ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕ ಸಂಭ್ರಮದಲ್ಲಿ ರಾಹುಲ್ ಕಿವಿ ಮುಚ್ಚಿಕೊಳ್ಳುವುದೇಕೆ?

Last Updated 26 ಮಾರ್ಚ್ 2021, 15:02 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಿಗ ಕೆ.ಎಲ್. ರಾಹುಲ್ ತಾವು ಶತಕ ಹೊಡೆದಾಗಲೊಮ್ಮೆ ಎರಡೂ ಕಿವಿಗಳನ್ನು ಮುಚ್ಚಿಕೊಂಡು ಕಣ್ಮುಚ್ಚಿ ನಿಂತು ತಮ್ಮ ಸಂಭ್ರಮ ಸೂಚಿಸುತ್ತಾರೆ. ಇದರ ಹಿಂದಿನ ಗುಟ್ಟು ಏನಿರಬಹುದು?

ತಾವು ವಿಫಲರಾದಾಗಲೆಲ್ಲ ಟೀಕಿಸಿದವರ ನುಡಿಗಳು, ಸತತವಾಗಿ ರನ್‌ ಬರ ಎದುರಿಸಿದಾಗ ಕಿತ್ತೊಗೆಯಬೇಕು ಎಂದು ಬೊಬ್ಬಿರಿದವರ ಯಾವ ಸದ್ದು, ಗದ್ದಲಗಳು ಕಿವಿಯಲ್ಲಿ ಇಳಿದಿಲ್ಲ. ಶಾಂತಚಿತ್ತವೇ ಅಸ್ತ್ರ ಎಂಬ ಸಂದೇಶ ಇರಬಹುದೇ?

ಅವರ ಆಪ್ತವಲಯದಲ್ಲಿರುವ ಸ್ನೇಹಿತರ ಪ್ರಕಾರ ಈ ಉತ್ತರ ಸರಿ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ (108; 114ಎಸೆತ, 7ಬೌಂಡರಿ, 2ಸಿಕ್ಸರ್ ) ಗಳಿಸಿದ ನಂತರ ಕಿವಿಗಳಿಗೆ ಬೆರಳಿಟ್ಟುಕೊಂಡು ನಿಂತ ರಾಹುಲ್ ಬಗ್ಗೆ ಟಿವಿ ವೀಕ್ಷಕ ವಿವರಣೆಕಾರರೂ ಇದೇ ಮಾತನ್ನು ಹೇಳಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕದ ಸಾಧನೆಗಾಗಿ ರಾಹುಲ್, ಕಳೆದ ನಾಲ್ಕು ತಿಂಗಳುಗಳಿಂದ ಪರಿತಪಿಸಿದ್ದರು. ಆದರೆ ಕಾಲ ಕೂಡಿಬಂದಿದ್ದು ಈಗ. ಅಷ್ಟಕ್ಕೂ ರಾಹುಲ್ ಈ ಮಾದರಿಯಲ್ಲಿ ಶತಕ ಗಳಿಸಿದ್ದು ಸುಮಾರು ಒಂದು ವರ್ಷದ ನಂತರ. ಕೊನೆಗೂ ತಮ್ಮ ಲಯ ಕಂಡುಕೊಳ್ಳುವಲ್ಲಿ ಸಫಲರಾಗಿರುವ ಕನ್ನಡಿಗ ರಾಹುಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿಯವರ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಅಲ್ಲದೇ ಟೀಕಾಕಾರರಿಗೂ ಉತ್ತರ ನೀಡಿದ್ದಾರೆ.

2020ರ ಫೆಬ್ರುವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಅವರು ಶತಕ ಹೊಡೆದಿದ್ದರು. ಅದರ ನಂತರ ಕೊರೊನಾ ಹಾವಳಿಯಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿದ್ದವು. ಅಕ್ಟೋಬರ್‌–ನವೆಂಬರ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ರಾಹುಲ್ ಗೆಳೆಯ ಮಯಂಕ್ ಅಗರವಾಲ್ ಜೊತೆಗೆ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ರನ್‌ಗಳನ್ನು ಸೂರೆ ಮಾಡಿದ್ದರು.

ಆದರೆ, ನವೆಂಬರ್– ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರ ಆಟ ರಂಗೇರಲಿಲ್ಲ. ಅಲ್ಲಿ ಆಡಿದ್ದ ಎರಡು ಏಕದಿನ ಪಂದ್ಯಗಳಲ್ಲಿಯೂ ಗಮನ ಸೆಳೆಯಲಿಲ್ಲ. ಟೆಸ್ಟ್ ಸರಣಿಯ ಸಂದರ್ಭದಲ್ಲಿ ಗಾಯಗೊಂಡು ತವರಿಗೆ ಮರಳಿದ್ದರು. ಇಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅವರು ತಂಡದಲ್ಲಿದ್ದರು. ಅದರೆ, ಅಂತಿಮ ಹನ್ನೊಂದರಲ್ಲಿ ಸ್ಥಾನ ಲಭಿಸಿರಲಿಲ್ಲ. ಬೆಂಚ್ ಕಾದಿದ್ದೇ ಹೆಚ್ಚು.

ಟಿ20 ಸರಣಿಯಲ್ಲಿಯೂ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ನಿರೀಕ್ಷೆಗೆ ತಕ್ಕಂತೆ ಆಡಿರಲಿಲ್ಲ. ಆದರೂ ಅವರಿಗೆ ಅವಕಾಶಗಳನ್ನು ಕೊಡುವಲ್ಲಿ ತಂಡದ ವ್ಯವಸ್ಥಾಪನ ಮಂಡಳಿ ಔದಾರ್ಯ ತೋರಿತ್ತು.

‘ರಾಹುಲ್ ಪ್ರತಿಭಾವಂತ ಆಟಗಾರ. ಈಗಲೂ ಪುಟಿದೇಳುವ ಸಾಮರ್ಥ್ಯ ಇದೆ. ಅವರ ಬಗ್ಗೆ ಈಗಲೇ ಕಠಿಣ ನಿಲುವು ತಳೆಯುವ ಅಗತ್ಯವಿಲ್ಲ‘ ಎಂದು ಸ್ವತಃ ಕೊಹ್ಲಿಯೇ ಹೇಳಿದ್ದರು.

ಚುಟುಕು ಸರಣಿಯ ವೈಫಲ್ಯದ ನಂತರವೂ ಏಕದಿನ ಸರಣಿಯಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ ಅವರ ಇಬ್ಬರೂ ಸ್ನೇಹಿತರಾದ ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ ಅವರು ಆಯ್ಕೆಯಾಗಲಿಲ್ಲ.

ಏಕದಿನ ಸರಣಿಯಲ್ಲಿ ಎರಡನೇ ವಿಕೆಟ್‌ಕೀಪರ್ ಆಗಿಯೂ ರಾಹುಲ್ ಸ್ಥಾನ ಪಡೆದುಕೊಂಡಿದ್ದಾರೆ. ಇಲ್ಲಿ ಅವರ ಕ್ರಮಾಂಕ ಬದಲಿಸಿದ್ದು ವರದಾನವಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಹೊಸ ಚೆಂಡು ಎದುರಿಸುವ ಪರದಾಟದಿಂದ ಹೊರಬರಲು ಅವರಿಗೆ ಸಾಧ್ಯವಾಯಿತು. ಮೊದಲ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಾಹುಲ್ ಅಜೇಯ ಅರ್ಧಶತಕ ಗಳಿಸಿದ್ದರು. ಕೃಣಾಲ್ ಪಾಂಡ್ಯ ಜೊತೆಗೆ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 113 ರನ್‌ ಪೇರಿಸಿದ್ದರು.

ಎರಡನೇ ಪಂದ್ಯದಲ್ಲಿ; ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಹುಲ್ ನಾಯಕ ಕೊಹ್ಲಿಯೊಂದಿಗೆ ಸುಂದರ ಇನಿಂಗ್ಸ್‌ ಕಟ್ಟಿದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ 121 ರನ್‌ಗಳನ್ನು ಸೇರಿಸಿದರು. ಇದು ತಂಡವು ದೊಡ್ಡ ಮೊತ್ತ ಗಳಿಸಲು ಅಡಿಪಾಯವಾಯಿತು. 37 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ತಂಡವು ರಾಹುಲ್ ಪ್ರಮುಖ ಪಾತ್ರ ನಿರ್ವಹಿಸಿದ ಎರಡು ಜೊತೆಯಾಟಗಳಿಂದಾಗಿ 336 ರನ್‌ಗಳ ಮೊತ್ತದವರೆಗೆ ಬೆಳೆಯಿತು.

ಇಂತಹ ಏಳು ಬೀಳುಗಳನ್ನು ರಾಹುಲ್ ಈ ಹಿಂದೆಯೂ ಕಂಡಿದ್ದಾರೆ. 2019ರಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಅವರು ಮನೆಗೆ ಮರಳಿದ್ದರು. ಆದರೆ ಸುಮ್ಮನೇ ಕೂರಲಿಲ್ಲ. ಬ್ಯಾಟ್‌ನೊಂದಿಗೆ ಕೀಪಿಂಗ್‌ ಗ್ಲೌಸ್‌ ಜೊತೆಗೂ ಕೈಜೋಡಿಸಿದರು. ನೆಟ್ಸ್‌ನಲ್ಲಿ ಪ್ರತಿದಿನ ಸಾವಿರ ಎಸೆತಗಳಿಗೆ ಎದೆಗೊಟ್ಟರು. ಕ್ಯಾಚ್ ಪ್ರಾಕ್ಟಿಸ್ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಮನಸ್ಸನ್ನು ಸ್ಥಿರಗೊಳಿಸಿಕೊಳ್ಳುವ ಕಲೆಯನ್ನು ಕರಗತಮಾಡಿಕೊಳ್ಳುವತ್ತ ಚಿತ್ತ ನೆಟ್ಟರು. ಧ್ಯಾನಕ್ಕೆ ಮೊರೆ ಹೋದರು. ಇದೆಲ್ಲದರ ಫಲವಾಗಿ ಏಕಾಗ್ರತೆ ಸಿದ್ಧಿಸಿತು. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅಮೋಘವಾದ ಸಾಧನೆ ಮಾಡಿದರು. ಭಾರತ ತಂಡದಿಂದ ಮತ್ತೆ ಬುಲಾವ್ ಬಂದಿತು.

ಅಲ್ಲಿ ಏಕಾಗ್ರತೆ ಮತ್ತು ಲಯದ ಕೊರತೆ ಅನುಭವಿಸಿ ಹೊರ ಉಳಿದಿದ್ದ ರಿಷಭ್ ಪಂತ್ ಬದಲಿಗೆ ಕೀಪಿಂಗ್ ಹೊಣೆಯನ್ನೂ ರಾಹುಲ್ ಅಚ್ಚುಕಟ್ಟಾಗಿ ನಿರ್ವಹಿಸಿದರು. ಬ್ಯಾಟಿಂಗ್‌ನಲ್ಲಿ ಮಧ್ಯಕ್ರಮಾಂಕದಲ್ಲಿ ಮಿಂಚಿದ್ದರು. ಆದರೆ ಈ ಸಲ ಅವರಿಗೆ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ.

ಬಯೋಬಬಲ್‌ ಒತ್ತಡ ಮತ್ತು ತಂಡದಲ್ಲಿ ಮಿಂಚುತ್ತಿರುವ ಹೊಸ ಹುಡುಗರ ಪೈಪೋಟಿಯ ನಡುವೆಯೂ ಸ್ಥಾನ ಉಳಿಸಿಕೊಳ್ಳುವ ನಿರಂತರ ಪ್ರಯತ್ನಕ್ಕೆ ರಾಹುಲ್‌ ಪುಣೆಯಲ್ಲಿ ಫಲ ಪಡೆದಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ತಮ್ಮ ಆಟಕ್ಕೆ ಮತ್ತಷ್ಟು ಸಾಣೆ ಹಿಡಿದು ಹೊಳಪು ನೀಡಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಆಡುವ ಸಾಧ್ಯತೆಗಳು ಹೆಚ್ಚಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT