ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹಾಲಿ ನೆಟ್ಸ್‌ನಲ್ಲಿ ವಿರಾಟ್ ತಾಲೀಮು

ವಿಶ್ವಕಪ್ ಟೂರ್ನಿಗೂ ಮುನ್ನ ‘ಆರಾಮ ವಲಯ’ ಬಿಡಿ: ರೋಹಿತ್ ಸಲಹೆ
Last Updated 18 ಸೆಪ್ಟೆಂಬರ್ 2022, 17:28 IST
ಅಕ್ಷರ ಗಾತ್ರ

ಮೊಹಾಲಿ: ದುಬೈನಲ್ಲಿ ಈಚೆಗೆ ಮುಗಿದ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಶತಕ ಬಾರಿಸುವ ಮೂಲಕ ದೀರ್ಘ ಸಮಯದ ನಂತರ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ ಈಗ ಬಲಿಷ್ಠ ಆಸ್ಟ್ರೇಲಿಯಾ ಎದುರು ಅಬ್ಬರಿಸುವ ಛಲದಲ್ಲಿದ್ದಾರೆ.

ಮಂಗಳವಾರ ಪಂಜಾಬ್‌ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯಕ್ಕಾಗಿ ಭಾನುವಾರ ನೆಟ್ಸ್‌ನಲ್ಲಿ ವಿರಾಟ್ ಬ್ಯಾಟಿಂಗ್ ಅಭ್ಯಾಸ ಮಾಡಿದ ರೀತಿಯಲ್ಲಿಯೇ ಅವರ ಉದ್ಧೇಶ ಸ್ಪಷ್ಟವಾಗಿ ಕಾಣುತ್ತಿತ್ತು.

ಸುಮಾರು 45 ನಿಮಿಷ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ ಅವರು, ಶಾರ್ಟ್‌ಬಾಲ್‌ಗಳನ್ನು ಎದುರಿಸುವತ್ತ ಚಿತ್ತ ನೆಟ್ಟರು. ವೇಗವಾಗಿ ಪುಟಿದು ಬರುವ ಎಸೆತಗಳನ್ನು ತಾವು ಎಡವುತ್ತಿರುವುದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು. ವೇಗದ ಬೌಲರ್‌ಗಳ ಎಸೆತಗಳಲ್ಲಿ ಪುಲ್‌ ಶಾಟ್‌ಗಳನ್ನು ಅಭ್ಯಾಸ ಮಾಡಿದರು. ಸ್ಪಿನ್ನರ್‌ಗಳಿಗೆ ಮುಂದಡಿ ಇಟ್ಟು ಬ್ಯಾಟ್ ಮಾಡುವ ಕೌಶಲದ ತಾಲೀಮು ನಡೆಸಿದರು.

ಏಷ್ಯಾ ಕಪ್ ಟೂರ್ನಿಯಲ್ಲಿ ಆಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಅವರು ಭಾರತದ ಇನಿಂಗ್ಸ್‌ ಆರಂಭಿಸಿದ್ದರು. ಸುಮಾರು 34 ತಿಂಗಳುಗಳಿಂದ ಅವರು ಎದುರಿಸಿದ್ದ ಶತಕದ ಬರ ಅಂದು ನೀಗಿತ್ತು. ಇದು ಅವರ ಆತ್ಮವಿಶ್ವಾಸವನ್ನು ವೃದ್ಧಿಸಿದೆ.

ಟಿ20 ವಿಶ್ವಕಪ್ ಟೂರ್ನಿಯು ಮುಂದಿನ ತಿಂಗಳು 16ರಂದು ಆರಂಭವಾಗಲಿದೆ. ಅದಕ್ಕೂ ಮುನ್ನ ಭಾರತವು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಸರಣಿಗಳಲ್ಲಿ ಆಡಲಿದೆ. ಈ ಎರಡೂ ಸರಣಿಗಳು ತಂಡಕ್ಕೆ ಪೂರ್ವಸಿದ್ಧತೆಗೆ ವೇದಿಕೆಯಾಗಲಿವೆ.

ಆರಾಮ ವಲಯ ಬಿಡಿ: ಶರ್ಮಾ

‘ಟಿ20 ವಿಶ್ವಕಪ್ ಟೂರ್ನಿಗೆ ಹೆಚ್ಚು ಸಮಯ ಉಳಿದಿಲ್ಲ. ಈಗ ಇರುವ ಎರಡು ಸರಣಿಗಳಲ್ಲಿ ನಮ್ಮ ಆಟಗಾರರು ತಮ್ಮ ಕೌಶಲಗಳನ್ನು ಉತ್ತಮಪಡಿಸಿಕೊಂಡು ಹೊಸ ತಂತ್ರಗಳನ್ನು ರೂಢಿಸಿಕೊಳ್ಳಬೇಕು. ಆರಾಮ ವಲಯ ಬಿಟ್ಟು ಸೃಜನಾತ್ಮಕವಾಗಿ ಚಿಂತಿಸಬೇಕು‌’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಈಚೆಗೆ ಯುಎಇಯಲ್ಲಿ ನಡೆದ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಭಾರತ ತಂಡವು ಸೂಪರ್ ಫೋರ್ ಹಂತದಲ್ಲಿ ನಿರ್ಗಮಿಸಿತ್ತು. ಅದರಿಂದಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಸರಣಿಗಳನ್ನು ಗಂಭೀರವಾಗಿ ಪರಿಗಣಿಸಲು ಶರ್ಮಾ ಹೇಳಿದ್ದಾರೆ.

‘ತಂಡದಲ್ಲಿ ಆಟಗಾರರಿಗೆ ಸುರಕ್ಷತಾ ಭಾವ ತರುವುದು ನನ್ನ ಉದ್ದೇಶವಾಗಿತ್ತು. ಆದ್ದರಿಂದಲೇ ಈ ಎರಡೂ ಸರಣಿಗಳಿಗಿಂತಲೂ ಮುನ್ನವೇ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ತಂಡವನ್ನು ಪ್ರಕಟಿಸಲಾಗಿದೆ' ಎಂದು ರೋಹಿತ್ ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT