ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

INDvsWI: ಗಾಯಾಳು ಧವನ್ ಏಕದಿನ ಸರಣಿಗೂ ಅಲಭ್ಯ; ಕನ್ನಡಿಗ ಮಯಂಕ್‌ಗೆ ಬುಲಾವ್!

ಭಾರತ–ವಿಂಡೀಸ್‌ ಮೂರು ಪಂದ್ಯಗಳ ಸರಣಿ
Last Updated 11 ಡಿಸೆಂಬರ್ 2019, 7:14 IST
ಅಕ್ಷರ ಗಾತ್ರ

ನವದೆಹಲಿ: ಗಾಯಗೊಂಡು ವಿಶ್ರಾಂತಿಯಲ್ಲಿರುವ ಕಾರಣ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಿಂದ ದೂರ ಉಳಿದಿದ್ದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಇದೀಗ ಏಕದಿನ ಕ್ರಿಕೆಟ್‌ ಸರಣಿಗೂ ಅಲಭ್ಯರಾಗಿದ್ದಾರೆ. ಹೀಗಾಗಿ ಕರ್ನಾಟಕದ ರನ್‌ ಯಂತ್ರಮಯಂಕ್‌ ಅಗರವಾಲ್‌ ಅವರು ತಂಡ ಕೂಡಿಕೊಳ್ಳುವ ಸಾಧ್ಯತೆ ಇದೆ.

ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯ ಮಹಾರಾಷ್ಟ್ರ ಎದುರಿನ ಪಂದ್ಯದ ವೇಳೆ ಗಾಯಗೊಂಡಿದ್ದ ಶಿಖರ್ ಧವನ್ ಇನ್ನೂ ಚೇತರಿಸಿಕೊಂಡಿಲ್ಲ. ಅವರ ಎಡ ಮೊಣಕಾಲಿಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಸದ್ಯ ನಡೆಯುತ್ತಿರುವ ಟಿ20 ಸರಣಿಗೆ ಅವರ ಬದಲು ಕೇರಳದ ಸಂಜು ಸ್ಯಾಮ್ಸನ್‌ ತಂಡ ಅವಕಾಶ ಪಡೆದಿದ್ದರು. ಧವನ್‌ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್‌. ರಾಹುಲ್‌ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಧವನ್‌ ಬದಲು ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಂಕ್‌, ಎರಡು ದ್ವಿಶತಕ ಗಳಿಸಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಹೀಗಾಗಿ ವರ್ಷಾಂತ್ಯದ ಏಕದಿನ ಸರಣಿಯಲ್ಲಿಯೂ ಮಯಂಕ್‌ಗೆ ಸ್ಥಾನ ನೀಡಲು, ಆಯ್ಕೆ ಸಮಿತಿ ನಿರ್ಧರಿಸಿದೆ.

ಮಯಂಕ್ ಜೊತೆಗೆ ಪೃಥ್ವಿ ಶಾ, ಶುಭಮನ್‌ ಗಿಲ್‌ ಕಣದಲ್ಲಿ
ತಂಡದ ಆಡಳಿತಾಧಿಕಾರಿಗಳ ಜೊತೆ ನಡೆಸಿದ ಸಭೆ ಬಳಿಕ,ಆಯ್ಕೆ ಸಮಿತಿಯು ಶಿಖರ್‌ ಸ್ಥಾನಕ್ಕೆ ಮಯಂಕ್‌ ಅಗರವಾಲ್‌ ಅವರ ಹೆಸರನ್ನು ಸೂಚಿಸಿದೆ. ಧವನ್‌ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ಮಯಂಕ್‌ ಮಾತ್ರವಲ್ಲದೆ, ಮತ್ತೆರಡು ಆಯ್ಕೆಗಳಾಗಿ ಪೃಥ್ವಿ ಶಾ, ಶುಭಮನ್‌ ಗಿಲ್‌ ಅವರೂ ಆಯ್ಕೆ ಸಮಿತಿ ಮುಂದಿದ್ದರು. ಆದರೆ, ಲಿಸ್‌ ‘ಎ’ ಏಕದಿನ ಕ್ರಿಕೆಟ್‌ನಲ್ಲಿ 50ರ ಸರಾಸರಿ ಮತ್ತು 100ಕ್ಕಿಂತ ಹೆಚ್ಚು ಸ್ಟ್ರೈಕ್‌ರೇಟ್‌ನೊಂದಿಗೆ 13 ಶತಕಗಳನ್ನೂ ಬಾರಿಸಿರುವ ಮಯಂಕ್‌ರನ್ನು ಏಕದಿನ ಮಾದರಿಯಲ್ಲಿಯೂ ಪ್ರಯೋಗಿಸಬಹುದು (ಕಣಕ್ಕಿಳಿಸಬಹುದು) ಎಂದು ತಂಡದಆಡಳಿತ ಮಂಡಳಿ ನಂಬಿದೆ’ ಎಂದೂ ತಿಳಿದುಬಂದಿದೆ.

ಸದ್ಯ ಮಯಂಕ್,ದಿಂಡಿಗಲ್‌ನಲ್ಲಿ ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಆಡುತ್ತಿದ್ದಾರೆ. ಭಾರತ ತಂಡದ ಪರ ಆಡುವುದು ಖಚಿತವಾದರೆ, ಅವರು ಚೆನ್ನೈನಲ್ಲಿ ವಿರಾಟ್‌ ಕೊಹ್ಲಿ ಬಳಗವನ್ನು ಸೇರಿಕೊಳ್ಳಲಿದ್ದಾರೆ.

ಭಾರತ ಪರ 9 ಟೆಸ್ಟ್‌ ಪಂದ್ಯ ಆಡಿರುವ ಮಯಂಕ್‌, 67ರ ಸರಾಸರಿಯಲ್ಲಿ 872 ರನ್‌ ಗಳಿಸಿದ್ದಾರೆ. ಲಿಸ್‌ ‘ಎ’ ಏಕದಿನ ಮಾದರಿಯಲ್ಲಿ ಒಟ್ಟು 79 ಪಂದ್ಯಗಳನ್ನು ಆಡಿದ್ದು,3,869 ರನ್‌ ಕಲೆಹಾಕಿದ್ದಾರೆ.

ವಿಂಡೀಸ್‌ ವಿರುದ್ಧ ಏಕದಿನ ಪಂದ್ಯಗಳು ಚೆನ್ನೈ, ವಿಶಾಖಪಟ್ಟಣ ಹಾಗೂ ಕಟಕ್‌ನಲ್ಲಿಕ್ರಮವಾಗಿ ಡಿಸೆಂಬರ್‌ 15, ಡಿ.18 ಮತ್ತು ಡಿ.22ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT