿ ಕ್ರಿಸ್ ಮೊರಿಸ್, ನವದೀಪ್ ಸೈನಿ ಮತ್ತು ಯಜುವೇಂದ್ರ ಚಾಹಲ್ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ.

ಪಂದ್ಯದ ಅಪ್‌ಡೇಟ್‌ಗಳಿಗೆ ನೋಡಿ: IPL 2020 | RCB vs KKR: ಕೊಹ್ಲಿ–ಮಾರ್ಗನ್ ಬಳಗದ ಹೋರಾಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು