ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG Test: ಕೊಹ್ಲಿ, ಸಚಿನ್ ಸೇರಿ ದಿಗ್ಗಜರ ದಾಖಲೆಗಳನ್ನು ಮುರಿದ ಜೈಸ್ವಾಲ್

Published 7 ಮಾರ್ಚ್ 2024, 11:54 IST
Last Updated 7 ಮಾರ್ಚ್ 2024, 11:54 IST
ಅಕ್ಷರ ಗಾತ್ರ

ಧರ್ಮಶಾಲಾ: ಭಾರತ ತಂಡದ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರು, ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ರನ್‌ ಬೇಟೆ ಮುಂದುವರಿಸಿದ್ದಾರೆ. ಆ ಮೂಲಕ, ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವರ ಹೆಸರಿನಲ್ಲಿದ್ದ ದಾಖಲೆಗಳನ್ನು ಮುರಿದಿದ್ದಾರೆ.

ಅಮೋಘ ಫಾರ್ಮ್‌ನಲ್ಲಿರುವ ಜೈಸ್ವಾಲ್‌, ಈ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳ 9 ಇನಿಂಗ್ಸ್‌ಗಳಿಂದ ಎರಡು ದ್ವಿಶತಕ ಸಹಿತ 712 ರನ್‌ ಗಳಿಸಿದ್ದಾರೆ. ಇದರೊಂದಿಗೆ ಭಾರತದ ಪರ 45 ವರ್ಷಗಳ ಬಳಿಕ ಸರಣಿಯೊಂದರಲ್ಲಿ 700 ರನ್‌ಗಳ ಗಡಿ ದಾಟಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಹಾಗೆಯೇ, ಇಂಗ್ಲೆಂಡ್‌ ವಿರುದ್ಧದ ಒಂದೇ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಟೀಂ ಇಂಡಿಯಾದ ಬ್ಯಾಟರ್‌ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ದಾಖಲೆ ಇದುವರೆಗೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿತ್ತು. ಅವರು 2016–17ರಲ್ಲಿ ನಡೆದ ಟೂರ್ನಿಯಲ್ಲಿ 5 ಪಂದ್ಯಗಳ 8 ಇನಿಂಗ್ಸ್‌ಗಳಿಂದ 655 ರನ್ ಗಳಿಸಿದ್ದರು. ತಲಾ ಎರಡು ಶತಕ ಮತ್ತು ಅರ್ಧಶತಕ ಕೊಹ್ಲಿ ಬ್ಯಾಟ್‌ನಿಂದ ಬಂದಿದ್ದವು.

ಭಾರತದ ಪರ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಹೆಚ್ಚು ರನ್‌
01. ಯಶಸ್ವಿ ಜೈಸ್ವಾಲ್‌
: 2024ರಲ್ಲಿ 712 ರನ್‌
02. ವಿರಾಟ್‌ ಕೊಹ್ಲಿ: 2016ರಲ್ಲಿ 655 ರನ್‌
03. ರಾಹುಲ್ ದ್ರಾವಿಡ್‌: 2002ರಲ್ಲಿ 602 ರನ್‌
04. ವಿರಾಟ್‌ ಕೊಹ್ಲಿ: 2018ರಲ್ಲಿ 593 ರನ್‌
05. ವಿಜಯ್‌ ಮಂಜ್ರೇಕರ್‌: 1961/62ರಲ್ಲಿ 586 ರನ್‌

ಕಡಿಮೆ ಇನಿಂಗ್ಸ್‌ಗಳಲ್ಲಿ ಸಾವಿರ ರನ್‌
ಇದುವರೆಗೆ ಕೇವಲ 9 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿರುವ ಜೈಸ್ವಾಲ್‌, 16ನೇ ಇನಿಂಗ್ಸ್‌ನಲ್ಲೇ ಸಾವಿರ ರನ್‌ ಗಡಿ ದಾಟಿದ್ದಾರೆ. ಇದರೊಂದಿಗೆ ಅವರು ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ ಸಹಸ್ರ ರನ್‌ ಕಲೆಹಾಕಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವೇಗವಾಗಿ 1000 ರನ್‌ ಗಳಿಸಿದ ದಾಖಲೆ ವಿನೋದ್ ಕಾಂಬ್ಳಿ ಹೆಸರಲ್ಲಿದೆ. ಅವರು 12 ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ ಈ ದಾಖಲೆ ಬರೆದಿದ್ದರು. ಟೆಸ್ಟ್ ಪರಿಣತ ಬ್ಯಾಟರ್‌ ಚೇತೇಶ್ವರ ಪೂಜಾರ 11 ಪಂದ್ಯಗಳ 18 ಇನಿಂಗ್ಸ್‌ಗಳಲ್ಲಿ ಸಾವಿರ ರನ್ ಗಳಿಸುವ ಮೂಲಕ ಕಾಂಬ್ಳೆ ನಂತರದ ಸ್ಥಾನದಲ್ಲಿದ್ದರು. ಇದೀಗ, ಅವರನ್ನು ಜೈಸ್ವಾಲ್‌ ಹಿಂದಿಕ್ಕಿದ್ದಾರೆ.

12 ಪಂದ್ಯಗಳ 19 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಕನ್ನಡಿಗ ಮಯಂಕ್‌ ಅಗರವಾಲ್‌, ನಂತರದ ಸ್ಥಾನದಲ್ಲಿದ್ದಾರೆ.

ಕಡಿಮೆ ಪಂದ್ಯಗಳಲ್ಲಿ 1000 ರನ್‌
ಆಡುತ್ತಿರುವ 9ನೇ ಪಂದ್ಯದಲ್ಲೇ ಸಾವಿರ ರನ್‌ಗಳ ಸಾಧನೆ ಮಾಡಿರುವ ಯಶಸ್ವಿ, ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ ಅವರಂತಹ ದಿಗ್ಗಜ ಬ್ಯಾಟರ್‌ಗಳ ಸಾಲಿಗೆ ಸೇರಿದರು.

01. ಡಾನ್‌ ಬ್ರಾಡ್ಮನ್‌ – ಆಸ್ಟ್ರೇಲಿಯಾ: 7 ಪಂದ್ಯಗಳು
02. ಎವರ್ಡನ್‌ ವೀಕ್ಸ್‌ – ವೆಸ್ಟ್‌ ಇಂಡೀಸ್‌: 9 ಪಂದ್ಯಗಳು
03. ಹರ್ಬರ್ಟ್‌ ಸಟ್‌ಕ್ಲಿಫ್‌ – ಇಂಗ್ಲೆಂಡ್‌: 9 ಪಂದ್ಯಗಳು
04. ಜಾರ್ಜ್‌ ಹೆಡ್ಲೀ – ವೆಸ್ಟ್‌ ಇಂಡೀಸ್‌: 9 ಪಂದ್ಯಗಳು
05. ಯಶಸ್ವಿ ಜೈಸ್ವಾಲ್‌ – ಭಾರತ: 9 ಪಂದ್ಯಗಳು

ಅತಿ ಕಡಿಮೆ ದಿನಗಳಲ್ಲಿ 1,000 ರನ್‌
ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ, ಕಡಿಮೆ ದಿನಗಳಲ್ಲಿ 1,000 ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜೈಸ್ವಾಲ್‌ 5ನೇ ಸ್ಥಾನ ಗಳಿಸಿದ್ದಾರೆ.

01. ಮೈಕಲ್‌ ಹಸ್ಸಿ – ಆಸ್ಟ್ರೇಲಿಯಾ: 166 ದಿನಗಳು
02. ಏಡನ್‌ ಮರ್ಕ್ರಂ – ದಕ್ಷಿಣ ಆಫ್ರಿಕಾ: 185 ದಿನಗಳು
03. ಆ್ಯಡಂ ವೋ‌ಗ್ಸ್‌ – ಆಸ್ಟ್ರೇಲಿಯಾ: 207 ದಿನಗಳು
04. ಆ್ಯಂಡ್ರೋ ಸ್ಟ್ರಾಸ್‌ – ಇಂಗ್ಲೆಂಡ್‌: 227 ದಿನಗಳು
05. ಯಶಸ್ವಿ ಜೈಸ್ವಾಲ್‌ – ಭಾರತ: 239 ದಿನಗಳು

ಟೆಸ್ಟ್‌ ಸರಣಿಯೊಂದರಲ್ಲಿ ಅಧಿಕ ರನ್‌
ಇಂಗ್ಲೆಂಡ್‌ ವಿರುದ್ಧದ ಸರಣಿಯೊಂದರಲ್ಲಿ ಹೆಚ್ಚು ರನ್‌ ಗಳಿಸಿದ ದಾಖಲೆಯನ್ನು ಯಶಸ್ವಿ ಜೈಸ್ವಾಲ್‌ ಬರೆದಿದ್ದಾರೆ. ಆದರೆ, ಒಟ್ಟಾರೆ ಯಾವುದೇ ತಂಡದ ವಿರುದ್ಧ ನಡೆದ ದ್ವಿಪಕ್ಷೀಯ ಟೆಸ್ಟ್‌ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಇರುವುದು ಸುನಿಲ್ ಗವಾಸ್ಕರ್‌ ಹೆಸರಿನಲ್ಲಿ. ಅವರು 1971ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದಿದ್ದ ಸರಣಿಯಲ್ಲಿ 774 ರನ್‌ ಕಲೆಹಾಕಿದ್ದರು.

ಸದ್ಯ ನಡೆಯುತ್ತಿರುವ ಪಂದ್ಯದಲ್ಲಿ ಜೈಸ್ವಾಲ್‌ 57 ರನ್‌ ಗಳಿಸಿ ಔಟಾಗಿದ್ದಾರೆ. ಆದರೆ, ಇನ್ನೂ ಒಂದು ಇನಿಂಗ್ಸ್‌ ಆಟ ಬಾಕಿ ಇದೆ. ಹೀಗಾಗಿ, ಗವಾಸ್ಕರ್‌ ದಾಖಲೆಯನ್ನೂ ಮುರಿಯುವ ಅವಕಾಶ ಜೈಸ್ವಾಲ್‌ಗೆ ಇದೆ.

01. ಸುನಿಲ್‌ ಗವಾಸ್ಕರ್‌: 1971ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 774 ರನ್‌
02. ಸುನಿಲ್‌ ಗವಾಸ್ಕರ್‌: 1978/79ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 732 ರನ್‌
03. ಯಶಸ್ವಿ ಜೈಸ್ವಾಲ್‌: 2024ರಲ್ಲಿ ಇಂಗ್ಲೆಂಡ್‌ ವಿರುದ್ಧ 712 ರನ್‌
04. ವಿರಾಟ್‌ ಕೊಹ್ಲಿ: 2014/15ರಲ್ಲಿ ಆಸ್ಟ್ರೇಲಿಯಾ ವಿರುದ್ಧ 692 ರನ್‌
05. ವಿರಾಟ್‌ ಕೊಹ್ಲಿ: 2016ರಲ್ಲಿ ಇಂಗ್ಲೆಂಡ್‌ ವಿರುದ್ಧ 655 ರನ್‌

ಒಂದೇ ತಂಡದ ವಿರುದ್ಧ ಗರಿಷ್ಠ ಸಿಕ್ಸ್‌
ಯಶಸ್ವಿ ಜೈಸ್ವಾಲ್‌, ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಇದುವರೆಗೆ 26 ಸಿಕ್ಸ್‌ ಸಿಡಿಸಿದ್ದಾರೆ. ಆ ಮೂಲಕ ಒಂದೇ ತಂಡದ ವಿರುದ್ಧ ಹೆಚ್ಚು ಸಿಕ್ಸ್‌ ಬಾರಿಸಿದ ಭಾರತದ ಬ್ಯಾಟರ್‌ ಎಂಬ ಸಾಧನೆ ಮಾಡಿದ್ದಾರೆ. ಈ ದಾಖಲೆಯನ್ನು ಬ್ಯಾಟಿಂಗ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹೊಂದಿದ್ದರು.

ಸಚಿನ್‌ ಆಸ್ಟ್ರೇಲಿಯಾ ವಿರುದ್ಧ ಆಡಿದ 74 ಇನಿಂಗ್ಸ್‌ಗಳಲ್ಲಿ 25 ಸಿಕ್ಸ್‌ ಹೊಡೆದಿದ್ದರು. ಈ ದಾಖಲೆ ಮುರಿಯಲು ಯಶಸ್ವಿಗೆ ಕೇವಲ 9 ಇನಿಂಗ್ಸ್ ಸಾಕಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ 20 ಇನಿಂಗ್ಸ್‌ಗಳಲ್ಲಿ 22 ಸಿಕ್ಸ್‌ ಬಾರಿಸಿರುವ ರೋಹಿತ್‌ ಶರ್ಮಾ, ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಹಾಗೂ ಯುವ ವಿಕೆಟ್ ಕೀಪರ್‌ ರಿಷಭ್ ಪಂತ್‌ ಅವರು ಆಂಗ್ಲರ ವಿರುದ್ಧ ತಲಾ 21 ಸಿಕ್ಸ್ ಗಳಿಸುವ ಮೂಲಕ ನಂತರದ ಸ್ಥಾನ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಮೇಲುಗೈ
ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಕೊನೇ ಪಂದ್ಯವು ಇಂದು (ಗುರುವಾರ) ಧರ್ಮಶಾಲಾದಲ್ಲಿ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ಆತಿಥೇಯ ಭಾರತ ಮೇಲುಗೈ ಸಾಧಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡವನ್ನು, ಟೀಂ ಇಂಡಿಯಾದ ತ್ರಿವಳಿ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ಆರ್‌.ಅಶ್ವಿನ್ ಮತ್ತು ರವೀಂದ್ರ ಜಡೇಜ ಸ್ಪಿನ್‌ ಖೆಡ್ಡಾದಲ್ಲಿ ಕೆಡವಿದ್ದಾರೆ.

ಇಂಗ್ಲೆಂಡ್‌ ಪರ ಜಾಕ್ ಕ್ರಾಲಿ (79 ರನ್‌) ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ಬೆನ್‌ ಸ್ಟೋಕ್ಸ್‌ ಪಡೆ ಮೊದಲ ಇನಿಂಗ್ಸ್‌ನಲ್ಲಿ 218 ರನ್‌ ಗಳಿಸಿ ಆಲೌಟ್‌ ಆಗಿದೆ.

ಯಾದವ್ ಐದು ವಿಕೆಟ್‌ ಕಬಳಿಸಿದರೆ, ಅಶ್ವಿನ್‌ ನಾಲ್ಕು ವಿಕೆಟ್‌ ಉರುಳಿಸಿದ್ದಾರೆ. ಇನ್ನೊಂದು ವಿಕೆಟ್‌ ಅನ್ನು ಜಡೇಜ ಪಡೆದುಕೊಂಡಿದ್ದಾರೆ.

ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ, ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 135 ರನ್ ಗಳಿಸಿದೆ.

57 ರನ್ ಗಳಿಸಿದ್ದ ಜೈಸ್ವಾಲ್‌, ಶೋಯಬ್‌ ಬಷೀರ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಅರ್ಧಶತಕ (52 ರನ್‌) ಬಾರಿಸಿರುವ ನಾಯಕ ರೋಹಿತ್ ಶರ್ಮಾ ಮತ್ತು 26 ರನ್ ಗಳಿಸಿರುವ ಶುಭಮನ್ ಗಿಲ್‌, ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್‌ ತಂಡದ ಬಾಕಿ ಚುಕ್ತಾ ಮಾಡಿ, ಮುನ್ನಡೆಯ ರನ್‌ ಗಳಿಸಲು ಟೀಂ ಇಂಡಿಯಾಗೆ ಇನ್ನು 83 ರನ್ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT