ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PAK vs NZ: ಭದ್ರತಾ ಕಾರಣ ನೀಡಿ ಪಾಕ್‌ ಪ್ರವಾಸ ಮೊಟಕುಗೊಳಿಸಿದ ನ್ಯೂಜಿಲೆಂಡ್‌ ತಂಡ

ಮೊದಲ ಏಕದಿನ ಪಂದ್ಯ ಆರಂಭಕ್ಕೆ ಕ್ಷಣಗಳಿರುವಾಗ ನಿರ್ಧಾರ
Last Updated 17 ಸೆಪ್ಟೆಂಬರ್ 2021, 11:54 IST
ಅಕ್ಷರ ಗಾತ್ರ

ರಾವಲ್ಪಿಂಡಿ: ಮೊದಲ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆರಂಭವಾಗುವ ಮೊದಲೇ ನ್ಯೂಜಿಲೆಂಡ್‌ ತಂಡ, ಭದ್ರತೆಯ ಕಾರಣ ನೀಡಿ ಶುಕ್ರವಾರ ಪಾಕಿಸ್ತಾನ ಪ್ರವಾಸದಿಂದ ಹಠಾತ್ತನೇ ಹಿಂದೆ ಸರಿದಿದೆ. ಆದರೆ ಅಂಥ ಭದ್ರತೆಯ ಭೀತಿ ಇರಲಿಲ್ಲ ಎಂದು ಆತಿಥೇಯ ದೇಶದ ಮಂಡಳಿ ಹೇಳಿಕೊಂಡಿದೆ.

ರಾವಲ್ಪಿಂಡಿಯಲ್ಲಿ ಶುಕ್ರವಾರ ಮೊದಲ ಏಕದಿನ ಪಂದ್ಯ ನಿಗದಿಯಾಗಿತ್ತು. ಆದರೆ ಸಮಯ ಕಳೆದರೂ ಎರಡೂ ತಂಡಗಳು ಹೋಟೆಲ್‌ನಿಂದ ಹೊರಬಂದಿರಲಿಲ್ಲ.

‘ನಾವು ಸ್ವೀಕರಿಸಿದ ಸಲಹೆಯ ಪ್ರಕಾರ ಈ ಪ್ರವಾಸ ಮುಂದುವರಿಸುವುದು ಸಾಧ್ಯವಿರಲಿಲ್ಲ’ ಎಂದು ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ನ್ಯೂಜಿಲೆಂಡ್‌ ಕ್ರಿಕೆಟ್‌ ಚೀಫ್‌ ಎಕ್ಸಿಕ್ಯುಟಿವ್‌ ಡೇವಿಡ್‌ ವೈಟ್‌ ತಿಳಿಸಿದರು.

‘ಇದು ಪಾಕ್‌ ಕ್ರಿಕೆಟ್‌ ಮಂಡಳಿಗೆ ದೊಡ್ಡ ಹೊಡೆತ. ಅವರು ನಮಗೆ ಉತ್ತಮ ಆತಿಥ್ಯ ಒದಗಿಸಿದ್ದರು. ಆದರೆ ಆಟಗಾರರ ಸುರಕ್ಷತೆ ಎಲ್ಲದ್ದಕ್ಕಿಂತ ಮುಖ್ಯವಾದುದು. ಸದ್ಯ ನಮ್ಮ ಮುಂದಿರುವ ಜವಾಬ್ದಾರಿಯುತ ಆಯ್ಕೆ ಇದೊಂದೇ’ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನ್ಯೂಜಿಲೆಂಡ್‌ ಕ್ರಿಕೆಟ್‌ ಆಟಗಾರರ ಸಂಘದ ಚೀಫ್‌ ಎಕ್ಸಿಕ್ಯುಟಿವ್‌ ಹೀತ್‌ ಮಿಲ್ಸ್‌ ಕೂಡ ವೈಟ್‌ ಅವರ ಭಾವನೆಗಳನ್ನೇ ಪ್ರತಿಧ್ವನಿಸಿದ್ದಾರೆ.

‘ಆಟಗಾರರು ಸುರಕ್ಷಿತವಾಗಿದ್ದಾರೆ. ಎಲ್ಲರೂ ತಮ್ಮ ಹಿತಾಸಕ್ತಿಯಿಂದ ಉಚಿತವೆನಿಸಿದ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಮಿಲ್ಸ್‌ ಹೇಳಿದ್ದಾರೆ.

‘ಯಾವ ರೀತಿಯ ಭೀತಿಯಿತ್ತು ಎಂಬ ಬಗ್ಗೆ ನ್ಯೂಜಿಲೆಂಡ್‌ ಕ್ರಿಕೆಟ್‌ ಯಾವುದೇ ವಿವರ ನೀಡಿಲ್ಲ. ಪಾಕಿಸ್ತಾನದಿಂದ ನಿರ್ಗಮಿಸುವ ರೀತಿಯ ಬಗ್ಗೆಯೂ ಮಾಹಿತಿ ನೀಡಿಲ್ಲ.

ಇನ್ನೊಂದೆಡೆ, ‘ನ್ಯೂಜಿಲೆಂಡ್‌, ಈ ಸರಣಿಯನ್ನು ಮುಂದೂಡುವ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಹೇಳಿದೆ.

‘ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮತ್ತು ಪಾಕಿಸ್ತಾನ ಸರ್ಕಾರ ಎಲ್ಲ ಪ್ರವಾಸಿ ತಂಡಗಳಿಗೆ ಸುರಕ್ಷತಾ ವ್ಯವಸ್ಥೆ ಮಾಡುತ್ತದೆ. ನ್ಯೂಜಿಲೆಂಡ್‌ ಕ್ರಿಕೆಟ್‌ಗೂ ನಾವು ಈ ಭರವಸೆ ನೀಡಿದ್ದೆವು’ ಎಂದು ತಿಳಿಸಿದೆ.

‘ಪಾಕಿಸ್ತಾನ ಪ್ರಧಾನಿ ಅವರೇ ವೈಯಕ್ತಿಕವಾಗಿ ನ್ಯೂಜಿಲೆಂಡ್‌ ಪ್ರಧಾನಿ ಜೊತೆ ಮಾತನಾಡಿದ್ದರು. ಪಾಕಿಸ್ತಾನವು ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ಹೊಂದಿದ್ದು, ಪ್ರವಾಸಿ ತಂಡಕ್ಕೆ ಯಾವುದೇ ರೀತಿಯ ಭದ್ರತಾ ಭಯ ಬೇಕಿಲ್ಲ ಎಂದು ಇಮ್ರಾನ್‌ ಖಾನ್‌ ತಿಳಿಸಿದ್ದರು’ ಎಂದು ಪಿಸಿಬಿ ಹೇಳಿಕೆ ತಿಳಿಸಿದೆ.

ಅಕ್ಟೋಬರ್‌ 3ರವರೆಗಿನ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ–20 ಪಂದ್ಯಗಳು ನಿಗದಿಯಾಗಿದ್ದವು.

2009ರಲ್ಲಿ ಶ್ರೀಲಂಕಾ ತಂಡ ಪಾಕ್‌ ಪ್ರವಾಸ ಕೈಗೊಂಡಿದ್ದಾಗ ಭಯೋತ್ಪಾದನಾ ದಾಳಿ ನಡೆದಿತ್ತು. ಬಸ್‌ನಲ್ಲಿದ್ದ ಆಟಗಾರರು ಅದೃಷ್ಟವಶಾತ್‌ ಪಾರಾಗಿದ್ದರು. ಅಂದಿನಿಂದ ವಿದೇಶಿ ತಂಡಗಳನ್ನು ಆಹ್ವಾನಿಸಿ ಕ್ರಿಕೆಟ್‌ ಬಾಂಧವ್ಯ ಸುಧಾರಿಸಲು ಪಾಕಿಸ್ತಾನ ತಂಡ ಪ್ರಯತ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT