ಸೋಮವಾರ, ಮೇ 16, 2022
24 °C

IPL 2022 DC vs PBKS: ಡೆಲ್ಲಿಗೆ ಭರ್ಜರಿ ಗೆಲುವು, ಪಂಜಾಬ್ ತತ್ತರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಮೊದಲು ಡೆಲ್ಲಿ ಬೌಲರ್‌ಗಳ ಸಾಂಘಿಕ ದಾಳಿಗೆ ತತ್ತರಿಸಿದ ಪಂಜಾಬ್ ಕೇವಲ 115 ರನ್ನಿಗೆ ಆಲೌಟ್ ಆಯಿತು. ಬಳಿಕ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 10.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಶಾ ಹಾಗೂ ವಾರ್ನರ್ 39 ಎಸೆತಗಳಲ್ಲಿ 83 ರನ್‌ಗಳ ಜೊತೆಯಾಟ ಕಟ್ಟಿ ಡೆಲ್ಲಿ ಗೆಲುವನ್ನು ಸುಲಭಗೊಳಿಸಿದರು.

ಡೇವಿಡ್ ವಾರ್ನರ್ ಸತತ ಮೂರನೇ ಅರ್ಧಶತಕ ( ಅಜೇಯ 60 ರನ್, 30 ಎಸೆತ, 10 ಬೌಂಡರಿ, 1 ಸಿಕ್ಸರ್) ಸಾಧನೆ ಮಾಡಿದರು. ಅಲ್ಲದೆ ಐಪಿಎಲ್ ಟೂರ್ನಿ ಇತಿಹಾಸದಲ್ಲಿ ದಾಖಲೆಯ 53ನೇ ಅರ್ಧಶತಕ ಗಳಿಸಿದರು.  ಪೃಥ್ವಿ ಶಾ 41 (20 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಸರ್ಫರಾಜ್ ಖಾನ್ 12* ರನ್ ಗಳಿಸಿದರು. 

ಇದರೊಂದಿಗೆ ಡೆಲ್ಲಿ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಪಂಜಾಬ್ ಏಳು ಪಂದ್ಯಗಳಲ್ಲಿ ನಾಲ್ಕನೇ ಸೋಲಿಗೆ ಶರಣಾಗಿದೆ. 

ಕೆಲವು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಡೆಲ್ಲಿ ಪಾಳಯದಲ್ಲಿ ಆತಂಕ ಮಡುಗಟ್ಟಿತ್ತು. ಈ ಎಲ್ಲ ಮಾನಸಿಕ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ರಿಷಭ್ ಪಂತ್ ಪಡೆ ಯಶಸ್ವಿಯಾಗಿದೆ. 

ಹಳಿ ತಪ್ಪಿದ ಪಂಜಾಬ್...

ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳ ನಿಖರ ದಾಳಿಗೆ ನಲುಗಿದ  ಪಂಜಾಬ್ ಕಿಂಗ್ಸ್, ನಿಗದಿತ 20 ಓವರ್‌ಗಳಲ್ಲಿ 115 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.  

ಪಂಜಾಬ್ ಪರ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ ಗರಿಷ್ಠ 32 ರನ್ (23 ಎಸೆತ, 5 ಬೌಂಡರಿ) ಗಳಿಸಿದರು. 

ನಾಯಕ ಮಯಂಕ್ ಅಗರವಾಲ್ (25) ತಂಡಕ್ಕೆ ಮರಳಿದರೂ ಪ್ರಭಾವಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನುಭವಿ ಶಿಖರ್ ಧವನ್ ಹಾಗೂ ಜಾನಿ ಬೆಸ್ಟೊ ತಲಾ ಒಂಬತ್ತು ರನ್ ಗಳಿಸಿ ಔಟ್ ಆದರು. 

ಉತ್ತಮ ಬ್ಯಾಟಿಂಗ್ ಲಯದಲ್ಲಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಾರೂಕ್ ಖಾನ್ (12), ಕಗಿಸೊ ರಬಾಡ (2) ಹಾಗೂ ನಥನ್ ಎಲ್ಲಿಸ್ (0) ನಿರಾಸೆ ಮೂಡಿಸಿದರು. 

ಇನ್ನುಳಿದಂತೆ ರಾಹುಲ್ ಚಾಹರ್ 12, ಅರ್ಷದೀಪ್ ಸಿಂಗ್  9 ಹಾಗೂ ವೈಭವ್ ಅರೋರಾ 2 ರನ್ ಗಳಿಸಿದರು. 

ಡೆಲ್ಲಿ ಪರ ಖಲೀಲ್ ಅಹ್ಮದ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡು ವಿಕೆಟ್ ಕಬಳಿಸಿದರು. 
 

ಡೆಲ್ಲಿ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. 

ಇದನ್ನೂ ಓದಿ: 

ಡೆಲ್ಲಿ ಪಾಳಯದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿ ಮಾಡಿತ್ತು. ಆದರೆ ಪಂದ್ಯ ನಿಗದಿಯಂತೆ ನಡೆಯುತ್ತಿದೆ. 

ಹನ್ನೊಂದರ ಬಳಗ:

ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್‌ನಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪಂದ್ಯವನ್ನು ಪುಣೆಯಿಂದ ಮುಂಬೈನ ಬ್ರೆಬೊರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. 

ಡೆಲ್ಲಿ ತಂಡವು ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದೆ. ಮೂರರಲ್ಲಿ ಸೋತಿದೆ.  ಪಂಜಾಬ್ ತಂಡವು 6 ಪಂದ್ಯಗಳಲ್ಲಿ ಆಡಿ 3ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಹೋದ ಪಂದ್ಯದಲ್ಲಿ ಗಾಯಗೊಂಡು ಹೊರಗುಳಿದಿದ್ದ ನಾಯಕ ಮಯಂಕ್ ಅಗರವಾಲ್ ಈ ಪಂದ್ಯಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು