ಕಿವೀಸ್ ವಿರುದ್ಧ ಏನೇ ತಂತ್ರ ಮಾಡಿದರೂ ಫಲಿಸಲಿಲ್ಲ: ಸಚಿನ್ ತೆಂಡೂಲ್ಕರ್

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಭಾರತ ಏನೇ ತಂತ್ರ ಮಾಡಿದರೂ ಫಲಿಸಲಿಲ್ಲ ಎಂದು ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಪಂದ್ಯದ ಎಲ್ಲ ವಿಭಾಗದಲ್ಲೂ ಭಾರತ ವೈಫಲ್ಯವನ್ನು ಅನುಭವಿಸಿತ್ತು.
ಇದನ್ನೂ ಓದಿ: T20 WC: ಈಗಲೂ ಭಾರತದ ಸೆಮಿಫೈನಲ್ ಪ್ರವೇಶ ಸಾಧ್ಯ; ಹೇಗೆ ಗೊತ್ತಾ?
'ಇದು ನಮ್ಮ ತಂಡಕ್ಕೆ ಅತ್ಯಂತ ಕಠಿಣ ಪಂದ್ಯವಾಗಿತ್ತು. ಆದರೆ ಕೆಲವೊಮ್ಮೆ ಇಂತಹ ದಿನಗಳು ಎದುರಾಗುತ್ತವೆ. ನೀವೂ ಏನೇ ಪ್ರಯತ್ನಿಸಿದರೂ ಫಲಿತಾಂಶ ನಿಮ್ಮ ಪರವಾಗಿರುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೆಚ್ಚೇನು ಚರ್ಚಿಸಲು ಬಾಕಿ ಉಳಿದಿಲ್ಲ. ಮುಂಬರುವ ದಿನಗಳಲ್ಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
'ಪಂದ್ಯದಲ್ಲಿ ನ್ಯೂಜಿಲೆಂಡ್ ಪ್ರಾಬಲ್ಯ ಮೆರೆದಿರುವುದನ್ನು ಗಮನಿಸಿದರೆ ಭಾರತಕ್ಕೆ ಅವಕಾಶವೇ ಇರಲಿಲ್ಲ. ಸುಲಭವಾಗಿ ಸಿಂಗಲ್ಸ್ ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮ ದೊಡ್ಡ ಹೊಡೆತ ಬಾರಿಸುವುದು ಅನಿವಾರ್ಯವೆನಿಸಿತು' ಎಂದು ಹೇಳಿದರು.
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ರಣನೀತಿಯ ಬಗ್ಗೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
'ಮೊದಲ ಎಸೆತದಿಂದಲೂ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ಬದಲಾವಣೆ ಉನ್ನತ ದರ್ಜೆಯಲ್ಲಿದ್ದವು. ಅವರ ರಣನೀತಿ ಅದ್ಭುತವಾಗಿತ್ತು ಎಂದು ನನಗೆ ಅನಿಸಿತು. ಮೊದಲ ಆರು ಓವರ್‌ಗಳಲ್ಲಿ ಭಾರತ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು. ನನ್ನ ಪಾಲಿಗೆ ಆರರಿಂದ 10ನೇ ಓವರ್ ವರೆಗಿನ ಹಂತವು ನಿರ್ಣಾಯಕವೆನಿಸಿತ್ತು. ಈ ಅವಧಿಯಲ್ಲಿ ನಾವು 24 ಎಸೆತಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 13 ರನ್ ಮಾತ್ರ ಗಳಿಸಿದೆವು. ಸುಲಭವಾಗಿ ಒಂಟಿ ರನ್ ಕದಿಯಲು ಸಾಧ್ಯವಾಗಲಿಲ್ಲ. ಪರಿಣಾಮ ಬ್ಯಾಟರ್‌ಗಳು ದೊಡ್ಡ ಹೊಡೆತಕ್ಕೆ ಮುಂದಾದರು. ಇದರಿಂದಾಗಿ ರೋಹಿತ್ ಹಾಗೂ ವಿರಾಟ್ ಔಟ್ ಆದರು' ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.