ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಎದುರಿಲು ಕೊಹ್ಲಿಯ ಛಲದ ಹೋರಾಟವೇ ಮಾದರಿ: ನರೇಂದ್ರ ಮೋದಿ

ಖ್ಯಾತನಾಮ ಕ್ರೀಡಾಪಟುಗಳೊಂದಿಗೆ ವಿಡಿಯೊ ಸಂವಾದ
Last Updated 4 ಏಪ್ರಿಲ್ 2020, 3:33 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಂಡದ ಗೆಲುವಿಗಾಗಿ ಮಾಡುವ ಛಲದ ಹೋರಾಟದಂತೆ ನಾವೆಲ್ಲರೂ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.

ದೇಶದ ಕ್ರೀಡಾ ತಾರೆಗಳೊಂದಿಗೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದ ಮೋದಿಯವರು ಈ ಮಾತು ಹೇಳಿದರು ಎಂದು ಒಲಿಂಪಿಯನ್ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಮಾಹಿತಿ ನೀಡಿದರು.

ಬೆಳಿಗ್ಗೆ 11 ಗಂಟೆಯಿಂದ ಒಂದು ಗಂಟೆ ನಡೆದ ಸಂವಾದದಲ್ಲಿ ಅವರು 40ಕ್ಕೂ ಹೆಚ್ಚು ಕ್ರೀಡಾಪಟುಗಳೊಂದಿಗೆ ಮಾತನಾಡಿದರು.

ಸಂವಾದದ ಭಾಗವಹಿಸಿದ್ದ ಕ್ರೀಡಾಪಟು ಅಭಿಷೇಕ್ ವರ್ಮಾ, ‘ಕೊರೊನಾ ಹೋರಾಟದ ಮುಂಚೂಣಿಯಲ್ಲಿರುವ ವಿವಿಧ ವೃತ್ತಿಪರರ ಕೆಲಸಗಳನ್ನು ಪ್ರೋತ್ಸಾಹಿಸಬೇಕು. ನಿಮ್ಮ ವೈಯಕ್ತಿಕ ಹಾಗೂ ಕುಟುಂಬಗಳ ಕ್ಷೇಮವನ್ನು ನೋಡಿಕೊಳ್ಳಿರಿ. ಯಾವುದಾದರೂ ಸಲಹೆಗಳು ಇದ್ದರೆ ಇ ಮೇಲ್ ಮಾಡಿ ಎಂದು ಪ್ರಧಾನಮಂತ್ರಿ ಹೇಳಿದರು’ ಎಂದರು.

ಕೊರೊನಾ ಪಿಡುಗು ಎದುರಿಸಲು ನಡೆಯುತ್ತಿರುವ ಹೋರಾಟದಲ್ಲಿ ಕ್ರೀಡಾಪಟುಗಳು ಸಮಾಜದಲ್ಲಿ ಜಾಗೃತಿ ಮೂಡಿಸಲು ಬೆಂಬಲಿಸಬೇಕು ಎಂದು ಮೋದಿ ಮನವಿ ಮಾಡಿಕೊಂಡರು.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲು ಹೆಚ್ಚಿನ ಮಹತ್ವ ನೀಡಿ ಎಂದೂ ಅವರು ಪದೇ ಪದೇ ಮನವಿ ಮಾಡಿದರು.

ಒಲಿಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಬಾಕ್ಸಿಂಗ್ ಪಟು ಎಂ.ಸಿ. ಮೇರಿ ಕೋಮ್, ಹಾಕಿ ಆಟಗಾರ್ತಿ ರಾಣಿ ರಾಂಪಾಲ್, ಶೂಟಿಂಗ್ ಪಟು ಮನು ಭಾಕರ್ ಮತ್ತಿತರರು ಹಾಜರಿದ್ದರು. ಆದರೆ, ಇಂಟರ್‌ನೆಟ್‌ ನಲ್ಲಿ ಅಡೆತಡೆಯಾದ ಕಾರಣ ಮೇರಿ ಕೋಮ್ ಅವರೊಂದಿಗೆ ಮೋದಿಯವರ ಮಾತುಕತೆ ನಡೆಯಲಿಲ್ಲವೆನ್ನಲಾಗಿದೆ. ಮಹೇಂದ್ರಸಿಂಗ್ ಧೋನಿ ಮತ್ತು ಕೆ.ಎಲ್. ರಾಹುಲ್ ಅವರಿಗೂ ಆಹ್ವಾನ ಇತ್ತು. ಆದರೆ ಅವರು ಭಾಗವಹಿಸಿದ್ದು ಖಚಿತವಾಗಿಲ್ಲ ಎನ್ನಲಾಗಿದೆ.

ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಕಾರಣ ಐಪಿಎಲ್ ಸೇರಿದಂತೆ ಹಲವು ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿ ತಾರಕಕ್ಕೇರಿದ್ದು, ಒಲಿಂಪಿಕ್ ಕೂಟವನ್ನೂ ಮುಂದೂಡಲಾಗಿದೆ. ಈ ಬಾರಿ ವಿಂಬಲ್ಡನ್‌ ಟೆನಿಸ್ ಚಾಂಪಿಯನ್‌ಷಿಪ್ ಕೂಡ ರದ್ದಾಗಿದೆ.

*
ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ಕಲ್ಲೆಸೆದವರಿಗೆ ಕಠಿಣ ಶಿಕ್ಷೆ ನೀಡಿ.
-ಹಿಮಾ ದಾಸ್, ಅಂತರರಾಷ್ಟ್ರೀಯ ಅಥ್ಲೀಟ್

*
ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ವೈದ್ಯರು, ದಾದಿಯರ ಮೇಲೆ ಇಂದೋರ್‌ನಲ್ಲಿ ದಾಳಿ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
–ಭೈಚುಂಗ್ ಭುಟಿಯಾ,ಹಿರಿಯ ಫುಟ್‌ಬಾಲ್ ಆಟಗಾರ

*
ಸಾಮಾಜಿಕ ಅಂತರ ಕಾಪಾಡುವುದೇ ನೂತನವಾದ ಒಗ್ಗಟ್ಟಿನ ಮಾದರಿಯಾಗಿದೆ. ನಾವು ಮತ್ತು ನಮ್ಮ ದೇಶವನ್ನು ಕೊರೊನಾ ವೈರಸ್‌ನಿಂದ ಉಳಿಸಬೇಕಾದರೆ ಈ ಏಕತೆ ಅತ್ಯವಶ್ಯ.
-ಸೌರವ್ ಗಂಗೂಲಿ,ಬಿಸಿಸಿಐ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT