ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಮನಗೆದ್ದ ಮಯಂಕ್ ಆಟ: ಡೆಲ್ಲಿಗೆ ‘ಸೂಪರ್‌’ ಜಯ

Last Updated 20 ಸೆಪ್ಟೆಂಬರ್ 2020, 20:31 IST
ಅಕ್ಷರ ಗಾತ್ರ
ADVERTISEMENT
""

ದುಬೈ: ಬೆಂಗಳೂರು ಹುಡುಗ ಮಯಂಕ್ ಅಗರವಾಲ್ ಸೂಪರ್‌ ಆಟವು ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸೂಪರ್‌ ಓವರ್‌ನಲ್ಲಿ ಪಂದ್ಯ ಜಯಿಸಿತು. ಹಲವು ದಿನಗಳಿಂದ ಕೊರೊನಾ ವೈರಾಣುವಿನ ಸುದ್ದಿಗಳಿಂದ ಕಂಗೆಟ್ಟಿದ್ದ ಮನಗಳಿಗೆ ರೋಚಕ ರಸದೌತಣ ನೀಡಿತು.

ಭಾನುವಾರ ರಾತ್ರಿ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯವು ಟೈ ಆಯಿತು. ಸೂಪರ್ ಓವರ್‌ನಲ್ಲಿ ಕೇವಲ ಎರಡು ರನ್‌ ಗಳಿಸಿದ ಕಿಂಗ್ಸ್ ತಂಡವು ಡೆಲ್ಲಿಗೆ ಸುಲಭದ ತುತ್ತಾಯಿತು.

ಐಪಿಎಲ್‌ನಲ್ಲಿ ನಾಯಕನಾಗಿ ಚೊಚ್ಚಲ ಪಂದ್ಯವಾಡಿದ ಕನ್ನಡಿಗ ಕೆ.ಎಲ್. ರಾಹುಲ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರೀಕ್ಷೆಗೆ ತಕ್ಕಂತೆ ಮೊಹಮ್ಮದ್ ಶಮಿ (15ಕ್ಕೆ3) ಬೌಲಿಂಗ್ ಮಾಡಿದರು. ಆದರೆ ಮಾರ್ಕಸ್ ಸ್ಟೋಯಿನಿಸ್ 20 ಎಸೆತಗಳಲ್ಲಿ 50 ರನ್‌ ಸಿಡಿಸಿ ಡೆಲ್ಲಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್‌ ಗಳಿಸಲು ಕಾರಣರಾದರು.

ಪಂಜಾಬ್‌ ತಂಡ ಗುರಿ ಬೆನ್ನಟ್ಟಿದಾಗ, ಇನಿಂಗ್ಸ್‌ನ ಕೊನೆಯ ಓವರ್‌ ಬೌಲಿಂಗ್ ಮಾಡಿದ ಸ್ಟೋಯಿನಿಸ್ ಮೇಲುಗೈ ಸಾಧಿಸಿದರು. ಪಂಜಾಬ್ ತಂಡದಲ್ಲಿ ರಾಹುಲ್ ಸೇರಿದಂತೆ ನಾಲ್ವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್ ಸೇರಿದಾಗ ತಂಡವು ಸೋಲಿನ ಹಾದಿ ಹಿಡಿಯುವುದು ಖಚಿತವಾಗಿತ್ತು. ಆದರೆ, ಮಯಂಕ್ ಏಕಾಂಗಿ ಹೋರಾಟ ರಂಗೇರಿತು. ಕೇವಲ 60 ಎಸೆತಗಳಲ್ಲಿ 89 ರನ್‌ ಗಳಿಸಿದ ಅವರು ತಂಡವನ್ನು ಜಯದ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಪೃಥ್ವಿ ಶಾ ಮತ್ತು ಶ್ರೇಯಸ್ ಅಯ್ಯರ್ ಕೊಟ್ಟ ಜೀವದಾನಗಳನ್ನು ಮಯಂಕ್ ಸಮರ್ಥವಾಗಿ ಬಳಸಿಕೊಂಡರು. ಆದರೆ, 20ನೇ ಓವರ್‌ನ ಐದನೇ ಎಸೆತದಲ್ಲಿ ಮಯಂಕ್ ಔಟಾಗಿದ್ದು ಎಡವಟ್ಟಾಯಿತು. ಅವರ ವಿಕೆಟ್‌ ಕಬಳಿಸಿದ್ದು ಸ್ಟೋಯಿನಿಸ್!

ಸ್ಜೋರ್ ಸಮವಾಗಿದ್ದರಿಂದ (20 ಓವರ್‌ಗಳಲ್ಲಿ 8ಕ್ಕೆ 157) ಗೆಲುವಿನ ಒಂದು ರನ್ ಮಾತ್ರ ಅಗತ್ಯವಿತ್ತು. ಕೊನೆಯ ಎಸೆತವನ್ನು ಸರಿಯಾಗಿ ಆಡು ವಲ್ಲಿ ಕ್ರಿಸ್‌ ಜೋರ್ಡಾನ್ ಎಡವಿದರು. ಕ್ಯಾಚ್ ಪಡೆದ ರಬಾಡ ಕುಣಿದಾಡಿದರು. ನಾಯಕ ಶ್ರೇಯಸ್‌ ಅಯ್ಯರ್ ಅಂತೂ ಕುಪ್ಪಳಿಸಿದರು. ಪಂದ್ಯ ಟೈ ಆಯಿತು. ಸೂಪರ್‌ ಓವರ್‌ನಲ್ಲಿ ರಬಾಡ ಅವರು ರಾಹುಲ್ ಮತ್ತು ನಿಕೊಲಸ್ ಪೂರನ್ ವಿಕೆಟ್ ಕಬಳಿಸಿದರು. ಇದರಿಂದಾಗಿ ಕಿಂಗ್ಸ್‌ ಕೇವಲ 2 ರನ್ ಗಳಿಸಿತು. ಹೀಗಾಗಿ ಡೆಲ್ಲಿಗೆ ಹೆಚ್ಚು ಸವಾಲು ಎದುರಾಗಲಿಲ್ಲ. ಕಿಂಗ್ಸ್‌ ಬೌಲರ್‌ ಶಮಿ ಒಂದು ವೈಡ್ ಹಾಕಿದರು. ಇನ್ನೊಂದು ಎಸೆತದಲ್ಲಿ ಡೆಲ್ಲಿ ಹುಡುಗ ರಿಷಭ್ ಪಂತ್ ಎರಡು ರನ್ ಗಳಿಸಿದರು.

ಗೌತಮ್‌ಗೆ ಅವಕಾಶ
ಕೆ.ಎಲ್. ರಾಹುಲ್ ಅವರ ಹನ್ನೊಂದರ ಬಳಗದಲ್ಲಿ ಅನುಭವಿ ಕ್ರಿಸ್‌ ಗೇಲ್‌ ಅವರಿಗೆ ಅವಕಾಶ ಸಿಗಲಿಲ್ಲ. ಇದೇ ಪ್ರಥಮ ಬಾರಿಗೆ ಪಂಜಾಬ್‌ ತಂಡದಲ್ಲಿರುವ ಕನ್ನಡಿಗ ಕೃಷ್ಣಪ್ಪ ಗೌತಮ್‌ ಕಣಕ್ಕಿಳಿದರು.

ಹೀಗಿತ್ತು ಸೂಪರ್‌ ಓವರ್‌
ಪಂಜಾಬ್‌
ಮೊದಲ ಎಸೆತ:
ರಾಹುಲ್‌ ಎರಡು ರನ್‌
ಎರಡನೇ ಎಸೆತ: ರಾಹುಲ್‌ ಔಟ್‌
ಮೂರನೇಎಸೆತ: ನಿಕೋಲಸ್ ಪೂರನ್ ಔಟ್
ಡೆಲ್ಲಿ ಪರಬೌಲರ್‌ ಕಗಿಸೊ ರಬಡ

ಡೆಲ್ಲಿ
ಮೊದಲ ಎಸೆತ:
ನೋ ರನ್‌ (ರಿಷಭ್‌ ಪಂತ್)
ಎರಡನೇ ಎಸೆತ: ವೈಡ್‌
ಎರಡನೇ ಎಸೆತ: ರಿಷಭ್‌ ಪಂತ್ ಎರಡು ರನ್
ಪಂಜಾಬ್‌ ಪರಬೌಲರ್‌ ಮೊಹಮ್ಮದ್ ಶಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT