ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ vs ಕೊಹ್ಲಿ: ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ಡುಕೊಟ್ದ ಕಪಿಲ್ ಹೇಳಿದ್ದೇನು?

Last Updated 23 ಜನವರಿ 2023, 6:21 IST
ಅಕ್ಷರ ಗಾತ್ರ

ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹಾಗೂ ಭಾರತ ಕ್ರಿಕೆಟ್‌ ತಂಡದ ಈಗಿನ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ಬ್ಯಾಟರ್‌? ಎಂಬ ಚರ್ಚೆ ಬಹುದಿನಗಳಿಂದಲೂ ನಡೆಯುತ್ತಿದೆ.

1989ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಚಿನ್‌, 2013ರಲ್ಲಿ ವಿದಾಯ ಘೋಷಿಸುವ ಮುನ್ನ 100 (ಟೆಸ್ಟ್‌ನಲ್ಲಿ 51 ಹಾಗೂ ಏಕದಿನ ಮಾದರಿಯಲ್ಲಿ 49) ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ದಶಕದಿಂದಲೂ ಭಾರತ ತಂಡದ ಪರ ರನ್‌ ಬೇಟೆ ಮುಂದುವರಿಸಿರುವ ವಿರಾಟ್‌ ಕೊಹ್ಲಿ, ಸಕ್ರಿಯ ಆಟಗಾರರ ಪೈಕಿ ಅತಿಹೆಚ್ಚು ಅಂತರರಾಷ್ಟ್ರೀಯ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಅವರ ಖಾತೆಯಲ್ಲಿ ಸದ್ಯ 74 (ಟಿ20ಯಲ್ಲಿ 1, ಟೆಸ್ಟ್‌ನಲ್ಲಿ 27 ಹಾಗೂ, ಏಕದಿನ ಮಾದರಿಯಲ್ಲಿ 46) ಶತಕಗಳಿವೆ.

ಶತಕ ಗಳಿಕೆಯಲ್ಲಿ ಸಚಿನ್‌ ದಾಖಲೆ ಮುರಿಯಬಲ್ಲ ಆಟಗಾರ ಎನಿಸಿಕೊಂಡಿರುವ ಕೊಹ್ಲಿ, ಏಕದಿನ ಮಾದರಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ ಎನಿಸಿಕೊಳ್ಳಲು ಇನ್ನು ನಾಲ್ಕು ಬಾರಿ ಮೂರಂಕಿ ಮೊತ್ತ ಗಳಿಸಿದರೆ ಸಾಕು.

ಹೀಗಾಗಿ ಈ ಇಬ್ಬರಲ್ಲಿ ಯಾರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ ಎಂಬ ಚರ್ಚೆ ಚಾಲ್ತಿಯಲ್ಲಿದೆ.

1983ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್‌ ಗೆದ್ದು ಕೊಟ್ಟ ನಾಯಕ ಕಪಿಲ್‌ ದೇವ್‌ ಅವರು 'ಗಲ್ಫ್‌ ನ್ಯೂಸ್‌'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಸಚಿನ್‌ ಮತ್ತು ಕೊಹ್ಲಿ ಅವರಲ್ಲಿ ನಿಮ್ಮ ಆಯ್ಕೆಯ ಶ್ರೇಷ್ಠ ಬ್ಯಾಟರ್‌ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಪಿಲ್‌, ಯಾರು ಬೇಕಾದರೂ ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಬಹುದು. ಹಿಂದಿನ ಸಮಯಕ್ಕೆ ಹೋಲಿಸಿದರೆ ಮುಂದಿನ ಕಾಲಘಟ್ಟವು ಮತ್ತಷ್ಟು ಉತ್ತಮ ಆಟಗಾರರನ್ನು ಹೊಂದಿರುತ್ತದೆ ಎಂದಿದ್ದಾರೆ.

'ಅಷ್ಟು ಸಾಮರ್ಥ್ಯವುಳ್ಳ ಆಟಗಾರರ ಪೈಕಿ ನೀವು ಒಬ್ಬ ಅಥವಾ ಇಬ್ಬರನ್ನು ಆಯ್ಕೆ ಮಾಡಬೇಕಾಗಿಲ್ಲ. ಇದು 11 ಆಟಗಾರರನ್ನೊಳಗೊಂಡ ತಂಡ. ನಾನು ನನ್ನದೇ ಅಭಿರುಚಿ ಹೊಂದಿರುತ್ತೇನೆ. ಆದರೆ, ಎಲ್ಲ ತಲೆಮಾರುಗಳೂ ಉತ್ತಮ ಆಟಗಾರರನ್ನು ಹೊಂದಿರುತ್ತವೆ. ನಮ್ಮ ಕಾಲದಲ್ಲಿ ಸುನಿಲ್‌ ಗಾವಸ್ಕರ್‌ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು. ನಂತರ ರಾಹುಲ್‌ ದ್ರಾವಿಡ್‌, ಸಚಿನ್‌, ವೀರೇಂದ್ರ ಸೆಹ್ವಾಗ್‌ ಅವರನ್ನು ನೋಡಿದ್ದೇವೆ. ಇದೀಗ ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿಯನ್ನು ನೋಡುತ್ತಿದ್ದೇವೆ. ಮುಂದಿನ ಕಾಲಘಟ್ಟವೂ ಉತ್ತಮ ಆಟಗಾರರನ್ನು ಹೊಂದಿರಲಿದೆ. ನೀವು ಅತ್ಯುತ್ತಮ ಆಟಗಾರರನ್ನು ನೋಡಲಿದ್ದೀರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT