ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ತ್ರಿಪಾಠಿ ಕ್ಯಾಚ್; ಕೆ.ಎಲ್. ರಾಹುಲ್ ಔಟ್ ಅಥವಾ ನಾಟೌಟ್?

Last Updated 2 ಅಕ್ಟೋಬರ್ 2021, 11:05 IST
ಅಕ್ಷರ ಗಾತ್ರ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಕ್ಯಾಚ್‌ಗೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ಭುಗಿಲೆದ್ದಿವೆ.

ರೋಚಕ ಹಂತದಲ್ಲಿ ಕೆಕೆಆರ್ ಬೌಲರ್ ಶಿವಂ ಮಾವಿ ಎಸೆದ ಇನ್ನಿಂಗ್ಸ್‌ನ 19ನೇ ಓವರ್‌ನ ಮೂರನೇ ಎಸೆತದಲ್ಲಿ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಹೊಡೆದ ಚೆಂಡನ್ನು ಫೀಲ್ಡರ್ ರಾಹುಲ್ ತ್ರಿಪಾಠಿ ಮುಂದಕ್ಕೆ ಡೈವ್ ಹೊಡೆದು ಹಿಡಿದಿದ್ದರು.

ಮೊದಲ ನೋಟಕ್ಕೆ ಎಲ್ಲರೂ ಔಟ್ ಎಂದು ಭಾವಿಸಿದ್ದರು. ರಾಹುಲ್ ತ್ರಿಪಾಠಿ ಕೂಡ ಸಹ ಆಟಗಾರರೊಂದಿಗೆ ಸಂಭ್ರಮವನ್ನು ಆಚರಿಸಿದರು.

ಬಳಿಕ ರಿಪ್ಲೇ ಪರಿಶೀಲಿಸಿದ ಮೂರನೇ ಅಂಪೈರ್‌, ಸ್ವಲ್ಪ ಹೊತ್ತಿನ ಬಳಿಕ ನಾಟೌಟ್ ಎಂದು ಘೋಷಿಸಿದ್ದರು. ಇದರಿಂದಾಗಿ ರಾಹುಲ್ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಯಿತು.

ಇದು ಮಾಜಿಗಳಿಂದ ಟೀಕೆಗೆ ಕಾರಣವಾಗಿದೆ. ಕೋಲ್ಕತ್ತ ತಂಡದ ಮಾಜಿ ನಾಯಕ ಗೌತಮ್ ಗಂಭೀರ್, ಈ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

'ನಿಜಕ್ಕೂ ಆಘಾತ ತಂದಿದೆ. ತಂಡವೊಂದರ ಅಭಿಯಾನವು ಇಲ್ಲಿಗೆ ಕೊನೆಗೊಳ್ಳುತ್ತಿತ್ತು. ಐಪಿಎಲ್‌ನಂತಹ ಟೂರ್ನಿಯಲ್ಲಿ ಅಂಪೈರ್‌ನಿಂದ ಇಂತಹ ತಪ್ಪು ಆಗಬಾರದು. ಕೇವಲ ಆಟಗಾರ ಮಾತ್ರವಲ್ಲ, ಇಡೀ ಫ್ರಾಂಚೈಸಿಗೆ ಇದರಿಂದ ಅನ್ಯಾಯವಾಗಿದೆ' ಎಂದು ಹೇಳಿದ್ದಾರೆ.

ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಕೂಡ ಧ್ವನಿಗೂಡಿಸಿದ್ದಾರೆ. 'ಇದು ನನ್ನ ಜೀವನದಲ್ಲಿ ನೋಡಿರುವ ಅತ್ಯಂತ ಕೆಟ್ಟ ನಿರ್ಣಯಗಳಲ್ಲಿ ಒಂದಾಗಿದೆ. ರಾಹುಲ್ ತ್ರಿಪಾಠಿ ಅದ್ಭುತ ಕ್ಯಾಚ್ ಹಿಡಿದಿದ್ದರು' ಎಂದು ಹೇಳಿದ್ದಾರೆ.

ಕೋಲ್ಕತ್ತ ನಾಯಕ ಏಯಾನ್ ಮಾರ್ಗನ್ ಕೂಡ ರಿಯಲ್ ಟೈಮ್ ನೋಡುವಾಗ ಔಟ್ ಎಂದು ಭಾಸವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂತಿಮವಾಗಿ ಕೆ.ಎಲ್. ರಾಹುಲ್ ಅರ್ಧಶತಕದ (67) ಬಲದೊಂದಿಗೆ ಕೆಕೆಆರ್ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಪಂಜಾಬ್, ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT