ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಡೆಲ್ಲಿ ಗೆಲುವನ್ನು ಕಸಿದುಕೊಂಡ ಮಿಲ್ಲರ್, ಮೋರಿಸ್

Last Updated 15 ಏಪ್ರಿಲ್ 2021, 18:14 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಐಪಿಎಲ್ 2021ನೇ ಸಾಲಿನಲ್ಲಿ ಮೊದಲ ಗೆಲುವು ಬಾರಿಸಿದೆ. ಇಬ್ಬರು ಯುವ ವಿಕೆಟ್ ಕೀಪರ್-ನಾಯಕರ ಕದನದಲ್ಲಿ ರಿಷಭ್ ಪಂತ್ ವಿರುದ್ಧ ಸಂಜು ಸ್ಯಾಮ್ಸನ್ ಮೇಲುಗೈ ಸಾಧಿಸಿದ್ದಾರೆ.

ಒಂದು ಹಂತದಲ್ಲಿ ರಾಜಸ್ಥಾನ ಹೀನಾಯವಾಗಿ ಶರಣಾಗಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಡೇವಿಡ್ ಮಿಲ್ಲರ್ (62) ಹಾಗೂ ಕ್ರಿಸ್ ಮೋರಿಸ್ (36*) ಫಿನಿಶಿಂಗ್ ಟಚ್ ನೀಡುವ ಮೂಲಕ ರಾಜಸ್ಥಾನ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಐಪಿಎಲ್‌ನ ಅತಿ ದುಬಾರಿ ಆಟಗಾರ ಕ್ರಿಸ್ ಮೋರಿಸ್ಗೆಲುವಿನ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಈ ಮೊದಲು ಜೈದೇವ್ ಉನಾದ್ಕಟ್ (15ರನ್ನಿಗ್ 3 ವಿಕೆಟ್) ಮೂರು ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಅತ್ತ ಡೆಲ್ಲಿ ನಾಯಕ ರಿಷಭ್ ಪಂತ್ (51) ಹೋರಾಟವು ವ್ಯರ್ಥವೆನಿಸಿತ್ತು.

ರಾಜಸ್ಥಾನ್ ಗೆಲುವಿನಲ್ಲಿ ದಕ್ಷಿಣ ಆಫ್ರಿಕಾ ಆಟಗಾರರ ಕೊಡುಗೆ...
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ರಾಜಸ್ಥಾನ್, 17 ರನ್ ಗಳಿಸುವುದರೆಡೆಗೆ ಮನನ್ ವೋಹ್ರಾ (9), ಜೋಸ್ ಬಟ್ಲರ್ (2) ಹಾಗೂ ಕಳೆದ ಪಂದ್ಯದ ಶತಕವೀರ ನಾಯಕ ಸಂಜು ಸ್ಯಾಮ್ಸನ್ (4) ವಿಕೆಟ್‌‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಪವರ್ ಪ್ಲೇ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ ಕೇವಲ 26 ರನ್ ಮಾತ್ರ ಗಳಿಸಿತ್ತು.

ಇಲ್ಲಿಗೂ ರಾಜಸ್ಥಾನ್ ಪರದಾಟ ನಿಲ್ಲಲಿಲ್ಲ. ಡೆಲ್ಲಿ ವೇಗಿಗಳಾದ ಕ್ರಿಸ್ ವೇಕ್ಸ್, ಕಗಿಸೋ ರಬಡ ಹಾಗೂ ಆವೇಶ್ ಖಾನ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ಪರಿಣಾಮ ಶಿವಂ ದುಬೆ (2) ಹಾಗೂ ರಿಯಾನ್ ಪರಾಗ್ (2) ನಿರಾಸೆ ಮೂಡಿಸುವುದರೊಂದಿಗೆ 42 ರನ್ನಿಗೆ ಅರ್ಧ ತಂಡವು ಪೆವಿಲಿಯನ್‌‌ಗೆ ಮರಳಿತ್ತು.

ಈ ಹಂತದಲ್ಲಿ ಜೊತೆಗೂಡಿದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೆವಾತಿಯಾ ತಂಡವನ್ನು ಮುನ್ನಡೆಸಿದರು. ಇವರಿಬ್ಬರು ನಿರ್ಣಾಯಕ 48 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ತೆವಾತಿಯಾ ವಿಕೆಟ್ ಪತನಗೊಳ್ಳುತ್ತಿದ್ದಂತೆಯೇ ರಾಜಸ್ಥಾನ್ ತಂಡವು 90 ರನ್ನಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಅತ್ತ ದಿಟ್ಟ ಹೋರಾಟ ನೀಡಿದ ಮಿಲ್ಲರ್ 40 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಮಿಲ್ಲರ್ ವಿಕೆಟ್ ಪತನದೊಂದಿಗೆ ರಾಜಸ್ಥಾನ್ ಮಗದೊಮ್ಮೆ ಹಿನ್ನೆಡೆ ಅನುಭವಿಸಿತು. 43 ಎಸೆತಗಳನ್ನು ಎದುರಿಸಿದ ಮಿಲ್ಲರ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು.

ಆದರೆ ಮುರಿಯದ ಎಂಟನೇ ವಿಕೆಟ್‌ಗೆ ಜೈದೇವ್ ಉನಾದ್ಕಟ್ (11*) ಅವರೊಂದಿಗೆ 46 ರನ್‌‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನೀಡಿದ ಕ್ರಿಸ್ ಮೋರಿಸ್, ಪಂದ್ಯದ ತಾರೆ ಎನಿಸಿದರು. ಗೆಲುವಿನ ಸಿಕ್ಸರ್ ಸಿಡಿಸಿದ ಮೋರಿಸ್ ಕೇವಲ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 36 ರನ್ ಗಳಿಸಿ ಔಟಾಗದೆ ಉಳಿದರು.

ಅಂತಿಮ ಎರಡು ಓವರ್‌ನಲ್ಲಿ 27 ಹಾಗೂ ಕೊನೆಯ ಓವರ್‌ನಲ್ಲಿ 12ರನ್‌ಗಳ ಅವಶ್ಯಕತೆಯಿತ್ತು. ಆದರೆ ಡೆಲ್ಲಿ ಬೌಲರ್‌ಗಳನ್ನು ಧೂಳೀಪಟಗೈದ ಮೋರಿಸ್, 19.4 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ರೋಚಕ ಗೆಲುವು ದಾಖಲಿಸಲು ನೆರವಾದರು. ಡೆಲ್ಲಿ ಪರ ಆವೇಶ್ ಮೂರು ಮತ್ತು ವೋಕ್ಸ್ ಹಾಗೂ ರಬಡ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಉನಾದ್ಕಟ್ ತ್ರಿವಳಿ ಆಘಾತ, ಡೆಲ್ಲಿ ಸಾಧಾರಣ ಮೊತ್ತ...
ಈ ಮೂದಲು ನಾಯಕರಾಗಿ ರಿಷಭ್ ಪಂತ್ ಚೊಚ್ಚಲ ಅರ್ಧಶತಕದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ 147 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಕಳೆದ ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಜೈದೇವ್ ಉನಾದ್ಕಟ್ ಪವರ್ ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ತ್ರಿಬಲ್ ಆಘಾತವನ್ನು ನೀಡಿದರು. ತಂಡವು 36 ರನ್ ಗಳಿಸುವಷ್ಟರಲ್ಲಿ ಪೃಥ್ವಿ ಶಾ (2), ಶಿಖರ್ ಧವನ್ (9) ಹಾಗೂ ಅಜಿಂಕ್ಯ ರಹಾನೆ (8) ಪೆವಿಲಿಯನ್‌ಗೆ ಸೇರಿದರು.

ಮಾರ್ಕಸ್ ಸ್ಟೊಯಿನಿಸ್ ಖಾತೆ ತೆರೆಯುವಲ್ಲಿ ವಿಫಲವಾದರು. ಈ ಹಂತದಲ್ಲಿ ಪದಾರ್ಪಣೆ ಆಟಗಾರ ಲಲಿತ್ ಯಾದವ್ ಜೊತೆಗೂಡಿದ ನಾಯಕ ರಿಷಭ್ ಪಂತ್ ತಂಡವನ್ನು ಮುನ್ನಡೆಸಿದರು. ಇವರಿಬ್ಬರು ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

30 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ ಪಂತ್, ನಾಯಕರಾದ ಎರಡನೇ ಪಂದ್ಯದಲ್ಲೇ ಫಿಫ್ಟಿ ಗೆರೆ ದಾಟಿದರು. ಆದರೆ ಅರ್ಧಶತಕದ ಬೆನ್ನಲ್ಲೇ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. 32 ಎಸೆತಗಳನ್ನು ಎದುರಿಸಿದ ಪಂತ್ ಒಂಬತ್ತು ಬೌಂಡರಿಗಳಿಂದ 51 ರನ್ ಗಳಿಸಿದರು.

ಅಂತಿಮವಾಗಿ ಡೆಲ್ಲಿ ತಂಡವು ಎಂಟು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪದಾರ್ಪಣೆ ಪಂದ್ಯದಲ್ಲಿ ಲಲಿತ್ ಯಾದವ್ 20 ರನ್ ಗಳಿಸಿ ಪ್ರಭಾವಿ ಎನಿಸಿದರು. ಟಾಮ್ ಕರನ್ 20 ಹಾಗೂ ಕ್ರಿಸ್ ವೋಕ್ಸ್ ಅಜೇಯ 15 ರನ್ ಗಳಿಸಿದರು. ಇನ್ನುಳಿದಂತೆ. ಆರ್. ಅಶ್ವಿನ್ 7 ಹಾಗೂ ಕಗಿಸೋ ರಬಡ 9 ರನ್ ಗಳಿಸಿ ಅಜೇಯರಾಗುಳಿದರು.

ರಾಜಸ್ಥಾನ್ ಪರ ಕೇವಲ 15 ರನ್ ತೆತ್ತ ಜೈದೇವ್ ಉನಾದ್ಕಟ್ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಮುಸ್ತಾಫಿಜುರ್ ರಹಮಾನ್ ಎರಡು ಮತ್ತು ಕ್ರಿಸ್ ಮೋರಿಸ್ ಒಂದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT