ಶನಿವಾರ, ಜನವರಿ 18, 2020
27 °C

INDvsWI | ಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ಎಂದರೆ ಹಲವು ತಂಡಗಳಿಗೆ ಭಯವಿದೆ: ಲಾರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಭಾರತ–ವೆಸ್ಟ್‌ ವಿಂಡೀಸ್‌ ಟಿ20 ಹಾಗೂ ಏಕದಿನ ಕ್ರಿಕೆಟ್‌ ಸರಣಿ ಇಂದಿನಿಂದ ಆರಂಭವಾಗಲಿದೆ. ತಂಡಗಳ ಇತ್ತೀಚಿನ ಪ್ರದರ್ಶನದ ಆಧಾರದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಆದರೆ, ವಿಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಯಾನ್‌ ಲಾರಾ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡ ಪುಟಿದೇಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರ ನಿಮಿತ್ತ ಮುಂಬೈಗೆ ಆಗಮಿಸಿರುವ ಲಾರಾ, ಭಾರತ–ವಿಂಡೀಸ್‌ ಸರಣಿ ಸಂಬಂಧ ಮಾತನಾಡಿದರು. ಈ ವೇಳೆ ಅವರು, ‘ವಿಂಡೀಸ್‌ ತಂಡ ಟಿ20 ಕ್ರಿಕೆಟ್‌ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ ಎನಿಸಿದೆ. ಹಾಗಾಗಿ ವಿಶ್ವದ ಹಲವು ತಂಡಗಳು ಚುಟುಕು ಕ್ರಿಕೆಟ್‌ನಲ್ಲಿ ವಿಂಡೀಸ್‌ಗೆ ಹೆದರುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 400 ಸಿಕ್ಸರ್ ಸಿಡಿಸಿದವರ ಪಟ್ಟಿ ಸೇರಲು ರೋಹಿತ್ ಶರ್ಮಾಗೆ ಬೇಕು ಇನ್ನೊಂದು ಸಿಕ್ಸ್‌

ವಿಂಡೀಸ್‌ ತಂಡದ ನಾಯಕತ್ವವನ್ನು ಅಚ್ಚರಿ ಎಂಬಂತೆ ಕೀರನ್‌ ಪೊಲಾರ್ಡ್‌ ವಹಿಸಿಕೊಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ವಿಂಡೀಸ್‌ ಪರ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ. ಹಾಗಾಗಿ ಈ ನಿರ್ಧಾರವು ತಂಡದಲ್ಲಿರುವ ಇತರ ಹಿರಿಯ ಆಟಗಾರರಲ್ಲಿ ಬೇಸರ ಮೂಡಿಸಿದೆ ಎಂಬ ಮಾತು ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಲಾರಾ, ‘ಈಚಿನ ದಿನಗಳಲ್ಲಿ ಪೊಲಾರ್ಡ್‌, ವಿಂಡೀಸ್‌ ಪರ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದೆ ಇರಬಹುದು. ಆದರೆ, ವಿಶ್ವದ ವಿವಿಧ ದೇಶಗಳಲ್ಲಿ ನಡೆಯುವ ಸಾಕಷ್ಟು ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಎದುರಾಳಿ ಆಟಗಾರರಿಂದಲೂ ಸಾಕಷ್ಟು ಗೌರವ ಸಂಪಾದಿಸಿದ್ದಾರೆ. ಇದು (ಪೊಲಾರ್ಡ್‌ಗೆ ನಾಯಕತ್ವ ವಹಿಸಿರುವುದು) ತಪ್ಪು ನಿರ್ಧಾರ ಎಂದು ನಾನು ಯೋಚಿಸಿಲ್ಲ’ ಎಂದಿದ್ದಾರೆ.

‘ಇನ್ನು 12 ತಿಂಗಳೊಳಗಾಗಿ ಟಿ20 ವಿಶ್ವಕಪ್‌ ನಡೆಯಲಿದೆ. ಅದಕ್ಕಾಗಿ ತಂಡ ಮುನ್ನಡೆಸಬಲ್ಲ ಸೂಕ್ತ ವ್ಯಕ್ತಿಯನ್ನು ಆರಿಸಬೇಕಿದೆ. ಪೊಲಾರ್ಡ್‌ಗೆ ಆ ಅನುಭವವಿದೆ. ಇದು ಸರಿಯಾದ ನಿರ್ಧಾರ. ಆದಾಗ್ಯೂ ಇದನ್ನು ನಿರ್ವಹಿಸುವುದು ಸುಲಭವೇನಲ್ಲ’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತ ಪ್ರವಾಸದಿಂದ ಹಿಂದೆ ಸರಿದ ಗೇಲ್

ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ಟೀಯ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7ಕ್ಕೆ ಮೊದಲ ಪಂದ್ಯ ಆರಂಭವಾಗಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ತಿರುವನಂತಪುರಂ (ಡಿ.08) ಹಾಗೂ ಮುಂಬೈನಲ್ಲಿ (ಡಿ. 11) ನಡೆಯಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು