ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | RR vs DC ‌: ರಾಜಸ್ಥಾನ್ ರಾಯಲ್ಸ್‌ಗೆ ಸಂಜು ಮೇಲೆ ನಿರೀಕ್ಷೆ

ಡೆಲ್ಲಿ ಎದುರಿನ ಪಂದ್ಯ: ಬೆನ್ ಸ್ಟೋಕ್ಸ್‌ಗೆ ಗಾಯ; ನಾಯಕ ಸಂಜು ಸ್ಯಾಮ್ಸನ್‌ ಮೇಲೆ ನಿರೀಕ್ಷೆ
Last Updated 14 ಏಪ್ರಿಲ್ 2021, 11:05 IST
ಅಕ್ಷರ ಗಾತ್ರ

ಮುಂಬೈ: ಸಂಜು ಸ್ಯಾಮ್ಸನ್ ಶತಕ ಗಳಿಸಿ ದಾಖಲೆ ಬರೆದರೂ ಜಯದ ಸವಿಯುಣ್ಣಲು ಸಾಧ್ಯವಾಗದ ರಾಜಸ್ಥಾನ್ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಹಣಾಹಣಿಗೆ ಸಜ್ಜಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ಎದುರು ಗುರುವಾರ ಸೆಣಸಲಿದೆ.

ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಗಾಯಗೊಂಡಿರುವುದರಿಂದ ರಾಜಸ್ಥಾನ್ ರಾಯಲ್ಸ್‌ ಪಾಳಯದಲ್ಲಿ ಆತಂಕ ಮೂಡಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಅಮೋಘ ಆಟವಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಭರವಸೆಯಲ್ಲಿದೆ. ಹೊಸ ನಾಯಕ ರಿಷಭ್ ಪಂತ್ ನೇತೃತ್ವದಲ್ಲಿ ಚೆನ್ನೈ ತಂಡವನ್ನು ಡೆಲ್ಲಿ ತನ್ನ ಮೊದಲ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಮಣಿಸಿತ್ತು.

ಸೋಮವಾರ ರಾತ್ರಿ ರನ್ ಮಳೆ ಸುರಿದಿದ್ದ ಪಂದ್ಯದಲ್ಲಿ 222 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ರನ್‌ಗಳಿಂದ ಸೋತಿತ್ತು. 63 ಎಸೆತಗಳಲ್ಲಿ 119 ರನ್‌ ಗಳಿಸಿದ್ದ ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ ನಾಯಕನಾಗಿ ಕಣಕ್ಕೆ ಇಳಿದ ಮೊದಲ ಪಂದ್ಯದಲ್ಲೇ ಮೂರಂಕಿ ಮೊತ್ತ ದಾಟಿದ ಮೊದಲ ಆಟಗಾರ ಎಂಬ ಶ್ರೇಯಸ್ಸು ತಮ್ಮದಾಗಿಸಿಕೊಂಡಿದ್ದರು. ಹೀಗಾಗಿ ಡೆಲ್ಲಿ ಎದುರಿನ ಪಂದ್ಯದಲ್ಲೂ ತಂಡ ಅವರ ಮೇಲೆ ಭರವಸೆ ಇರಿಸಿಕೊಂಡಿದೆ.

ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಜೋಸ್ ಬಟ್ಲರ್‌, ಶಿವಂ ದುಬೆ ಮತ್ತು ರಿಯಾನ್ ಪರಾಗ್ ಅವರ ಮೇಲೆ ಹೆಚ್ಚು ಹೊರೆ ಬಿದ್ದಿದ್ದು ಯುವ ನಾಯಕನಿಗೆ ಬೆಂಬಲವಾಗಿ ನಿಲ್ಲಬೇಕಾದ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಕಳೆದ ‍ಪಂದ್ಯದಲ್ಲಿ ಬಟ್ಲರ್ (25), ದುಬೆ (23), ಪರಾಗ್‌ (25) ಮತ್ತು ಮನನ್ ವೊಹ್ರಾ (12) ಉತ್ತಮ ಆರಂಭ ಕಂಡಿದ್ದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಬ್ಯಾಟಿಂಗ್‌ ವಿಭಾಗ ಮೊದಲ ಪಂದ್ಯದಲ್ಲಿ ನಿರೀಕ್ಷೆ ಮೂಡಿಸಿದ್ದರೂ ಬೌಲರ್‌ಗಳ ನೀರಸ ಪ್ರದರ್ಶನ ತಂಡದ ಆಡಳಿತಕ್ಕೆ ನಿರಾಸೆ ಉಂಟುಮಾಡಿದೆ. ಚೇತನ್ ಸಕಾರಿಯಾ ಪದಾರ್ಪಣೆ ಪಂದ್ಯದಲ್ಲಿ ಮೂರು ವಿಕೆಟ್ ಉರುಳಿಸಿ ಮಿಂಚಿದ್ದಾರೆ. ಆದರೆ ಮುಸ್ತಫಿಜುರ್ ರಹಮಾನ್‌, ಕ್ರಿಸ್ ಮೊರಿಸ್‌, ಶ್ರೇಯಸ್ ಗೋಪಾಲ್‌ ಮತ್ತು ರಾಹುಲ್ ತೆವಾಥಿಯಾ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿರಲಿಲ್ಲ.

ಕಳೆದ ಆವೃತ್ತಿಯ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ ಈ ಬಾರಿಯೂ ಉತ್ತಮ ಆರಂಭ ಕಂಡಿದೆ. ಸವಾಲಿನ ಮೊತ್ತ ಬೆನ್ನತ್ತಿದ್ದರೂ ಶಿಖರ್‌ ಧವನ್ ಮತ್ತು ಪೃಥ್ವಿ ಶಾ ಸೊಗಸಾದ ಶತಕದ ಜೊತೆಯಾಟವಾಡಿದ್ದರು. ಕ್ರಿಸ್ ವೋಕ್ಸ್‌, ಆವೇಶ್ ಖಾನ್‌ ಮತ್ತು ರಿಷಭ್ ಪಂತ್ ಕೂಡ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ರವಿಚಂದ್ರನ್‌ ಅಶ್ವಿನ್‌, ಟಾಮ್ ಕರನ್‌, ಅಮಿತ್ ಮಿಶ್ರಾ ಮತ್ತು ಮಾರ್ಕಸ್ ಸ್ಟೋಯಿನಿಸ್‌ ವೈಫಲ್ಯ ಕಂಡಿದ್ದರು. ಹೀಗಾಗಿ ಗುರುವಾರ ತಮ್ಮ ನೈಜ ಸಾಮರ್ಥ್ಯ ತೋರುವ ಸವಾಲು ಅವರ ‌ಮೇಲಿದೆ.

ಪಂದ್ಯಗಳು 22

ರಾಜಸ್ಥಾನ್ ಜಯ 11
ಡೆಲ್ಲಿ ಗೆಲುವು 11

ಮುಖಾಮುಖಿಯಲ್ಲಿ ಗರಿಷ್ಠ ಮೊತ್ತ
ರಾಜಸ್ಥಾನ್ 201
ಡೆಲ್ಲಿ 196

ಕನಿಷ್ಠ ಮೊತ್ತ
ರಾಜಸ್ಥಾನ್ 115
ಡೆಲ್ಲಿ 60

ಆರಂಭ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT