ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL2024 CSK vs KKR: ಕೋಲ್ಕತ್ತ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಜಡೇಜ ದಾಳಿಗೆ ಕುಸಿದ ಕೆಕೆಆರ್‌: ಋತುರಾಜ್‌ ಅಜೇಯ ಅರ್ಧಶತಕ
Published 8 ಏಪ್ರಿಲ್ 2024, 17:43 IST
Last Updated 8 ಏಪ್ರಿಲ್ 2024, 17:43 IST
ಅಕ್ಷರ ಗಾತ್ರ

ಚೆನ್ನೈ: ಸ್ಪಿನ್ ಮತ್ತು ವೇಗದ ಬೌಲರ್‌ಗಳ ಉತ್ತಮ ಪ್ರದರ್ಶನದ ನಂತರ ನಾಯಕ ಋತುರಾಜ್ ಗಾಯಕವಾಡ (ಔಟಾಗದೇ 67; 58ಎ, 4x9) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು ಸೋಲಿಸಿತು.

ರವೀಂದ್ರ ಜಡೇಜ (18ಕ್ಕೆ3) ನೇತೃತ್ವದಲ್ಲಿ ಸ್ಪಿನ್ನರ್‌ಗಳು ಕೋಲ್ಕತ್ತ ಕುಸಿತಕ್ಕೆ ನಾಂದಿಹಾಡಿದರೆ, ವೇಗದ ಬೌಲರ್‌ಗಳಾದ ತುಷಾರ್ ದೇಶಪಾಂಡೆ (33ಕ್ಕೆ 3) ಮತ್ತು ಮುಸ್ತಫಿಜುರ್‌ ರೆಹಮಾನ್ (22ಕ್ಕೆ 2) ಅವರು ಕೋಲ್ಕತ್ತ ದೊಡ್ಡ ಮೊತ್ತ ಗಳಿಸದಂತೆ ತಡೆಹಾಕಿದರು. ಇದರಿಂದ, ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಕೋಲ್ಕತ್ತ ತಂಡ 9 ವಿಕೆಟ್‌ಗೆ 137 ರನ್‌ಗಳ ಅಲ್ಪ ಮೊತ್ತ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಆತಿಥೇಯರು 14 ಎಸೆತ ಬಾಕಿ ಇರುವಂತೆ ಮೂರು ವಿಕೆಟ್‌ ನಷ್ಟದಲ್ಲಿ 141 ರನ್‌ ಗಳಿಸಿದರು. ಇದರಿಂದ ಸತತ ಮೂರನೇ ಸೋಲನ್ನು ತಪ್ಪಿಸಿಕೊಂಡರು.

ರಚಿನ್ ರವೀಂದ್ರ (15) ಅವರನ್ನು ಮೂರನೇ ಓವರ್‌ನಲ್ಲಿ ಕಳೆದುಕೊಂಡ ಚೆನ್ನೈ ತಂಡಕ್ಕೆ ಗಾಯಕವಾಡ ಮತ್ತು ಡೇರಿಲ್‌ ಮಿಚೆಲ್‌ (25) ಅವರು 70 ರನ್‌ಗಳ ಎರಡನೇ ವಿಕೆಟ್‌ ಜೊತೆಯಾಟ ಮೂಲಕ ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಗುರಿ ಹತ್ತಿರವಿರುವಾಗ ಶಿವಂ ದುಬೆ (28) ನಿರ್ಗಮಿಸಿದರು.

ಇದಕ್ಕೆ ಮೊದಲು, ಚೆನ್ನೈನ ಅನುಭವಿ ಸ್ಪಿನ್ನರ್‌ ರವೀಂದ್ರ ಜಡೇಜ ಎಂಟು ಎಸೆತಗಳ ಅಂತರದಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ಕೋಲ್ಕತ್ತ ನೈಟ್‌ ರೈಡರ್ಸ್‌ಗೆ ಬಲವಾದ ಪೆಟ್ಟು ನೀಡಿದ್ದರು. ಜಡೇಜ, ಮಹೀಷ ತೀಕ್ಷಣ ಮತ್ತು ರಚಿನ್ ರವೀಂದ್ರ ಒಟ್ಟು 9 ಓವರ್‌ಗಳಲ್ಲಿ 50 ರನ್ ಮಾತ್ರ ನೀಡಿದರು. 4 ವಿಕೆಟ್‌ಗಳನ್ನೂ ಪಡೆದರು. ಕೊನೆಯಲ್ಲಿ ವೇಗದ ಬೌಲರ್‌ಗಳೂ ಮಿಂಚಿದರು. ಪ್ರಬಲ ಬ್ಯಾಟಿಂಗ್ ಸರದಿ ಹೊಂದಿದ್ದ ಕೆಕೆಆರ್ ತಂಡ ಪವರ್‌ಪ್ಲೇ ನಂತರ ತಿಣುಕಾಡಿತು.

ತುಷಾರ್‌ ಅವರ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಫಿಲ್‌ ಸಾಲ್ಟ್‌ ಅವರ ವಿಕೆಟ್‌ ಪಡೆದರು. ಆದರೆ ಉತ್ತಮ ಲಯದಲ್ಲಿರುವ ಸುನಿಲ್ ನಾರಾಯಣ್ (27, 20ಎ) ಮತ್ತು ನವತಾರೆ ಅಂಗ್‌ಕ್ರಿಶ್‌ ರಘುವಂಶಿ (24, 18ಎ) ಬಿರುಸಿನ ಆಟದಿಂದ ಪವರ್‌ಪ್ಲೇ ಒಳಗೆ ಕೆಕೆಆರ್‌ ತಂಡ 1 ವಿಕೆಟ್‌ಗೆ 54 ರನ್‌ಗಳ ಉತ್ತಮ ಮೊತ್ತ ಗಳಿಸಿತ್ತು. ಈ ಐಪಿಎಲ್‌ನಲ್ಲಿ 201ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿರುವ ಸುನಿಲ್ ಮೂರು ಬೌಂಡರಿ ಜೊತೆ ಎರಡು ಸಿಕ್ಸರ್ ಬಾರಿಸಿದರು.

ಈ ಹಂತದಲ್ಲಿ ಜಡೇಜ ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಪಡೆದರು. ರಘುವಂಶಿ ರಿವರ್ಸ್ ಸ್ವೀಪ್ ಯತ್ನದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಅದೇ ಓವರ್‌ನಲ್ಲಿ ಸುನಿಲ್, ಲಾಂಗ್‌ಆಫ್‌ನಲ್ಲಿ ಕ್ಯಾಚಿತ್ತರು. ಮರು ಓವರ್‌ನಲ್ಲಿ ಅವರು ವೆಂಕಟೇಶ್ ಅಯ್ಯರ್ (3) ಅವರ ವಿಕೆಟ್‌ ಪಡೆದರು.

ಕೊನೆಯ ಐದು ಓವರುಗಳಲ್ಲಿ ಕೋಲ್ಕತ್ತ ತಂಡ 28 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಲ್ಕು ವಿಕೆಟ್‌ಗಳನ್ನೂ ಕಳೆದುಕೊಂಡಿತು.

ನಾಯಕ ಶ್ರೇಯಸ್‌ ಅಯ್ಯರ್ ಅವರು ಸಹನೆಯಿಂದ 34 (32ಎ, 4x3) ರನ್ ಗಳಿಸಿ ಎಂಟನೆಯವರಾಗಿ ನಿರ್ಗಮಿಸಿದರು. ಮುಸ್ತಫಿಜುರ್ ಬೌಲಿಂಗ್‌ನಲ್ಲಿ ಡೀಪ್‌ ಮಿಡ್‌ ವಿಕೆಟ್‌ನಲ್ಲಿ ಅಯ್ಯರ್ ಕ್ಯಾಚ್‌ ಪಡೆದ  ಜಡೇಜಗೆ ಐಪಿಎಲ್‌ನಲ್ಲಿ ನೂರು ಕ್ಯಾಚ್‌ ಪೂರೈಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT