ಶುಕ್ರವಾರ, ಫೆಬ್ರವರಿ 21, 2020
19 °C

‘ಶ್ರೇಷ್ಠ ಶೈಲಿಯಲ್ಲಿ 360 ಡಿಗ್ರಿ ಬ್ಯಾಟ್ ಬೀಸಲು ರಾಹುಲ್‌ಗೆ ಮಾತ್ರ ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಕನ್ನಡಿಗ ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್‌ ಮಂಜ್ರೇಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಬಿರುಸಿನ ಆಟವಾಡಿದ್ದ ರಾಹುಲ್‌, ಕೇವಲ 64 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ ಸಹಿತ ಅಜೇಯ 88 ರನ್‌ ಬಾರಿಸಿದ್ದರು. ಅವರ ಬ್ಯಾಟಿಂಗ್‌ ನರೆವಿನಿಂದ ಭಾರತ ಬೃಹತ್‌ ಮೊತ್ತ (347ರನ್‌) ಕಲೆಹಾಕಲು ಸಾಧ್ಯವಾಗಿತ್ತು.

ಆದರೆ, ನ್ಯೂಜಿಲೆಂಡ್‌ ಪರ ಸಾಹಸಮಯ ಬ್ಯಾಟಿಂಗ್‌ ಪ್ರದರ್ಶಿಸಿದ ನಾಯಕ ಟಾಮ್‌ ಲಾಥಮ್‌ (68) ಹಾಗೂ ಅನುಭವಿ ರಾಸ್‌ ಟೇಲರ್‌ (109) ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು.

ಆದಾಗ್ಯೂ ರಾಹುಲ್‌ ಬ್ಯಾಟಿಂಗ್‌ ಕುರಿತು ತಮ್ಮ ಟ್ವಿಟರ್‌ನಲ್ಲಿ ಶ್ಲಾಘಿಸಿರುವ ಸಂಜಯ್‌, ‘ರಾಹುಲ್ ಮಾತ್ರವೇ 360 ಡಿಗ್ರಿ ಸುತ್ತಳತೆಯಲ್ಲೂ ಶ್ರೇಷ್ಠ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡಬಲ್ಲರು’ ಎಂದು ಬರೆದುಕೊಂಡಿದ್ದಾರೆ.

ಸೋಲಿನ ಬಳಿಕ ಮಾತನಾಡಿದ್ದ ನಾಯಕ ವಿರಾಟ್‌ ಕೊಹ್ಲಿ, ‘ಪದಾರ್ಪಣೆ ಪಂದ್ಯವಾಡಿದ ಇಬ್ಬರು ಆರಂಭಿಕರೂ ಉತ್ತಮ ಆಟವಾಡಿದ್ದಾರೆ. ಅವರು ಅದನ್ನು ಮುಂದುವರಿಸುವ ಭರವಸೆ ಇದೆ. ಶ್ರೇಯಸ್‌ ಅಯ್ಯರ್‌ ಚೊಚ್ಚಲ ಶತಕ ಗಳಿಸಿಕೊಂಡಿದ್ದಾರೆ. ಕೆ.ಎಲ್‌.ರಾಹುಲ್‌ ಅಮೋಘ ಆಟವಾಡಿದರು’ ಎಂದು ಹೊಗಳಿದ್ದರು.

ಮುಂದುವರಿದು, ‘ಇದು ನ್ಯೂಜಿಲೆಂಡ್‌ ತಂಡದಿಂದ ಬಂದ ಅಮೋಘ ಪ್ರದರ್ಶನ. ನಾವು ನೀಡಿದ್ದ 348 ರನ್‌ ಗುರಿ ಪಂದ್ಯ ಗೆಲ್ಲಲು ಸಾಕಾಗುತ್ತದೆ ಎಂದು ಭಾವಿಸಿದ್ದೆವು’ ಎಂದು ಹೇಳಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು