ಭಾನುವಾರ, ಅಕ್ಟೋಬರ್ 25, 2020
28 °C

IPL-2020 | ಚೆನ್ನೈಗೆ ಹ್ಯಾಟ್ರಿಕ್‌ ಸೋಲು; ಅಂಕಪಟ್ಟಿಯಲ್ಲಿ ಮೇಲೇರಿದ ರೈಸರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ 165 ರನ್‌ಗಳ ಗುರಿ ಎದುರು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 7 ರನ್‌ಗಳ ಅಲ್ಪ‌ ಅಂತರದ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ರೈಸರ್ಸ್ ಯುವ ಆಟಗಾರ ಪ್ರಿಯಂ ಗರ್ಗ್‌ ಮತ್ತು ಅಭಿಷೇಕ್‌ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತ ಕಲೆ ಹಾಕಿತು. ಒಂದು ಹಂತದಲ್ಲಿ  ತಂಡದ ಮೊತ್ತ 69 ರನ್‌ ಆಗುವಷ್ಟರಲ್ಲಿ ರೈಸರ್ಸ್ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಲಯ ತಪ್ಪಿದ ಚೆನ್ನೈ, ರೈಸರ್ಸ್‌ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವ ಅವಕಾಶವನ್ನು ಕೈ ಚೆಲ್ಲಿತು.

ಐದನೇ ವಿಕೆಟ್‌ ಜೊತೆಯಾಟದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಗರ್ಗ್ ಮತ್ತು ಶರ್ಮಾ ಜೋಡಿ ಕೇವಲ 42 ಎಸೆತಗಳಲ್ಲಿ 75 ರನ್‌ ಕಲೆಹಾಕಿತು. ಶರ್ಮಾ 24 ಎಸೆತಗಳಲ್ಲಿ 31 ರನ್‌ ಗಳಿಸಿದರೆ, ಪ್ರಿಯಂ ಕೇವಲ 26 ಎಸೆತಗಳಲ್ಲಿ 1 ಸಿಕ್ಸರ್‌ ಮತ್ತು 6 ಬೌಂಡರಿ ಸಹಿತ 51 ರನ್‌ ಚಚ್ಚಿದರು. ಇದರಿಂದಾಗಿ ರೈಸರ್ಸ್‌ ಮೊತ್ತ 160ರ ಗಡಿ ದಾಟಿತು.

ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಮೊದಲ ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಶೇನ್‌ ವಾಟ್ಸನ್ (1), ಅಂಬಟಿ ರಾಯುಡು (8) ಮತ್ತು ಕೇದಾರ್‌ ಜಾಧವ್‌ (3) ಬೇಗನೆ ವಿಕೆಟ್‌ ಒಪ್ಪಿಸಿದರು. ಕಳೆದ ಮೂರು ಪಂದ್ಯಗಳಲ್ಲಿ ಚೆನ್ನೈನ ಬ್ಯಾಟಿಂಗ್‌ ಬಲ ಎನಿಸಿದ್ದ ಫಾಫ್‌ ಡು ಪ್ಲೆಸಿ 23 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಯಾದ ನಾಯಕ ಎಂ.ಎಸ್‌. ಧೋನಿ ಮತ್ತು ರವೀಂದ್ರ ಜಡೇಜಾ 62 ರನ್‌ಗಳ ಜೊತೆಯಾಟವಾಡಿದರು. ಜಡೇಜಾ 35 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 5 ಬೌಂಡರಿ ಸಹಿತ 50 ರನ್‌ ಗಳಿಸಿ ಔಟಾದರು. ಧೋನಿ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 46 ರನ್‌ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಚೆನ್ನೈ 5 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸನ್‌ರೈಸರ್ಸ್‌ ಪರ ಟಿ. ನಟರಾಜನ್‌ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌ ಮತ್ತು ಅಬ್ದುಲ್‌ ಸಮದ್ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಜಯ ಗಳಿಸಿದ್ದ ಚೆನ್ನೈ ನಂತರದ ಮೂರೂ ಪಂದ್ಯಗಳಲ್ಲಿ ಸೋಲುಕಂಡಿದೆ. ಹೀಗಾಗಿ ಈ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದೆ.

ಈ ಜಯದೊಂದಿಗೆ ಹೈದರಾಬಾದ್‌ ನಾಲ್ಕನೇ ಸ್ಥಾನಕ್ಕೆ ಏರಿದೆ. ವಾರ್ನರ್ ಪಡೆ 4 ಪಂದ್ಯಗಳಲ್ಲಿ ತಲಾ ಎರಡು ಜಯ ಮತ್ತು ಸೋಲುಗಳನ್ನು ಕಂಡಿದೆ.

ಧೋನಿಗೆ 194ನೇ ಪಂದ್ಯ
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ಅವರು ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಸಾಧನೆ ಮಾಡಿದರು.

ಧೋನಿ ಅವರಿಗೆ ಇದು 194ನೇ ಪಂದ್ಯ. ಸಹ ಆಟಗಾರ ಸುರೇಶ್‌ ರೈನಾ ಅವರು ಐಪಿಎಲ್‌ನಲ್ಲಿ 193 ಪಂದ್ಯಗಳಲ್ಲಿ ಆಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು