ಶನಿವಾರ, ಅಕ್ಟೋಬರ್ 16, 2021
22 °C

IPL 2021: ಡೆಲ್ಲಿ ಟ್ರೋಫಿ ಕನಸು ಭಗ್ನ; ಚೆನ್ನೈ vs ಕೋಲ್ಕತ್ತ ಫೈನಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ. 

ಅಂತಿಮ ಹಂತದಲ್ಲಿ ಹಲವಾರು ನಾಟಕೀಯ ತಿರುವುಗಳನ್ನು ಪಡೆದ ಪಂದ್ಯದಲ್ಲಿ ಕೊನೆಗೂ ಇನ್ನೂ ಒಂದು ಎಸೆತ ಬಾಕಿ ಉಳಿದಿರುವಂತೆಯೇ ಕೋಲ್ಕತ್ತ ಸ್ಮರಣೀಯ ಗೆಲುವು ದಾಖಲಿಸಿತು. 

ಇದೀಗ ಅಕ್ಟೋಬರ್ 15 ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಕಳೆದ ಭಾನುವಾರ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ತಂಡವನ್ನು ಮಣಿಸಿದ್ದ ಸಿಎಸ್‌ಕೆ ಫೈನಲ್‌ಗೆ ಪ್ರವೇಶಿಸಿತ್ತು. 

ಅತ್ತ ಏಯಾನ್ ಮಾರ್ಗನ್ ಪಡೆಯು ಎಲಿಮಿನೇಟರ್‌‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ದಾಖಲಿಸಿತ್ತು. ಈಗ ಎರಡನೇ ಕ್ವಾಲಿಫೈಯರ್‌ನಲ್ಲಿ ಲೀಗ್ ಹಂತದ ಅಗ್ರಸ್ಥಾನಿ ಡೆಲ್ಲಿ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಇದರೊಂದಿಗೆ ಡೆಲ್ಲಿ ತಂಡದ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. 

ವರುಣ್ ಚಕ್ರವರ್ತಿ (26ಕ್ಕೆ 2 ವಿಕೆಟ್) ಸೇರಿದಂತೆ ಕೆಕೆಆರ್ ಬೌಲರ್‌ಗಳ ಪ್ರಭಾವಿ ದಾಳಿಗೆ ಸಿಲುಕಿದ ಡೆಲ್ಲಿ ತಂಡವು ಐದು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಿಧಾನಗತಿಯ ಆಟವಾಡಿದ ಡೆಲ್ಲಿ ಬ್ಯಾಟರ್‌ಗಳು ತಮ್ಮದೇ ತಪ್ಪಿಗಾಗಿ ದೊಡ್ಡ ಬೆಲೆ ತೆರಬೇಕಾಯಿತು. 

ಬಳಿಕ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕೆ ವೆಂಕಟೇಶ್ ಅಯ್ಯರ್ (55) ಹಾಗೂ ಶುಭಮನ್ ಗಿಲ್ (46) ಮೊದಲ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 

ಆದರೆ ಕೊನೆಯ ಹಂತದಲ್ಲಿ ಅಚ್ಚರಿಯ ಕುಸಿತ ಕಂಡು ಸೋಲಿನ ಭೀತಿಗೊಳಗಾಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ರಾಹುಲ್ ತ್ರಿಪಾಠಿ (12*) ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. 

ನಾಟಕೀಯ ತಿರುವು; ಕೆಕೆಆರ್‌ಗೆ ಗೆಲುವು... 
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕೆ ವೆಂಕಟೇಶ್ ಅಯ್ಯರ್ ಹಾಗೂ ಶುಭಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ 5.4 ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು. 

ಅತ್ತ ಅಯ್ಯರ್ ಕೇವಲ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಡೆಲ್ಲಿ ಬೌಲರ್‌ಗಳನ್ನು ಕಾಡಿದರು. ಎಚ್ಚರಿಕೆಯ ಜೊತೆಗೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಮೊದಲ ವಿಕೆಟ್‌ಗೆ 74 ಎಸೆತಗಳಲ್ಲಿ 96 ರನ್‌ಗಳ ಅಮೂಲ್ಯ ಜೊತೆಯಾಟವನ್ನು ಕಟ್ಟಿದರು. 41 ಎಸೆತಗಳನ್ನು ಎದುರಿಸಿದ ಅಯ್ಯರ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. 

ಈ ನಡುವೆ ನಿತೀಶ್ ರಾಣಾ (13) ವಿಕೆಟ್ ಪತನದೊಂದಿಗೆ ಕೆಕೆಆರ್ ಗೆಲುವಿಗೆ 24 ಎಸೆತಗಳಲ್ಲಿ ಕೇವಲ 13 ರನ್‌ಗಳ ಅಗತ್ಯವಿತ್ತು. ಪಂದ್ಯ ಇನ್ನೇನು ಸುಲಭದಲ್ಲಿ ಗೆಲ್ಲಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಏಕಾಏಕಿ ದಿಢೀರ್ ಪತನ ಕಂಡಿತ್ತು. 

ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್ (46) ಪೆವಿಲಿಯನ್‌ಗೆ ಮರಳಿದರು. ಬೆನ್ನಲ್ಲೇ ದಿನೇಶ್ ಕಾರ್ತಿಕ್, ನಾಯಕ ಏಯಾನ್ ಮಾರ್ಗನ್, ಶಕಿಬ್ ಅಲ್ ಹಸನ್ ಹಾಗೂ ಸುನಿಲ್ ನಾರಾಯಣ್ ಖಾತೆ ತೆರೆಯಲಾಗದೇ ಔಟ್ ಆದರು. ಈ ಮೂಲಕ ನಾಲ್ವರು ಬ್ಯಾಟರ್‌ಗಳು ಶೂನ್ಯದ ಸುರುಳಿ ಸುತ್ತಿದರು. 

ಆದರೆ ರವಿಚಂದ್ರನ್ ಅಶ್ವಿನ್ ಅವರ ಅಂತಿಮ ಓವರ್‌ನ ಐದನೇ ಎಸೆತವನ್ನು ಸಿಕ್ಸರ್‌ಗಟ್ಟಿದ ರಾಹುಲ್ ತ್ರಿಪಾಠಿ (12*) ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಪರಿಣಾಮ 19.5 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಡೆಲ್ಲಿ ಪರ ಏನ್ರಿಚ್ ನಾರ್ಕಿಯಾ, ಆರ್ ಅಶ್ವಿನ್ ಹಾಗೂ ಕಗಿಸೊ ರಬಾಡ ತಲಾ ಎರಡು ವಿಕೆಟ್ ಮತ್ತು ಆವೇಶ್ ಖಾನ್ ಒಂದು ವಿಕೆಟನ್ನು ಗಳಿಸಿದರು. 

ಚಕ್ರವರ್ತಿ ಮೋಡಿ, ಡೆಲ್ಲಿ 135/5
ಈ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಈ ವೇಳೆ ದಾಳಿಗಿಳಿದ ವರುಣ್ ಚಕ್ರವರ್ತಿ, ಅಪಾಯಕಾರಿ ಪೃಥ್ವಿ ಶಾ (18) ಅವರನ್ನು ಎಲ್‌ಬಿಡಬ್ಯು ಬಲೆಗೆ ಬೀಳಿಸಿ ಜೊತೆಯಾಟವನ್ನು ಮುರಿದರು. 

ಈ ಹಂತದಲ್ಲಿ ಜೊತೆಗೂಡಿದ ಶಿಖರ್ ಧವನ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ನಿಧಾನಗತಿಯಲ್ಲಿ ರನ್ ಪೇರಿಸಿರುವುದು ಹಿನ್ನೆಡೆಗೆ ಕಾರಣವಾಯಿತು. 10 ಓವರ್ ಅಂತ್ಯಕ್ಕೆ ಡೆಲ್ಲಿ ಒಂದು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು. ಬೆನ್ನಲ್ಲೇ ಮಾರ್ಕಸ್ ಸ್ಟೋಯಿನಿಸ್ 23 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. 

ಬಳಿಕ ಧವನ್ ಅವರಿಗೂ ಚಕ್ರವರ್ತಿ ಪೆವಿಲಿಯನ್ ಹಾದಿ ತೋರಿಸಿದರು. 39 ಎಸೆತಗಳನ್ನು ಎದುರಿಸಿದ ಧವನ್ 36 ರನ್ ಗಳಿಸಿದರು. 15 ಓವರ್‌ಗೆ ಮೂರು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು.

ಕೊನೆಯ ಹಂತದಲ್ಲಿ ನಾಯಕ ರಿಷಭ್ ಪಂತ್ (6) ಅವರಿಗೆ ಮಿಂಚಲು ಸಾಧ್ಯವಾಗಲಿಲ್ಲ. ಅತ್ತ ಶ್ರೇಯಸ್ ಅಯ್ಯರ್ ಹಾಗೂ ಶಿಮ್ರೊರ್ ಹೆಟ್ಮೆಯರ್ ಉಪಯುಕ್ತ ಕಾಣಿಕೆ ನೀಡುವ ಮೂಕ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. 

ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅಯ್ಯರ್ 27 ಎಸೆತಗಳಲ್ಲಿ 30 ರನ್ ಗಳಿಸಿ ಔಟಾಗದೆ ಉಳಿದರು. ಇನ್ನೊಂದೆಡೆ ಹೆಟ್ಮೆಯರ್ 10 ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ 17 ರನ್ ಗಳಿಸಿದರು. ಇನ್ನುಳಿದಂತೆ ಅಕ್ಷರ್ ಪಟೇಲ್ 4 ರನ್ ಗಳಿಸಿದರು. 

ಕೋಲ್ಕತ್ತ ಪರ 26 ರನ್ ತೆತ್ತ ಚಕ್ರವರ್ತಿ ಎರಡು ವಿಕೆಟ್ ಕಿತ್ತು ಮಿಂಚಿದರು. ಲಾಕಿ ಫರ್ಗ್ಯುಸನ್ ಹಾಗೂ ಶಿವಂ ಮಾವಿ ತಲಾ ಒಂದು ವಿಕೆಟ್ ಹಂಚಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು