ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ಎರಡನೇ ಟಿ–20ಯಲ್ಲಿ ಇಶಾನ್‌–ಕೊಹ್ಲಿ ಅಬ್ಬರದಾಟಕ್ಕೆ ಒಲಿದ ಜಯ

Last Updated 14 ಮಾರ್ಚ್ 2021, 21:56 IST
ಅಕ್ಷರ ಗಾತ್ರ

ಅಹಮದಾಬಾದ್: ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಪದಾರ್ಪಣೆಯ ಪಂದ್ಯದಲ್ಲಿಯೇ ಮಿಂಚಿದ ಇಶಾನ್ ಕಿಶನ್ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಟ ರಂಗೇರಿತು.

ಇವರಿಬ್ಬರ ಆಕರ್ಷಕ ಅರ್ಧಶತಕಗಳ ಬಲದಿಂದ ಭಾರತ ತಂಡವು 7 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲರ್‌ಗಳು ಮಿಂಚಿದರು. ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 17.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 166 ರನ್ ಗಳಿಸಿತು. ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು. ಆ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ವಿರಾಟ್ ಕೊಹ್ಲಿ (ಅಜೇಯ 73;49ಎಸೆತ, 5ಬೌಂಡರಿ, 3ಸಿಕ್ಸರ್) ಈ ಹಣಾಹಣಿಯಲ್ಲಿ ಲಯಕ್ಕೆ ಮರಳಿದರು. ಬಹಳ ದಿನಗಳ ನಂತರ ಅವರ ಸುಂದರ ಆಟ ಕಣ್ಣಿಗೆ ಕಟ್ಟಿತು. ಸಿಕ್ಸರ್‌ ಮೂಲಕ ತಂಡದ ಗೆಲುವಿನ ರನ್‌ ಗಳಿಸಿದ ಅವರು ಮಿಂಚಿದರು. ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಇಶಾನ್ ಕಿಶನ್ (56; 32 ಎಸೆತ) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 94 ರನ್ ಕಲೆಹಾಕಿದರು.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾದರು.

ಪದಾರ್ಪಣೆಯಲ್ಲಿ ಮಿಂಚು: ಗುರಿ ಬೆನ್ನಟ್ಟಿದ ಆತಿಥೇಯರ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ತಮಗೆ ಲಭಿಸಿದ ಮತ್ತೊಂದು ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚ್ ಆದ ರಾಹುಲ್ ನಿರ್ಗಮಿಸಿದರು. ಆಗ ತಂಡದ ಖಾತೆಯಲ್ಲಿ ಒಂದೂ ರನ್ ಇರಲಿಲ್ಲ.

ಆದರೆ ಇನ್ನೊಂದು ಬದಿಯಲ್ಲಿದ್ದ ಇಶಾನ್ ತಮ್ಮ ಮೇಲೆ ಇನಿಂಗ್ಸ್‌ ಕಟ್ಟುವ ಹೊಣೆ ಹೊತ್ತುಕೊಂಡರು. ಹೋದ ವರ್ಷ ಐಪಿಎಲ್‌ನಲ್ಲಿ ಮಿಂಚಿದ್ದ ಇಶಾನ್ ನಿರ್ಭಯವಾಗಿ ಬ್ಯಾಟ್ ಬೀಸಿದರು. ಬೌಂಡರಿ ಗಳಿಸುವುದರೊಂದಿಗೆ ಖಾತೆ ತೆರೆದ ಅವರ ಆಟ ರಂಗೇರಿತು. ಜೋಫ್ರಾ ಆರ್ಚರ್, ಆದಿಲ್ ರಶೀದ್, ಟಾಮ್ ಕರನ್ ಅವರ ಎಸೆತಗಳಿಗೆ ತಕ್ಕ ಉತ್ತರ ನೀಡಿದರು.

ಇಬ್ಬರಿಗೂ ಅದೃಷ್ಟವೂ ಜೊತೆ ನೀಡಿತು. ಐದನೇ ಓವರ್‌ನಲ್ಲಿ ಕ್ರಿಸ್ ಜೋರ್ಡಾನ್ ಬೌಲಿಂಗ್‌ನಲ್ಲಿ ಕೊಹ್ಲಿಯ ಕ್ಯಾಚ್‌ ಅನ್ನು ವಿಕೆಟ್‌ಕೀಪರ್ ಜೋಸ್ ಬಟ್ಲರ್ ಬಿಟ್ಟರು. ಆದರೆ ಕಷ್ಟಕರವಾಗಿದ್ದ ಕ್ಯಾಚ್ ಪಡೆಯುವಲ್ಲಿ ಜೋಸ್ ಪ್ರಯತ್ನ ಕೈಗೂಡಲಿಲ್ಲ.ಆದರೆ, 8ನೇ ಓವರ್‌ನಲ್ಲಿ ರಶೀದ್ ಎಸೆತದಲ್ಲಿ ಇಶಾನ್ ಕಿಶನ್ ಕ್ಯಾಚ್‌ ಬಿಟ್ಟ ಬೆನ್ ಸ್ಟೋಕ್ಸ್‌ ಪರಿತಪಿಸಿದರು.

10ನೇ ಓವರ್‌ನಲ್ಲಿ ಸಿಕ್ಸರ್ ಎತ್ತಿದ ಇಶಾನ್ ಚೊಚ್ಚಲ ಅರ್ಧಶತಕ ದಾಖಲಿಸಿದರು. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಆದರು. ಇದೇ ಓವರ್‌ನಲ್ಲಿ ರಿವರ್ಸ್‌ ಸ್ವೀಪ್‌ ಮಾಡಲು ಯತ್ನಿಸಿದ ಇಶಾನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಯುಡಿಆರ್‌ಎಸ್‌ ಅವಕಾಶ ಪಡೆದರೂ ಪ್ರಯೋಜನವಾಗಲಿಲ್ಲ. ಕೊಹ್ಲಿ ಜೊತೆಗೆ 94 ರನ್‌ಗಳ ಜೊತೆಯಾಟವಾಡಿದರು.

ಇಶಾನ್ ಆಟದಲ್ಲಿ ನಾಲ್ಕು ಸಿಕ್ಸರ್‌ಗಳಿದ್ದವು. ಅವರ ನಂತರ ಕ್ರೀಸ್‌ಗೆ ಬಂದ ರಿಷಭ್ ಪಂತ್ 13 ಎಸೆತಗಳಲ್ಲಿ 26 ರನ್ ಗಳಿಸಿದರು. ತಮ್ಮ ಎಂದಿನ ಉತ್ತಮ ಲಯದಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಹೊಡೆದರು. ಅವರು ಔಟಾದ ಮೇಲೆ ಶ್ರೇಯಸ್ ಅಯ್ಯರ್ ಮತ್ತು ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅದರೊಂದಿಗೆ ಭಾರತದ ಬೌಲರ್‌ಗಳ ಶ್ರಮಕ್ಕೆ ತಕ್ಕ ಫಲ ಲಭಿಸಿತು.

ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಾಹಲ್ ಅವರ ಶಿಸ್ತಿನ ಬೌಲಿಂಗ್ ನಿಂದಾಗಿ ಇಂಗ್ಲೆಂಡ್ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ (46 ರನ್) ಅವರು ಉತ್ತಮ ಕಾಣಿಕೆ ನೀಡಿದರು.

ವಿರಾಟ್ ಕೊಹ್ಲಿ ದಾಖಲೆ

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾದರು.

ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿ ಅಜೇಯ 73 ರನ್ ಗಳಿಸಿದರು. ಈ ಪಂದ್ಯ ಆಡುವ ಮುನ್ನ ಅವರ ಖಾತೆಯಲ್ಲಿ 2928 ರನ್‌ಗಳು ಇದ್ದವು. ಈ ದಾಖಲೆಯ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (2839) ಮತ್ತು ಭಾರತದ ರೋಹಿತ್ ಶರ್ಮಾ (2773) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ತಂದೆಗೆ ಅರ್ಧಶತಕ ಅರ್ಪಣೆ: ಪದಾರ್ಪಣೆ ಪಂದ್ಯದಲ್ಲಿ ತಾವು ದಾಖಲಿಸಿದ ಅರ್ಧಶತಕವನ್ನು ಇಶಾನ್‌ ಕಿಶನ್ ತಮ್ಮ ತಂದೆಗೆ ಅರ್ಪಿಸಿದ್ದಾರೆ.

ಪಂದ್ಯಶ್ರೇಷ್ಠ ಗೌರವ ಗಳಿಸಿದ ನಂತರ ಮಾತನಾಡಿದ ಅವರು, ’ನಾನು ಈ ದಿನಕ್ಕಾಗಿ ಕನಸು ಕಂಡಿದ್ದೆ. ನಾನು ಕ್ರಿಕೆಟಿಗನಾಗಲು ಅಪ್ಪನೇ ಕಾರಣ. ಈ ಸಾಧನೆ ಅವರಿಗೆ ಸಲ್ಲಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT