ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 22ರಂದು ಐಪಿಎಲ್‌ಗೆ ಚಾಲನೆ: ಅರುಣ್ ಧುಮಾಲ್

Published 20 ಫೆಬ್ರುವರಿ 2024, 14:10 IST
Last Updated 20 ಫೆಬ್ರುವರಿ 2024, 14:10 IST
ಅಕ್ಷರ ಗಾತ್ರ

ನವದೆಹಲಿ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್‌ 22 ರಂದು ಆರಂಭವಾಗಲಿದೆ. ಅದೇ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾದರೂ ಲೀಗ್‌ನ ಎಲ್ಲ ಪಂದ್ಯಗಳು ದೇಶದಲ್ಲೇ ನಡೆಯಲಿವೆ ಎಂದು ಲೀಗ್‌ನ ಚೇರ್ಮನ್ ಅರುಣ್ ಧುಮಾಲ್ ಮಂಗಳವಾರ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ ನಡೆಯುವ ಸಾಧ್ಯತೆಯಿದೆ. ಈ ಕಾರಣದಿಂದಲೇ ಐಪಿಎಲ್‌ 17ನೇ ಆವೃತ್ತಿಯ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಆರಂಭದಲ್ಲಿ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗುವುದು. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಚುನಾವಣೆ ಘೋಷಣೆಯಾದ ನಂತರ ಬಿಡುಗಡೆ ಮಾಡಲಾಗುವುದು ಎಂದು ಧುಮಾಲ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಮಾರ್ಚ್‌ ಮೊದಲ ವಾರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

‘ಮಾರ್ಚ್‌ 22ರಂದು ಐಪಿಎಲ್‌ಗೆ ಚಾಲನೆ ನೀಡಲು ಎದುರುನೋಡುತ್ತಿದ್ದೇವೆ. ಮೊದಲ 15 ದಿನಗಳ ವೇಳಾಪಟ್ಟಿ ಮೊದಲು ಬಿಡುಗಡೆ ಮಾಡುತ್ತೇವೆ. ಇಡಿಯ ಟೂರ್ನಿ ಭಾರತದಲ್ಲೇ ನಡೆಯಲಿದೆ’ ಎಂದು ಧುಮಾಲ್ ತಿಳಿಸಿದರು.

ಐಪಿಎಲ್‌ ಒಮ್ಮೆ ಮಾತ್ರ– 2009ರಲ್ಲಿ ಪೂರ್ಣಪ್ರಮಾಣದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. 2014ರ ಆವೃತ್ತಿಯ ಕೆಲವು ಪಂದ್ಯಗಳು ಲೋಕಸಭಾ ಚುನಾವಣೆಯ ಕಾರಣ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆದಿದ್ದವು. ಆದರೆ 2019ರಲ್ಲಿ ಸಾರ್ವತ್ರಿಕ ಚುನಾವಣೆ ಹೊರತಾಗಿಯೂ ಐಪಿಎಲ್‌ ಅಬಾಧಿತವಾಗಿ ನಡೆದಿತ್ತು.

ಶ್ರೀಮಂತ ಟೂರ್ನಿ ಐಪಿಎಲ್‌ಗೆ ಬೆನ್ನಹಿಂದೆಯೇ ಟಿ20 ವಿಶ್ವಕಪ್‌ ನಿಗದಿಯಾಗಿರುವ ಕಾರಣ, ಲೀಗ್‌ನ ಫೈನಲ್ ಮೇ 26ರಂದು ನಡೆಯುವ ಸಾಧ್ಯತೆಯಿದೆ.

ಭಾರತ ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ಆಡಲಿದೆ. ಈ ಬಾರಿಯ ವಿಶ್ವಕಪ್ ಜೂನ್‌ 1 ರಂದು ಅಮೆರಿಕ ಮತ್ತು ಕೆನಡಾ ನಡುವಣ ಪಂದ್ಯದೊಡನೆ ಆರಂಭವಾಗಲಿದೆ.

ಸಂಪ್ರದಾಯದಂತೆ ಐಪಿಎಲ್‌ನ ಮೊದಲ ಪಂದ್ಯ ಹಿಂದಿನ ವರ್ಷದ ಫೈನಲ್‌ನಲ್ಲಿ ಮುಖಾಮುಖಿಯಾದವರ ನಡುವೆ ನಡೆಯಲಿದೆ. ಕಳೆದ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿತ್ತು.

ಐಪಿಎಲ್‌ಗೆ ಆಟಗಾರರ ಖರೀದಿ ಪ್ರಕ್ರಿಯೆ ಕಳೆದ ಡಿಸೆಂಬರ್‌ನಲ್ಲಿ ನಡೆದಿತ್ತು. ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಲೀಗ್‌ನ ಇತಿಹಾಸದಲ್ಲೇ ಅತಿ ಹೆಚ್ಚಿನ ಮೊತ್ತಕ್ಕೆ (₹24.75 ಕೋಟಿ) ಕೋಲ್ಕತ್ತ ನೈಟ್‌ ರೈಡರ್ಸ್ ಪಾಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT