ಮಂಗಳವಾರ, ಜೂನ್ 22, 2021
28 °C
ಭಾರತ–ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಪಂದ್ಯ

ಐಸಿಸಿ: ಸೇನೆ ಕ್ಯಾಪ್ ಧರಿಸಿ ಆಡಿದ ಭಾರತ ವಿರುದ್ಧ ಕ್ರಮಕ್ಕೆ ಪಾಕ್ ಆಗ್ರಹ

ಐಸಿಸಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ–ಆಸ್ಟ್ರೇಲಿಯಾ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದ ವೇಳೆ ಸೇನೆಯ ಕ್ಯಾಪ್‌(ಟೋಪಿ) ಧರಿಸಿ ಆಡಿದ್ದ ವಿರಾಟ್‌ ಕೊಹ್ಲಿ ಬಳಗವು ಕ್ರೀಡೆಯಲ್ಲೂ ರಾಜಕೀಯ ಬೆರೆಸುತ್ತಿದೆ. ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನವು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ)ಯನ್ನು ಆಗ್ರಹಿಸಿದೆ.

ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿ ವೇಳೆ ಮೃತಪಟ್ಟ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರಿಗೆ ಗೌರವ ಸೂಚಿಸುವ ಸಲುವಾಗಿ ಭಾರತ ಕ್ರಿಕೆಟಿಗರು ಸೇನೆಯ ಕ್ಯಾಪ್‌ ಧರಿಸಿ ಆಡಿದ್ದರು. ಜೊತೆಗೆ ಪಂದ್ಯದ ಸಂಭಾವನೆಯನ್ನೂ ಹುತಾತ್ಮರ ಕುಟುಂಬ ಕಲ್ಯಾಣಕ್ಕಾಗಿ ದಾನ ಮಾಡಲು ನಿರ್ಧಸಿದ್ದರು.

ಭಾರತ ತಂಡಗಾರರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ, ಈ ನಿಟ್ಟಿನಲ್ಲಿ ಐಸಿಸಿಯು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಭಾರತ ಕ್ರಿಕೆಟಿಗರು ತಮ್ಮ ತಂಡದ ಕ್ಯಾಪ್‌ ಧರಿಸುವ ಬದಲು ಸೇನೆಯ ಕ್ಯಾಪ್‌ ಧರಿಸಿದ್ದನ್ನು ಇಡೀ ಜಗತ್ತು ನೋಡಿದೆ. ಅದನ್ನು ಐಸಿಸಿ ನೋಡಿಲ್ಲವೇ? ಈ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು(ಪಿಸಿಬಿ) ಗಮನಕ್ಕೆ ತರದೇ ಇದ್ದರೂ ಗಮನಿಸಬೇಕಾಗಿದ್ದುದು ಐಸಿಸಿಯ ಜವಾಬ್ದಾರಿ’ ಎಂದು ತಿಳಿಸಿದ್ದಾರೆ.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಕಂಡಿದ್ದ ಭಾರತವು ರಾಂಚಿಯಲ್ಲಿ ನಡೆದ ಈ ಪಂದ್ಯದಲ್ಲಿ 32ರನ್‌ ಅಂತರದ ಸೋಲು ಅನುಭವಿಸಿತ್ತು.

ಖುರೇಷಿ ಹೇಳಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್‌ ಚೌಧರಿ ಶುಕ್ರವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ, ‘ಇದು ಕೇವಲ ಕ್ರಿಕೆಟ್‌ ಅಲ್ಲ. ಸಭ್ಯರ ಆಟವನ್ನು ರಾಜಕೀಯಗೊಳಿಸುತ್ತಿರುವುದರ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಭಾರತ ಕ್ರಿಕೆಟ್‌ ತಂಡವು ಇದನ್ನು ನಿಲ್ಲಿಸದಿದ್ದರೆ, ಭಾರತವು ಕಾಶ್ಮೀರದಲ್ಲಿ ನಡೆಸುತ್ತಿರುವ ದೌರ್ಜನ್ಯದತ್ತ ವಿಶ್ವದ ಗಮನ ಸೆಳೆಯಲು ಪಾಕಿಸ್ತಾನ ತಂಡವು ಕಪ್ಪು ಪಟ್ಟಿಯನ್ನು ಧರಿಸಿ ಆಡಬೇಕಾಗುತ್ತದೆ. ಪಿಸಿಬಿಯು ಈ ಬಗ್ಗೆ ಔಪಚಾರಿಕ ಪ್ರತಿಭಟನೆ ದಾಖಲಿಸುವಂತೆ ಆಗ್ರಹಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು