ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸತತ 6 ಸೋಲಿನ ಬಳಿಕ ಸ್ವಾಭಿಮಾನಕ್ಕಾಗಿ ಹೋರಾಡಿದೆವು: ವಿರಾಟ್ ಕೊಹ್ಲಿ

Published 24 ಮೇ 2024, 2:49 IST
Last Updated 24 ಮೇ 2024, 2:49 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಪರಾಭವಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಟ್ರೋಫಿ ಕನಸು ಕಮರಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಸತತ ಆರು ಸೋಲುಗಳ ಬಳಿಕ ಸ್ವಾಭಿಮಾನಕ್ಕಾಗಿ ಹೋರಾಡಿದೆವು ಎಂದು ಹೇಳಿದ್ದಾರೆ.

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೋಲಿನ ಬಳಿಕ ಡ್ರೆಸ್ಸಿಂಗ್ ಕೊಠಡಿಯಲ್ಲಿ ಕೊಹ್ಲಿ ನೀಡಿರುವ ಹೇಳಿಕೆಯನ್ನು ಆರ್‌ಸಿಬಿ ಬಿಡುಗಡೆಗೊಳಿಸಿದೆ.

'ನಾವು ಸ್ವಾಭಿಮಾನಕ್ಕಾಗಿ ಆಡಲು ಪ್ರಾರಂಭಿಸಿದೆವು. ಇದರಿಂದ ಆತ್ಮವಿಶ್ವಾಸ ಮರಳಿ ಪಡೆಯಲು ಸಾಧ್ಯವಾಯಿತು' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

'ಟೂರ್ನಿಯಲ್ಲಿ ನಾವು ಪುನರಾಗಮನ ಮಾಡಿದ ರೀತಿ ನಿಜಕ್ಕೂ ವಿಶೇಷ. ನಾನಿದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಇದನ್ನು ಸಾಧಿಸಲು ತಂಡದ ಪ್ರತಿಯೊಬ್ಬ ಆಟಗಾರನ ಆತ್ಮಸ್ಥೈರ್ಯದ ಅಗತ್ಯವಿತ್ತು. ಈ ಕುರಿತು ನಾವು ಹೆಮ್ಮೆಪಟ್ಟುಕೊಳ್ಳಬಹುದು. ಅಂತಿಮವಾಗಿ ಬಯಸಿದ ರೀತಿಯಲ್ಲಿ ಆಡಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ.

ಕೊನೆಯ 6 ಪಂದ್ಯ ನಿಜಕ್ಕೂ ವಿಶೇಷ: ಡುಪ್ಲೆಸಿ

ಟೂರ್ನಿಯ ಪ್ರಥಮಾರ್ಧದಲ್ಲಿ ಎದುರಾದ ಹಿನ್ನಡೆಯ ಬಳಿಕ ಕೊನೆಯ ಆರು ಪಂದ್ಯಗಳು ನಿಜಕ್ಕೂ ವಿಶೇಷವೆನಿಸಿತ್ತು. ಇದರಿಂದಾಗಿ ಸಹಜವಾಗಿಯೇ ಮತ್ತಷ್ಟು ವಿಶೇಷ ಸಾಧನೆ ಮಾಡುವ ನಿರೀಕ್ಷೆ ಇಮ್ಮಡಿಗೊಂಡಿತ್ತು ಎಂದು ನಾಯಕ ಫಫ್ ಡುಪ್ಲೆಸಿ ಹೇಳಿದ್ದಾರೆ.

'ಟ್ರೋಫಿ ಗೆಲ್ಲಲು ಸಾಧ್ಯವಾಗದಿರುವುದು ಬೇಸರಕ್ಕೆ ಕಾರಣವಾಗಿದೆ. ಆದರೆ ಈ ಋತುವಿನತ್ತ ಹಿಂತಿರುಗಿ ನೋಡಿದರೆ ನಾವು ಎಲ್ಲದ್ದೆವು? ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ಗಮನಿಸಿದಾಗ ನಿಜಕ್ಕೂ ನಮ್ಮ ಹುಡುಗರ ಪ್ರದರ್ಶನದ ಬಗ್ಗೆ ತುಂಬಾ ಹೆಮ್ಮೆಪಟ್ಟುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

ಆರ್‌ಸಿಬಿ ಮೊದಲ ಎಂಟು ಪಂದ್ಯಗಳ ಪೈಕಿ ಏಳರಲ್ಲಿ ಸೋತು ಕೇವಲ ಒಂದರಲ್ಲಷ್ಟೇ ಜಯ ಸಾಧಿಸಿತ್ತು. ಅಲ್ಲದೆ ಸತತ ಆರು ಪಂದ್ಯಗಳಲ್ಲಿ ಸೋಲಿನ ಮುಖಭಂಗಕ್ಕೊಳಗಾಗಿತ್ತು. ಬಳಿಕ ಪುಟಿದೆದ್ದಿದ್ದ ಆರ್‌ಸಿಬಿ, ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು.

ಪ್ಲೇ-ಆಫ್‌ಗೆ ತಲುಪಲು ಈ ಪಂದ್ಯದಲ್ಲಿ 18 ರನ್ ಅಂತರದ ಗೆಲುವಿನ ಅವಶ್ಯಕತೆಯಿತ್ತು. ಈ ಎಲ್ಲ ಸವಾಲುಗಳನ್ನು ಆರ್‌ಸಿಬಿ ಮೆಟ್ಟಿ ನಿಂತಿತ್ತು. ಆದರೆ ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವುದರೊಂದಿಗೆ ಚೊಚ್ಚಲ ಟ್ರೋಫಿ ಕನಸು ಭಗ್ನಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT