ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಭಾರತದ ಯುವಪಡೆಗೆ ಸರಣಿ ಜಯದ ಛಲ

Published 23 ನವೆಂಬರ್ 2023, 0:19 IST
Last Updated 23 ನವೆಂಬರ್ 2023, 0:19 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ನಾಲ್ಕು ದಿನಗಳ ಹಿಂದಷ್ಟೇ ಅಹಮದಾಬಾದಿನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿ ಬೀಗಿದ್ದ ಆಸ್ಟ್ರೇಲಿಯಾ ತಂಡವು ಗುರುವಾರ ಆರಂಭವಾಗುವ ಭಾರತದ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹೊಸ ಮಾದರಿ ಮತ್ತು ಯುಪಪ್ರತಿಭೆಗಳ ಹಣಾಹಣಿ ನಡೆಯಲಿದೆ.

ಉಭಯ ತಂಡಗಳಲ್ಲಿಯೂ ಕೆಲವು ಖ್ಯಾತನಾಮ ಆಟಗಾರರು ಇಲ್ಲ. ಯುವ ಆಟಗಾರರು ಹಣಾಹಣಿ ನಡೆಯಲಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದಲ್ಲಿದ್ದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಪ್ರಸಿದ್ಧಕೃಷ್ಣ ಅವರು ಇಲ್ಲಿ ಆಡಲಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಗೈರುಹಾಜರಿಯಲ್ಲಿ ಸೂರ್ಯಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ. 

ಆಸ್ಟ್ರೇಲಿಯಾ ತಂಡವನ್ನು ಮ್ಯಾಥ್ಯೂ ವೇಡ್ ಮುನ್ನಡೆಸುವರು. ಫೈನಲ್ ಪಂದ್ಯದಲ್ಲಿ ಶತಕ ಹೊಡೆದು ಮಿಂಚಿದ್ದ ಟ್ರಾವಿಸ್ ಹೆಡ್,  ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ವಿಕೆಟ್‌ಕೀಪರ್ ಜೋಶ್ ಇಂಗ್ಲಿಷ್, ಮಾರ್ಕಸ್ ಸ್ಟೋಯಿನಿಸ್ ಮತ್ತು ಆ್ಯಡಂ ಜಂಪಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಇವರನ್ನು ಬಿಟ್ಟು ಉಳಿದ ಆಟಗಾರರು ತವರಿಗೆ ಮರಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಸರಣಿಯಲ್ಲಿ ಭಾರತ 2–1ರಿಂದ ಜಯಿಸಿತ್ತು.

ಇದೀಗ ಚುಟುಕು ಸರಣಿಯ ಸವಾಲು ಆತಿಥೇಯರ ಮುಂದಿದೆ. ಇನ್ನೂ ಆರು ತಿಂಗಳು ಕಳೆದರೆ ವೆಸ್ಟ್ ಇಂಡೀಸ್ –ಅಮೆರಿಕ ಜಂಟಿ ಆಶ್ರಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಆಯ್ಕೆ ಪ್ರಕ್ರಿಯೆಯ ಆರಂಭವೂ ಈ ಸರಣಿ ಎನ್ನಲಾಗಿದೆ. ಆದ್ದರಿಂದ ಭಾರತದ ಯುವಪ್ರತಿಭೆಗಳಾದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್ ಮತ್ತು ವಿಕೆಟ್‌ ಕೀಪರ್ ಜಿತೇಶ್ ಶರ್ಮಾ ಅವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಉತ್ತಮ ವೇದಿಕೆಯಾಗಿದೆ.

ಏಕದಿನ ಮಾದರಿಯಲ್ಲಿ  ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್‌ಗೆ ಇದು ತಮ್ಮ ಆಟದ ಜೊತೆಗೆ ನಾಯಕತ್ವದ ಕೌಶಲ ತೋರಿಸುವ ವೇದಿಕೆಯಾಗಿದೆ. ಅಲ್ಲದೇ ಅವರು ಭವಿಷ್ಯದಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಂತಹ ಆಟವನ್ನು ಇಲ್ಲಿ ತೋರಬೇಕಾದ ಒತ್ತಡವಿದೆ. ಉಳಿದಂತೆ ತಂಡವು ಸಮತೋಲನದಿಂದ ಕೂಡಿದೆ.  ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ನಾಯಕ ಋತುರಾಜ್ ಗಾಯಕವಾಡ ಮತ್ತು ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಇಶಾನ್, ವರ್ಮಾ, ರಿಂಕು ಮತ್ತು ಸೂರ್ಯ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ.  ಸ್ಪಿನ್–ಆಲ್‌ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥ ಆಟಗಾರರಾಗಿದ್ದಾರೆ.

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವೂ ತನ್ನ ಸಂಪೂರ್ಣ ಸಾಮರ್ಥ್ಯ ವಿನಿಯೋಗಿಸಿ, ಸರಣಿ ಗೆಲುವಿನೊಂದಿಗೆ ಸ್ವದೇಶಕ್ಕೆ ಮರಳುವ ಛಲದಲ್ಲಿದೆ.

ತಿರುವನಂತಪುರ (ನ.26), ಗುವಾಹಟಿ (ನ.28), ರಾಯಪುರ (ಡಿ 1) ಮತ್ತು ಬೆಂಗಳೂರು (ಡಿ 3) ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ತಂಡಗಳು:

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕವಾಡ (ಉಪನಾಯಕ), ಇಶಾನ್ ಕಿಶನ್,  ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ಮುಕೇಶ್ ಕುಮಾರ್.

ಆಸ್ಟ್ರೇಲಿಯಾ: ಮ್ಯಾಥ್ಯೂ ವೇಡ್ (ನಾಯಕ), ಆ್ಯರನ್ ಹಾರ್ಡೀ, ಜೇಸನ್ ಬೆಹ್ರೆನ್‌ಡಾರ್ಫ್‌, ಸೀನ್ ಅಬಾಟ್, ಟಿಮ್ ಡೇವಿಡ್, ನೇಥನ್ ಎಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘಾ, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ:

ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT