ಬುಧವಾರ, ಅಕ್ಟೋಬರ್ 20, 2021
28 °C
‘ದಕ್ಷಿಣ ಡರ್ಬಿ’ಯಲ್ಲಿ ವಿರಾಟ್ ಬಳಗಕ್ಕೆ ಧೋನಿ ಪಡೆಯ ಸವಾಲು

RCB vs CSK: ಬೆಂಗಳೂರಿಗೆ ಚೆನ್ನೈ ಚಾಲೆಂಜ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ತಾರೆಗಳ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಗೆಲುವಿನ ಹಳಿಗೆ ಮರಳುವ ಒತ್ತಡವಿದೆ.

ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ‘ಕ್ಯಾಪ್ಟನ್ ಕೂಲ್’ ಮಹೇಂದ್ರಸಿಂಗ್  ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ವಿರಾಟ್ ಕೊಹ್ಲಿ ಬಳಗವು ಎದುರಿಸಲಿದೆ.  14ನೇ ಆವೃತ್ತಿಯ ಎರಡನೇ ಹಂತದ ತನ್ನ ಮೊದಲ ಪಂದ್ಯದಲ್ಲಿ‘ಚಾಂಪಿಯನ್’ ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಜಯ ಸಾಧಿಸಿದ್ದ ಚೆನ್ನೈ ತಂಡವು ಈಗ ಪ್ಲೇಆಫ್ ಪ್ರವೇಶದ ಬಾಗಿಲಿಗೆ ಬಂದು ನಿಂತಿದೆ.  ಆ ಪಂದ್ಯದಲ್ಲಿ ದಿಗ್ಗಜ ಆಟಗಾರರು ಮುಗ್ಗರಿಸಿದ್ದರೂ ಯುವ ಪ್ರತಿಭೆ ಋತುರಾಜ್ ಗಾಯಕವಾಡ್ ದಿಟ್ಟ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿದ್ದರು.

ಆದರೆ, ಕೋಲ್ಕತ್ತ ನೈಟ್ ರೈಡರ್ಸ್ ಎದುರು ಹೀನಾಯವಾಗಿ ಸೋತಿರುವ ಆರ್‌ಸಿಬಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ವಿರಾಟ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್ ವೈಫಲ್ಯ ಕಾಡಿತ್ತು. ಅದರಿಂದಾಗಿ ಎದುರಾಳಿ ತಂಡಕ್ಕೆ 92 ರನ್‌ಗಳ ಅಲ್ಪಮೊತ್ತದ ಗುರಿ ನೀಡಿತ್ತು.

ಆದರೂ ಪುಟಿದೇಳುವ ಸಾಮರ್ಥ್ಯ ಇರುವ ಆರ್‌ಸಿಬಿಗೆ ಪ್ಲೇ ಆಫ್‌ ಹಾದಿ ದೂರವೇನಿಲ್ಲ. ಎಂಟು ಪಂದ್ಯಗಳಲ್ಲಿ ಐದು ಗೆದ್ದಿರುವ ವಿರಾಟ್ ಬಳಗವು ಹತ್ತು ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೂ ಆರು ಪಂದ್ಯಗಳಲ್ಲಿ ಆಡಬೇಕಿದ್ದು ಕನಿಷ್ಟ ನಾಲ್ಕರಲ್ಲಿ ಜಯಿಸಿದರೆ ಹಾದಿ ಸುಗಮವಾಗುತ್ತದೆ. 

ವಿರಾಟ್ ಮತ್ತು ದೇವದತ್ತ ಪಡಿಕ್ಕಲ್ ಈ ಟೂರ್ನಿಯಲ್ಲಿ ಈಗಾಗಲೇ ತಲಾ ಇನ್ನೂರಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಇವರಿಬ್ಬರು ಉತ್ತಮ ಆರಂಭ ನೀಡಿದರೆ, ಮುಂದಿನ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಕಲೆಹಾಕಬಹುದು. ಎಬಿಡಿ ಮತ್ತು ಮ್ಯಾಕ್ಸ್‌ವೆಲ್ ತಮ್ಮ ಲಯಕ್ಕೆ ಮರಳಿದರೆ ಮಧ್ಯಮಕ್ರಮಾಂಕ ಬಲಾಢ್ಯವಾಗುವುದರಲ್ಲಿ ಸಂಶಯವಿಲ್ಲ.  ಮೊದಲ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಆರ್‌ಸಿಬಿ ಸೋತಿತ್ತು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ, ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ ಅವರ ಬೌಲಿಂಗ್ ಮುಂದೆ ಶರಣಾಗಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿ ಬಂದಿರುವ ಶಾರ್ದೂಲ್ ಠಾಕೂರ್, ದೀಪಕ್ ಚಾಹರ್  ಅವರ ರಿವರ್ಸ್ ಸ್ವಿಂಗ್ ಎಸೆತಗಳೂ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡಬಲ್ಲವು. ಚೆನ್ನೈನ ಅಂಬಟಿ ರಾಯುಡು, ಫಫ್ ಡುಪ್ಲೆಸಿ, ರವೀಂದ್ರ ಜಡೇಜ, ಋತುರಾಜ್, ಡ್ವೆನ್ ಬ್ರಾವೊ, ಸುರೇಶ್ ರೈನಾ  ಮತ್ತು ಧೋನಿ ಅವರ ಅಬ್ಬರದ ಬ್ಯಾಟಿಂಗ್‌ಗೆ ತಡೆಯೊಡ್ಡುವ ಸವಾಲೂ ಬೆಂಗಳೂರು ಬೌಲರ್‌ಗಳ ಮುಂದಿದೆ.

ಸ್ಪಿನ್ನರ್ ಯಜುವೇಂದ್ರ ಚಾಹಲ್, ಹೆಚ್ಚು ವಿಕೆಟ್ ಗಳಿಸಿರುವ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಕೈಲ್ ಜೆಮಿಸನ್ ಅವರು ಚೆನ್ನೈ ‘ಅನುಭವಿ’ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರೆ ಗೆಲುವಿನ ಹಾದಿ ಸುಗಮವಾಗಬಹುದು.

ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಶ್ರೀಕರ್ ಭರತ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಕೈಲ್ ಜೆಮಿಸನ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ನವದೀಪ್ ಸೈನಿ, ಸಚಿನ್ ಬೇಬಿ, ವನಿಂದು ಹಸರಂಗ, ಪವನ್ ದೇಶಪಾಂಡೆ, ರಜಗ್ ಪಾಟೀದಾರ್, ಡ್ಯಾನ್ ಕ್ರಿಸ್ಟಿಯನ್, ಮೊಹಮ್ಮದ್ ಅಜರುದ್ದೀನ್.

ಚೆ್ನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ), ಋತುರಾಜ್ ಗಾಯಕವಾಡ್, ಮೊಯಿನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ಡ್ವೆನ್ ಬ್ರಾವೊ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಲುಂಗಿ ಗಿಡಿ, ದೀಪಕ್ ಚಾಹರ್, ಇಮ್ರಾನ್ ತಾಹೀರ್, ಫಫ್ ಡುಪ್ಲೆಸಿ, ರಾಬಿನ್ ಉತ್ತಪ್ಪ, ಕೆ. ಗೌತಮ್, ಚೇತೇಶ್ವರ್ ಪೂಜಾರ, ಕರ್ಣ ಶರ್ಮಾ, ಮಿಷೆಲ್ ಸ್ಯಾಂಟನರ್,

ಬಲಾಬಲ
ಪಂದ್ಯ;
27
ಚೆನ್ನೈ ಜಯ; 18
ಬೆಂಗಳೂರು ಜಯ;

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು