ಬುಧವಾರ, ಜೂನ್ 29, 2022
25 °C

ಚುಟುಕು ಕ್ರಿಕೆಟ್‌ನಲ್ಲೂ ಮಯಂಕ್ ‘ಧ್ಯಾನ’

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

‘ಈ ರಾತ್ರಿ ನಾವು ನಿರೀಕ್ಷಿಸಿದ ಫಲಿತಾಂಶ ಇದಾಗಿರಲಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಶಕ್ತಿಶಾಲಿಯಾಗಿ ಮರಳಲಿದ್ದೇವೆ’–

ಭಾನುವಾರ  ದುಬೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕ್ರಿಕೆಟ್‌ಪ್ರೇಮಿಗಳ ಮನಗೆದ್ದ ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡದ, ಬೆಂಗಳೂರು ಆಟಗಾರ ಮಯಂಕ್ ಅಗರವಾಲ್ ಟ್ವೀಟ್ ಇದು.

ಈ ಪಂದ್ಯದಲ್ಲಿ ಕಿಂಗ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೂಪರ್‌ ಓವರ್‌ನಲ್ಲಿ ಸೋತಿತು. ಆದರೆ ಸಾಮಾಜಿಕ ಜಾಲತಾಣಗಳ ತುಂಬ ಮಯಂಕ್ ಆವರಿಸಿಕೊಂಡರು. 60 ಎಸೆತಗಳಲ್ಲಿ ಅವರು ಗಳಿಸಿದ 89 ರನ್‌ಗಳು ಸಾಧಾರಣವಲ್ಲ. 158 ರನ್‌ಗಳ ಗೆಲುವಿನ ಗುರಿ ಸಾಧಿಸುವ ಹಾದಿಯಲ್ಲಿ  ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು.  ದೊಡ್ಡ ಅಂತರದ ಸೋಲಿನ ಭೀತಿಯಲ್ಲಿದ್ದ ತಂಡವನ್ನು ಸಮಬಲದ ಸ್ಥಿತಿಗೆ ತಂದು ನಿಲ್ಲಿಸಿದರು.  ಇದೇ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದ ತಮ್ಮ ಮಿತ್ರ ಕೆ.ಎಲ್‌. ರಾಹುಲ್‌ಗೆ ಗೆಲುವಿನ ಕಾಣಿಕೆ ನೀಡುವ ಮಯಂಕ್ ಕನಸು ಮಾತ್ರ ಕೈಗೂಡಲಿಲ್ಲ. 

ಟೆಸ್ಟ್, ರಣಜಿ ಕ್ರಿಕೆಟ್‌ನಲ್ಲಿ ಅವರ ’ಧ್ಯಾನಸ್ಥ‘ ಬ್ಯಾಟಿಂಗ್ ಸವಿದವರಿಗೇನೂ ಕಮ್ಮಿಯಿಲ್ಲ. ಆದರೆ, ಟಿ20 ಮಾದರಿಯಲ್ಲಿಯೂ ಅಂತಹದೊಂದು ಗಟ್ಟಿ ಮನೋಬಲದ, ಧ್ಯಾನಪೂರ್ಣ ಆಟವನ್ನೂ ಆಡಬಹುದೆಂಬುದನ್ನು ಮಯಂಕ್ ತೋರಿಸಿಕೊಟ್ಟರು.  ಆರಂಭಿಕನಾಗಿ ಕ್ರೀಸ್‌ಗೆ ಕಾಲಿಟ್ಟ ಮಯಂಕ್ ತಾವೆದುರಿಸಿದ ಮೊದಲ 39 ಎಸೆತಗಳಲ್ಲಿ ಗಳಿಸಿದ್ದು 38 ರನ್. ನಂತರದ 21 ಎಸೆತಗಳಲ್ಲಿ 51 ರನ್‌ ಸೂರೆ ಮಾಡಿದ್ದು ಅವರ ಏಕಾಗ್ರತೆಯ ಪ್ರತೀಕ.


ಮಯಂಕ್ ಅಗರವಾಲ್ - ಟ್ವಿಟರ್ ಚಿತ್ರ

ವಿಪಶ್ಯನ ಧ್ಯಾನದ ಮೂಲಕ ತಮ್ಮ ಮನಸ್ಸನ್ನು ನಿಯಂತ್ರಿಸಿಕೊಳ್ಳುವ ತಂತ್ರ ಕರಗತ ಮಾಡಿಕೊಂಡಿರುವ ಮಯಂಕ್‌,  ಕೋವಿಡ್ ಕಾಲದ ಒತ್ತಡಗಳನ್ನು ಮೀರಿ ನಿಲ್ಲುವ ಛಾತಿಯನ್ನು ತೋರಿಸಿದ್ದಾರೆ. ಡೆಲ್ಲಿ ತಂಡದ ಗೆಲುವಿನ ರೂವಾರಿ ಮಾರ್ಕಸ್‌ ಸ್ಟೋಯಿನಿಸ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸುವ ಪ್ರಬುದ್ಧತೆಯೂ ಅವರದ್ದು. ಮಯಂಕ್ ಆಟ ಮತ್ತು ನಡವಳಿಕೆಯಲ್ಲಿ ಮಹೇಂದ್ರಸಿಂಗ್ ಧೋನಿಯ ಛಾಪು ಇಣುಕುತ್ತಿದೆ ಎಂದೂ ಕೆಲವರು ಟ್ವೀಟ್ ಮಾಡಿದ್ದಾರೆ.   ಮಯಂಕ್ ಆಟ ಈಗ ಶುರುವಾಗಿದೆ. ಸಾಗುವ ಹಾದಿ ಇನ್ನೂ ಬಹಳ ಇದೆ.

***

ಚೆಂದದ ಆಟಕ್ಕೆ ತಂಡ ಗೆಲ್ಲಲೇಬೇಕಿತ್ತು

ಕೋವಿಡ್  ಕಾಲದಲ್ಲಿ ಮನೋಲ್ಲಾಸ ಹೆಚ್ಚಿಸುವಂತಹ ಆಟ ನಿನ್ನದು ಗೆಳೆಯ. ಅದ್ಭುತವಾಗಿ ಆಡಿದೆ.  ನಿನ್ನ ಚೆಂದದ ಆಟಕ್ಕೆ ತಂಡ ಗೆಲ್ಲಲೇಬೇಕಿತ್ತು. ನೀನು ಸೂಪರ್‌ ಓವರ್‌ನಲ್ಲಿರಬೇಕಿತ್ತು. ಏನೇ ಆಗಲಿ.  ನಿನ್ನ ಬಗ್ಗೆ ಅಪಾರ ಹೆಮ್ಮೆಯೆನಿಸುತ್ತಿದೆ.

 – ಕಿಚ್ಚ ಸುದೀಪ್ ಚಿತ್ರನಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು