ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 KKR vs SRH: ರಸೆಲ್ ಆಲ್‌ರೌಂಡ್ ಆಟ; ಕೆಕೆಆರ್‌ಗೆ ಭರ್ಜರಿ ಗೆಲುವು

ಅಕ್ಷರ ಗಾತ್ರ

ಪುಣೆ: ಆ್ಯಂಡ್ರೆ ರಸೆಲ್ ಆಲ್‌ರೌಂಡ್ ಆಟದ (ಅಜೇಯ 49 ಹಾಗೂ 3 ವಿಕೆಟ್) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಆ್ಯಂಡ್ರೆ ರಸೆಲ್ (49*) ಅಮೋಘ ಆಟದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತ್ತು.

ಬಳಿಕ ರಸೆಲ್ ಸೇರಿದಂತೆ ಕೆಕೆಆರ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಹೈದರಾಬಾದ್, ಎಂಟು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ ಕೆಕೆಆರ್, 13 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿದ್ದು, ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಅಲ್ಲದೆ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿದೆ.

ಅತ್ತ ಹೈದರಾಬಾದ್, 12 ಪಂದ್ಯಗಳಲ್ಲಿ ಏಳನೇ ಸೋಲಿಗೆ ಶರಣಾಗಿದ್ದು, ಎಂಟನೇ ಸ್ಥಾನದಲ್ಲಿದೆ.

ಸವಾಲಿನ ಮೊತ್ತ ಬೆನ್ನಟ್ಟಿದ ಹೈದರಾಬಾದ್‌ಗೆ ಅಭಿಷೇಕ್ ಶರ್ಮಾ ಉತ್ತಮ ಆರಂಭವೊದಗಿಸಿದರು. ಈ ನಡುವೆ ನಾಯಕ ಕೇನ್ ವಿಲಿಯಮ್ಸನ್ (9) ಹಾಗೂ ತ್ರಿಪಾಠಿ (9) ವಿಕೆಟ್ ನಷ್ಟವಾಯಿತು.

ಅತ್ತ ಬಿರುಸಿನ ಬ್ಯಾಟಿಂಗ್ ಮಾಡಿದ ಅಭಿಷೇಕ್, ಅರ್ಧಶತಕದ ಅಂಚಿನಲ್ಲಿ ಎಡವಿದರು. 28 ಎಸೆತಗಳನ್ನು ಎದುರಿಸಿದ ಅಭಿಷೇಕ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು.

ನಿಕೋಲಸ್ ಪೂರನ್ (2) ವೈಫಲ್ಯ ಅನುಭವಿಸಿದರು. ಈ ಮಧ್ಯೆ ಏಡನ್ ಮಾರ್ಕರಮ್ ಸಹ 32 ರನ್‌ಗಳ ಕಾಣಿಕೆ ನೀಡಿದರು.

ಆದರೆ ನಿಯತವಾಗಿ ವಿಕೆಟ್ ಕಳೆದುಕೊಂಡಿರುವುದು ಹಿನ್ನಡೆಗೆ ಕಾರಣವಾಯಿತು. ಪರಿಣಾಮ 14.4 ಓವರ್‌ಗಳಲ್ಲಿ 99 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇಲ್ಲಿಂದ ಬಳಿಕ ಎಸ್‌ಆರ್‌ಎಚ್ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೆಕೆಆರ್ ಪರ ರಸೆಲ್ 22 ರನ್ ತೆತ್ತು ಮೂರು ವಿಕೆಟ್ ಕಿತ್ತು ಮಿಂಚಿದರು.

ರಸೆಲ್ ಅಬ್ಬರ; ಕೆಕೆಆರ್ ಸವಾಲಿನ ಮೊತ್ತ...

ಈ ಮೊದಲು ಆ್ಯಂಡ್ರೆ ರಸೆಲ್ ಉಪಯುಕ್ತ ಬ್ಯಾಟಿಂಗ್ (49*) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಆರುವಿಕೆಟ್ ನಷ್ಟಕ್ಕೆ 177ರನ್ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ವೆಂಕಟೇಶ್ ಅಯ್ಯರ್ (7) ಬೇಗನೇ ನಿರ್ಗಮಿಸಿದರು.

ಅಜಿಂಕ್ಯ ರಹಾನೆ (28) ಹಾಗೂ ನಿತೀಶ್ ರಾಣಾ (26) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಈ ನಡುವೆ ನಿಖರ ದಾಳಿ ಸಂಘಟಿಸಿದ ಉಮ್ರಾನ್ ಮಲಿಕ್, ಕೆಕೆಆರ್‌ಗೆ ಪೆಟ್ಟು ಕೊಟ್ಟರು. ನಾಯಕ ಶ್ರೇಯಸ್ ಅಯ್ಯರ್ (15) ಹಾಗೂ ರಿಂಕು ಸಿಂಗ್ (5) ಪತನದೊಂದಿಗೆ 11.3 ಓವರ್‌ಗಳಲ್ಲಿ 94 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಕೆಕೆಆರ್ ಇನ್ನಿಂಗ್ಸ್‌ನ ದ್ವಿತೀಯಾರ್ಧದಲ್ಲಿ ಮಹತ್ವದ ಅರ್ಧಶತಕದ ಜೊತೆಯಾಟ ಕಟ್ಟಿದ ಆ್ಯಂಡ್ರೆ ರಸೆಲ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್, ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಈ ನಡುವೆ ರಸೆಲ್ ಐಪಿಎಲ್‌ನಲ್ಲಿ 2000 ರನ್ ಸಾಧನೆ ಮಾಡಿದರು. ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದ ರಸೆಲ್, 28 ಎಸೆತಗಳಲ್ಲಿ 49 ರನ್ (4 ಸಿಕ್ಸರ್, 3 ಬೌಂಡರಿ) ಗಳಿಸಿ ಔಟಾಗದೆ ಉಳಿದರು.

ಈ ಮೂಲಕಕೆಕೆಆರ್ ಆರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.ಅವರಿಗೆ ತಕ್ಕ ಸಾಥ್ ನೀಡಿದ ಸ್ಯಾಮ್ 34 ರನ್ ಗಳಿಸಿದರು.

ಹೈದರಾಬಾದ್ ಪರ ಉಮ್ರಾನ್ ಮಲಿಕ್, 33 ರನ್ ತೆತ್ತು ಮೂರು ವಿಕೆಟ್ ಕಬಳಿಸಿದರು.

ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್...

ಈ ಮೊದಲು ಟಾಸ್ ಗೆದ್ದಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಪ್ಲೇ-ಆಫ್ ಪ್ರವೇಶದ ಹಾದಿಯಲ್ಲಿ ಇತ್ತಂಡಗಳ ಪಾಲಿಗೂ ಈ ಪಂದ್ಯ ನಿರ್ಣಾಯಕವೆನಿಸಿದೆ. ಗೆದ್ದರೆ ಪ್ಲೇ-ಆಫ್ ಕನಸು ಜೀವಂತವಾಗಿರಿಸಲಿದೆ. ಸೋತರೆ ಕನಸು ಬಹುತೇಕ ಅಸ್ತಮಿಸಲಿದೆ.

ಹೈದರಾಬಾದ್ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಅತ್ತ ಎಂಟನೇ ಸ್ಥಾನದಲ್ಲಿರುವ ಕೆಕೆಆರ್, 12 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ 10 ಅಂಕ ಗಳಿಸಿದೆ.

ಎಲ್ಲ 14 ಪಂದ್ಯಗಳ ಬಳಿಕ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಿವೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT