ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಧೂಳೀಪಟ; ಟೆಸ್ಟ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಿವೀಸ್‌ ನಂ.1

Last Updated 6 ಜನವರಿ 2021, 7:51 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್: ಪ್ರವಾಸಿ ಪಾಕಿಸ್ತಾನ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಆತಿಥೇಯ ನ್ಯೂಜಿಲೆಂಡ್ ಇನ್ನಿಂಗ್ಸ್ ಹಾಗೂ 176 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವೈಟ್‌ವಾಶ್ ಮಾಡಿರುವ ಕಿವೀಸ್ ಪಡೆ ಇದೇ ಮೊದಲ ಬಾರಿಗೆ ಐಸಿಸಿ ಟೆಸ್ಟ್ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲ ಟೆಸ್ಟ್ ಪಂದ್ಯದಲ್ಲೂ ಕಿವೀಸ್ 101 ರನ್ ಅಂತರದ ಗೆಲುವು ದಾಖಲಿಸಿತ್ತು. ಅಲ್ಲದೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ಅಂಕಪಟ್ಟಿಯಲ್ಲೂ ಆಸ್ಟ್ರೇಲಿಯಾ ಹಾಗೂ ಭಾರತಕ್ಕೆ ಸಡ್ಡು ಹೊಡೆದಿದೆ.

ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೇನ್ ವಿಲಿಯಮ್ಸನ್ ಟೆಸ್ಟ್ ವೃತ್ತಿ ಜೀವನದಲ್ಲಿ ನಾಲ್ಕನೇ ದ್ವಿಶತಕ ಸಾಧನೆ ಮಾಡಿದ್ದರಲ್ಲದೆ ಅರ್ಹವಾಗಿಯೇ ಸರಣಿಶ್ರೇಷ್ಠ ಗೌರವಕ್ಕೆ ಭಾಜನವಾದರು.

ಅಂತಿಮ ಇನ್ನಿಂಗ್ಸ್‌ನಲ್ಲಿ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ ಮಗದೊಮ್ಮೆ ಕಿವೀಸ್ ವೇಗಿ ಕೈಲ್ ಜೇಮಿಸನ್ (48ಕ್ಕೆ 6) ಮಾರಕ ದಾಳಿಗೆ ಕುಸಿದು 186 ರನ್‌ಗಳಿಗೆ ಸರ್ವಪತನಗೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲೂ ಜೇಮಿಸನ್ (69ಕ್ಕೆ 5) ದಾಳಿಗೆ ಸಿಲುಕಿದ್ದ ಪಾಕಿಸ್ತಾನ, ಅಜರ್ ಅಲಿ (93) ನಾಯಕ ಹಾಗೂ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ (61) ಹೋರಾಟದ ಹೊರತಾಗಿಯೂ 297 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಇದರೊಂದಿಗೆ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿರುವ ಕೈಲ್ ಜೇಮಿಸನ್ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಪಡೆದರು. ಅಲ್ಲದೆ ಪಂದ್ಯಶ್ರೇಷ್ಠ ಗೌರವಕ್ಕೂ ಭಾಜನವಾದರು.

ನಾಯಕ ಕೇನ್ ವಿಲಿಯಮ್ಸನ್ ವೃತ್ತಿ ಜೀವನದ ನಾಲ್ಕನೇ ದ್ವಿಶತಕ (238) ಮತ್ತು ಹೆನ್ರಿ ನಿಕೋಲ್ಸ್ (157) ಹಾಗೂ ಡ್ಯಾರೆಲ್ ಮಿಚೆಲ್ (102*) ಶತಕದ ಬೆಂಬಲದೊಂದಿಗೆ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ನಷ್ಟಕ್ಕೆ 659 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಕಿವೀಸ್‌ನಿಂದ ಇನ್ನಿಂಗ್ಸ್‌ವೊಂದರಲ್ಲಿ ದಾಖಲಾದ ಐದನೇ ಗರಿಷ್ಠ ಮೊತ್ತವಾಗಿದೆ. 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಆರು ವಿಕೆಟ್ ನಷ್ಟಕ್ಕೆ 715 ರನ್ ಪೇರಿಸಿ ಡಿಕ್ಲೇರ್ ಘೋಷಿಸಿರುವುದು ಸರ್ವಶ್ರೇಷ್ಠ ಸಾಧನೆಯಾಗಿದೆ.

ಕೇನ್ ವಿಲಿಯಮ್ಸನ್ ದ್ವಿಶತಕ ಸಾಧನೆಗಳು:
251: ವೆಸ್ಟ್‌ಇಂಡೀಸ್ ವಿರುದ್ಧ, ಹ್ಯಾಮಿಲ್ಟನ್, 2020
242*: ಶ್ರೀಲಂಕಾ ವಿರುದ್ಧ, ವೆಲ್ಲಿಂಗ್ಟನ್, 2015
238: ಪಾಕಿಸ್ತಾನ ವಿರುದ್ಧ, ಕ್ರೈಸ್ಟ್‌ಚರ್ಚ್, 2021
200*: ಬಾಂಗ್ಲಾದೇಶ ವಿರುದ್ಧ, ಹ್ಯಾಮಿಲ್ಟನ್, 2019

ಎಲ್ಲ ನಾಲ್ಕು ದ್ವಿಶತಕಗಳು ತಾಯ್ನಾಡಿನಲ್ಲೇ ದಾಖಲಾಗಿರುವುದು ವಿಶೇಷ. ಅಂದ ಹಾಗೆ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿರುವ ಕಿವೀಸ್, ಇದೇ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಪಟ್ಟ ಅಲಂಕರಿಸಿದೆ.

ಐಸಿಸಿ ಟೆಸ್ಟ್ ತಂಡ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ನ್ಯೂಜಿಲೆಂಡ್: 118
2. ಆಸ್ಟ್ರೇಲಿಯಾ: 116
3. ಭಾರತ: 114
4. ಇಂಗ್ಲೆಂಡ್: 106
5. ದ.ಆಫ್ರಿಕಾ: 96
6. ಶ್ರೀಲಂಕಾ: 86
7. ಪಾಕಿಸ್ತಾನ: 82
8. ವೆಸ್ಟ್‌ಇಂಡೀಸ್: 77
9. ಅಫ್ಗಾನಿಸ್ತಾನ: 57
10. ಬಾಂಗ್ಲಾದೇಶ: 55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT