ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ರೈಸರ್ಸ್ ಮೇಲೆ ರೈಡರ್ಸ್ ಸವಾರಿ: 3ನೇ ಸಲ ಚಾಂಪಿಯನ್ ಪಟ್ಟಕ್ಕೇರಿದ KKR

Published 26 ಮೇ 2024, 16:55 IST
Last Updated 26 ಮೇ 2024, 16:55 IST
ಅಕ್ಷರ ಗಾತ್ರ

ಚೆನ್ನೈ: ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವೇಗಿ ಮಿಚೆಲ್ ಸ್ಟಾರ್ಕ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಪ್ರಶಸ್ತಿ ಗೆಲುವಿನ ಕಾಣಿಕೆ ನೀಡಿದರು. 

ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ  ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಆಸ್ಟ್ರೇಲಿಯಾದ ಸ್ಟಾರ್ಕ್‌ (3–0–14–2) ಕಾರಣರಾದರು. ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡವು 8 ವಿಕೆಟ್‌ಗಳಿಂದ ಗೆದ್ದಿತು. 114 ರನ್‌ಗಳ ಗುರಿಯನ್ನು ಕೋಲ್ಕತ್ತ ತಂಡವು 57 ಎಸೆತಗಳು ಬಾಕಿಯಿರುವಂತೆಯೇ 2 ವಿಕೆಟ್ ಕಳೆದುಕೊಂಡು  ಮುಟ್ಟಿತು. ವೆಂಕಟೇಶ್ ಅಯ್ಯರ್ (ಅಜೇಯ 52; 26ಎ) ಅರ್ಧಶತಕ ಗಳಿಸಿದರು.

ಐಪಿಎಲ್‌ ಇತಿಹಾಸದಲ್ಲಿ ಕೋಲ್ಕತ್ತ ತಂಡವು ಗೆದ್ದ ಮೂರನೇ ಟ್ರೋಫಿ ಇದಾಗಿದೆ. ಈ ಹಿಂದೆ ಎರಡು ಸಲ ಪ್ರಶಸ್ತಿ ಜಯಿಸಿದಾಗ ಗೌತಮ್ ಗಂಭೀರ್ ನಾಯಕರಾಗಿದ್ದರು. ಇದೀಗ ಅವರು ತಂಡದ ಮೆಂಟರ್ ಆಗಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡವು ಈ ಸಾಧನೆ ಮಾಡಿದೆ. 

ಐಪಿಎಲ್‌ನ ಅತ್ಯಂತ ದೊಡ್ಡ ಮೊತ್ತ (287 ರನ್) ಗಳಿಸಿದ ದಾಖಲೆಯನ್ನೂ ಈ ಟೂರ್ನಿಯಲ್ಲಿ ಸನ್‌ರೈಸರ್ಸ್ ಮಾಡಿತ್ತು. ನಾಲ್ಕು ಬಾರಿ 250ಕ್ಕೂ ಹೆಚ್ಚಿನ ರನ್‌ಗಳ ಮೊತ್ತವನ್ನೂ ಗಳಿಸಿತ್ತು. ಆದರೆ ಈ ಪಂದ್ಯದಲ್ಲಿ  18.3 ಓವರ್‌ಗಳಲ್ಲಿ 113 ರನ್‌ ಗಳಿಸಿತು. ಟೂರ್ನಿಯಲ್ಲಿಯೇ ತಂಡವೊಂದು ಗಳಿಸಿದ ಎರಡನೇ ಅತಿ ಕಡಿಮೆ ಮೊತ್ತ ಇದಾಯಿತು. ಸನ್‌ರೈಸರ್ಸ್‌ ಇನಿಂಗ್ಸ್‌ನಲ್ಲಿ ಕೇವಲ 3 ಸಿಕ್ಸರ್‌ಗಳು ದಾಖಲಾದವು. 

ಟಾಸ್ ಗೆದ್ದ ಸನ್‌ರೈಸರ್ಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕಮಿನ್ಸ್ ಯೋಜನೆಯನ್ನು ಅವರ ಸ್ನೇಹಿತ ಸ್ಟಾರ್ಕ್ ಬುಡಮೇಲು ಮಾಡಿದರು.  ಮೊದಲ ಓವರ್‌ನಲ್ಲಿಯೇ ಸನ್‌ರೈಸರ್ಸ್‌ಗೆ ಆಘಾತ ನೀಡಿದರು. ಅವರು ಹಾಕಿದ ಐದನೇ ಎಸೆತವನ್ನು ಮುಂದಡಿ ಇಟ್ಟು ಪಂಚ್ ಮಾಡಲು ಪ್ರಯತ್ನಿಸಿದ ಎಡಗೈ ಬ್ಯಾಟರ್ ಅಭಿಷೇಕ್ ಕಣ್ಣು ಮಿಟುಕಿಸುವುದರಲ್ಲಿ ಕ್ಲೀನ್‌ಬೌಲ್ಡ್ ಆದರು. 

ಎರಡನೇ ಓವರ್‌ನಲ್ಲಿ ಬಲಗೈ ವೇಗಿ ವೈಭವ್ ಅರೋರಾ ಕೂಡ ಸ್ಟಾರ್ಕ್ ಅವರ ಗುಡ್‌ಲೆಂಗ್ತ್ ತಂತ್ರವನ್ನೇ ಅನುಸರಿಸಿ ಯಶಸ್ವಿಯಾದರು. ಅವರ ಎಸೆತವನ್ನು ಹೊಡೆಯುವ ಯತ್ನದಲ್ಲಿ ಟ್ರಾವಿಸ್ ಹೆಡ್ ವಿಕೆಟ್‌ಕೀಪರ್ ಗುರ್ಬಾಜ್‌ಗೆ ಕ್ಯಾಚಿತ್ತರು. ಐದನೇ ಓವರ್‌ನಲ್ಲಿ ರಾಹುಲ್ ತ್ರಿಪಾಠಿಗೂ ಡಗ್‌ಔಟ್ ದಾರಿ ತೋರಿಸಿದ ಸ್ಟಾರ್ಕ್‌, ಸನ್‌ರೈಸರ್ಸ್‌ ‘ಪವರ್‌ಪ್ಲೇ’ಗೆ ಕಡಿವಾಣ ಹಾಕಿದರು.   ಇದರ ನಂತರವೂ ಉಳಿದ ಬೌಲರ್‌ಗಳು ಬಿಗಿಪಟ್ಟು ಹಾಕಿದರು. ಇದರಿಂದಾಗಿ ತಂಡವು 90 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಆ್ಯಂಡ್ರೆ ರಸೆಲ್ 3, ಹರ್ಷಿತ್ ರಾಣಾ 2 ಹಾಗೂ ಸುನಿಲ್ ನಾರಾಯಣ್‌ ಮತ್ತು ವರುಣ ಚಕ್ರವರ್ತಿ ತಲಾ ಒಂದು ವಿಕೆಟ್ ಗಳಿಸಿದರು.  ಸನ್‌ರೈಸರ್ಸ್ ತಂಡದ ಏಡನ್ ಮರ್ಕರಂ (20; 23ಎ) ಹಾಗೂ ಪ್ಯಾಟ್ ಕಮಿನ್ಸ್ (24; 19ಎ) ಅವರಿಬ್ಬರ ಆಟದಿಂದಾಗಿ ತಂಡದ ಮೊತ್ತವು 100ರ ಗಡಿ ದಾಟುವಂತಾಯಿತು. 

ಏಕಪಕ್ಷೀಯವಾದ ಪಂದ್ಯದಲ್ಲಿ ಕೋಲ್ಕತ್ತ ತಂಡವು ಕೇವಲ 10.3 ಓವರ್‌ಗಳಲ್ಲಿ ಗುರಿ ಮುಟ್ಟಿತು. ಮೈದಾನದ ನಡುವೆ ಸಂಭ್ರಮಿಸುತ್ತಿದ್ದ ತಮ್ಮ ತಂಡದ ಆಟಗಾರರನ್ನು ಕೋಲ್ಕತ್ತ ತಂಡದ ಸಹ ಮಾಲೀಕ, ಬಾಲಿವುಡ್ ತಾರೆ ಶಾರೂಕ್ ಖಾನ್, ಕೋಚ್ ಚಂದ್ರಕಾಂತ್ ಪಂಡಿತ್ ಹಾಗೂ ಗಂಭೀರ್ ಅಭಿನಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT