ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Auction: ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲುಣಿಸಿದ್ದ ಹೆಡ್ ರೈಸರ್ಸ್‌ಗೆ

Published 19 ಡಿಸೆಂಬರ್ 2023, 14:12 IST
Last Updated 19 ಡಿಸೆಂಬರ್ 2023, 14:12 IST
ಅಕ್ಷರ ಗಾತ್ರ

ದುಬೈ: 2023ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತದ ವಿರುದ್ಧ ಅಮೋಘ ಶತಕ ಸಿಡಿಸಿ, ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಖರೀದಿ ಮಾಡಿದೆ.

ಇದೇ ಮೊದಲ ಸಲ ಭಾರತದ ಹೊರಗೆ (ದುಬೈನಲ್ಲಿ) ನಡೆಯುತ್ತಿರುವ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ, ಸನ್‌ರೈಸರ್ಸ್ ತಂಡ ಹೆಡ್‌ಗೆ ₹ 6.80 ಕೋಟಿ ನೀಡಿದೆ.

ವಿಶ್ವಕಪ್‌ ಸೆಮಿಫೈನಲ್‌, ಫೈನಲ್‌ನಲ್ಲಿ ಪಂದ್ಯಶ್ರೇಷ್ಠ
ಭಾರತದಲ್ಲಿ ನಡೆದ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸುವುದರೊಂದಿಗೆ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿಗೆ ಈ ಮಾದರಿಯಲ್ಲಿ ಚಾಂಪಿಯನ್‌ ಎನಿಸಿತು. ಸೆಮಿಫೈನಲ್‌, ಫೈನಲ್‌ ಪಂದ್ಯಗಳಲ್ಲಿ ಅಬ್ಬರಿಸಿ, ಪಂದ್ಯಶ್ರೇಷ್ಠ ಎನಿಸಿಕೊಂಡ ಹೆಡ್‌ ಪಾತ್ರ ಅದರಲ್ಲಿ ಪ್ರಮುಖವಾದದ್ದು.

ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ರಿಕಾ ತಂಡ 212 ರನ್ ಗಳಿಸಿ ಆಲೌಟ್ ಆಗಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 48ನೇ ಓವರ್‌ ವರೆಗೂ ಆಡಿ 7 ವಿಕೆಟ್‌ಗಳನ್ನು ಕಳೆದುಕೊಂಡು ಜಯ ಗಳಿಸಿತು.

ಆಸಿಸ್‌ ಪರ ಆರಂಭಿಕರಾದ ಹೆಡ್‌ ಮತ್ತು ಡೇವಿಡ್‌ ವಾರ್ನರ್‌ (29) ಅಬ್ಬರಿಸಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 6 ಓವರ್‌ಗಳಲ್ಲಿ 60 ರನ್ ಕೆಲಹಾಕಿತು. ವಾರ್ನರ್‌ ಔಟಾದ ನಂತರವೂ ಬೀಸಾಟವಾಡಿದ್ದ ಹೆಡ್‌, ಕೇವಲ 48 ಎಸೆತಗಳಲ್ಲಿ 62 ರನ್ ಚಚ್ಚಿದ್ದರು.

ಹೆಡ್‌ ವಿಕೆಟ್‌ ಪತನದ ಬಳಿಕ ಆಫ್ರಿಕಾ ಬೌಲರ್‌ಗಳು ಹೋರಾಟ ನಡೆಸಿದರೂ ಸೋಲು ತಪ್ಪಿಸಿಕೊಳ್ಳಲು ಆಗಲಿಲ್ಲ. ಇನಿಂಗ್ಸ್‌ನ ಆರಂಭದಲ್ಲೇ ಹೆಡ್‌ ಬಿರುಸಾಗಿ ರನ್‌ ಗಳಿಸಿದ್ದು ಆಸ್ಟ್ರೇಲಿಯನ್ನರು ಫೈನಲ್‌ಗೆ ಲಗ್ಗೆ ಹಾಕಲು ನೆರವಾಯಿತು.

ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮಣಿಸಿ ಫೈನಲ್‌ ತಲುಪಿದ್ದ ಭಾರತದ ವಿರುದ್ಧವೂ, ಹೆಡ್ ಇದೇ ರೀತಿ ಬ್ಯಾಟ್‌ ಬೀಸಿದ್ದರು. ಭಾರತ ನೀಡಿದ್ದ 241 ರನ್‌ ಗುರಿ ಎದುರು ಲೀಲಾಜಾಲವಾಗಿ ರನ್‌ ಗಳಿಸಿದ್ದರು. ಅವರು 120 ಎಸೆತಗಳಲ್ಲಿ 137 ರನ್‌ ಗಳಿಸಿ ತಮ್ಮ ತಂಡಕ್ಕೆ ಸುಲಭವಾಗಿ 'ಕಪ್‌' ಗೆದ್ದುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT