ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ್–ಲಕ್ಷ್ಮಣ್ ಜೊತೆಯಾಟ ನೆನಪಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಮೋದಿ

ಪರೀಕ್ಷಾ ಪೆ ಚರ್ಚಾ | ಸಂವಾದದಲ್ಲಿ ಕ್ರಿಕೆಟ್‌ ಪಾಠ ಹೇಳಿದ ಪ್ರಧಾನಿ
Last Updated 20 ಜನವರಿ 2020, 13:53 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ:‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಚಂದ್ರಯಾನ ಹಾಗೂ ಕ್ರಿಕೆಟ್‌ ಪಂದ್ಯದ ಸಂದರ್ಭಗಳನ್ನು ಉದಾಹರಣೆಯಾಗಿ ಬಳಸಿಕೊಂಡರು.

10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿರುವ ಸಲುವಾಗಿ ಪ್ರಧಾನಿ ಮೋದಿ ನಡೆಸಿದ ಸಂವಾದದಲ್ಲಿ ರಾಜಸ್ಥಾನದ ವಿದ್ಯಾರ್ಥಿನಿ ಯಶಶ್ರೀ ಮೊದಲ ಪ್ರಶ್ನೆ ಕೇಳಿದರು. ಅವರು, ‘ಪರೀಕ್ಷೆಗಳು ನಮ್ಮನ್ನು ನಿರುತ್ಸಾಹಗೊಳಿಸುತ್ತವೆ. ಅದಕ್ಕೇನು ಮಾಡಬೇಕು’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ತಾವು ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದ ಅನುಭವ ಮತ್ತು 2001ರಲ್ಲಿ ಬಾರ್ಡರ್–ಗವಾಸ್ಕರ್ ಸರಣಿ ವೇಳೆ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ರಾಹುಲ್‌ ದ್ರಾವಿಡ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ ಅವರ ಬ್ಯಾಟಿಂಗ್ ವೈಖರಿಯ ಬಗ್ಗೆ ಮಾತನಾಡಿದರು.

‘ಪ್ರೇರಣೆ ಮತ್ತು ನಿರುತ್ಸಾಹತುಂಬಾ ಸಾಮಾನ್ಯ ಸಂಗತಿಗಳು. ಇವು ಪ್ರತಿಯೊಬ್ಬರಿಗೂ ಆಗಿರುತ್ತವೆ. ಇದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಚಂದ್ರಯಾನ ಸಂದರ್ಭದಲ್ಲಿ ನಾನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದು ಮತ್ತು ಆ ಸಂದರ್ಭದಲ್ಲಿ ನಮ್ಮ ವಿಜ್ಞಾನಿಗಳೊಂದಿಗೆ ಸಮಯ ಕಳೆದ ಅನುಭವವನ್ನು ಎಂದಿಗೂ ಮರೆಯುವುದಿಲ್ಲ’ ಎಂದಿದ್ದಾರೆ.

‘ಚಂದ್ರಯಾನ–2 ಯೋಜನೆ ಯಶಸ್ವಿಯಾಗುವ ಕುರಿತು ಭರವಸೆ ಇಲ್ಲದ್ದರಿಂದ, ನಾನು ಅಲ್ಲಿಗೆ ತೆರಳುವುದು ಬೇಡ ಎಂಬ ಸಲಹೆ ನೀಡಲಾಗಿತ್ತು. ಆದರೂ, ನಾನು ಅಲ್ಲಿಗೆ ಹೋಗಬೇಕಾದ ಅವಶ್ಯಕತೆ ಖಂಡಿತಾ ಇತ್ತು. ಹಿನ್ನಡೆಯಾದರೆ ಯಶಸ್ಸು ಸಿಗುವುದೇ ಇಲ್ಲ ಎಂದರ್ಥವಲ್ಲ. ಒಮ್ಮೆಯ ಹಿನ್ನಡೆಯು ಗೆಲ್ಲುವ ಪ್ರಯತ್ನ ಮುಂದುವರಿಸುವ ಪ್ರೇರಣೆ ನೀಡಬೇಕು. ಸೋಲಿನಿಂದ ಗೆಲುವಿನ ಪಾಠ ಕಲಿಯಬೇಕು’ ಎಂದರು.

ಇಸ್ರೊದ ಮಹತ್ವಾಕಾಂಕ್ಷೆಯ ಚಂದ್ರಯಾನ–2 ಯೋಜನೆಯ ವಿಕ್ರಮ್‌ ಲ್ಯಾಂಡರ್‌ಕಳೆದ ಸೆಪ್ಟೆಂಬರ್‌ 7ರಂದು ನಿಯಂತ್ರಣ ಕೇಂದ್ರದಸಂಪರ್ಕ ಕಡಿದುಕೊಂಡಿತ್ತು. ಇದರಿಂದ ಭಾವುಕರಾಗಿದ್ದ ಇಸ್ರೊಅಧ್ಯಕ್ಷ ಕೆ.ಶಿವನ್‌ ಕಣ್ಣೀರು ಹಾಕಿದ್ದರು. ಅದೇ ವೇಳೆನಿಯಂತ್ರಣ ಕೇಂದ್ರದಲ್ಲಿದ್ದ ಮೋದಿ, ಶಿವನ್‌ ಅವರನ್ನು ಅಪ್ಪಿಕೊಂಡು ಸಮಾಧಾನ ಪಡಿಸಿದ್ದರು.

ಆ ನಿರಾಸೆಯಿಂದ ಇಸ್ರೊ ವಿಜ್ಞಾನಿಗಳು ಹೊರಬಂದ ಬಗೆಯನ್ನು ವಿವರಿಸಿದ ಅವರು, ‘ಧನಾತ್ಮಕ ಚಿಂತನೆಯನ್ನು ನಮ್ಮ ಜೀವನದ ಎಲ್ಲ ಆಯಾಮಗಳಲ್ಲೂ ತಂದುಕೊಳ್ಳಬಹುದು. ಯಶಸ್ಸು ಯಾರಿಗಾಗಿಯೂ ಕಾಯುವುದಿಲ್ಲ’ ಎಂದರು.ಮುಂದುವರಿದು, 2001ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧದ ಟೆಸ್ಟ್‌ ಪಂದ್ಯವನ್ನೂ ಉದಾಹರಿಸಿದರು.

‘2001ರಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ಪಂದ್ಯವನ್ನು ನೆನಪಿಸಿಕೊಳ್ಳಿ.ನಮ್ಮ ಕ್ರಿಕೆಟ್‌ ತಂಡವೂ ಹಿನ್ನಡೆ ಅನುಭವಿಸಿತ್ತು. ಆಗ ಪರಿಸ್ಥಿತಿಚೆನ್ನಾಗಿರಲಿಲ್ಲ. ಆದರೆ ಅಂತಹ ಸಂದರ್ಭದಲ್ಲೂ ದಿಟ್ಟ ಆಟವಾಡಿದ್ದ ರಾಹುಲ್‌ ಮತ್ತು ಲಕ್ಷ್ಮಣ್‌ ಅವರನ್ನು ಮರೆಯಲು ಸಾಧ್ಯವೇ? ಅವರು ಪಂದ್ಯದ ಚಿತ್ರಣ ಬದಲಿಸಿದ್ದರು. ಅದೇ ರೀತಿ ತಲೆಗೆ ಪೆಟ್ಟು ಬಿದ್ದಿದಾಗ ಪಟ್ಟಿ (ಬ್ಯಾಂಡೇಜ್‌) ಕಟ್ಟಿಕೊಂಡು ಆಡಿದ್ದ ಅನಿಲ್‌ ಕುಂಬ್ಳೆಯರನ್ನು ಯಾರು ಮರೆಯುತ್ತಾರೆ? ಇದು ಉತ್ಸಾಹ ಮತ್ತು ಧನಾತ್ಮಕ ಚಿಂತನೆಯ ಶಕ್ತಿ’ ಎಂದು ಪ್ರೋತ್ಸಾಹಿಸಿದರು.

ಪಠ್ಯಕ್ರಮ ಮತ್ತುಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೇಳಲಾದ ಮತ್ತೊಂದು ಪ್ರಶ್ನೆಗೆ ಉತ್ತರಿದ ಅವರು. ‘ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವುದೇ ಮುಖ್ಯವಲ್ಲ. ಪರೀಕ್ಷೆಯೇ ಎಲ್ಲ ಎಂಬ ಮನಸ್ಥಿತಿಯಿಂದಹೊರಬರಬೇಕಿದೆ’ ಎಂದರು.

ಪಂದ್ಯದ ಗತಿ ಬದಲಿಸಿದ್ದ ಲಕ್ಷ್ಮಣ್‌–ದ್ರಾವಿಡ್‌
‌‌‌‌2001ರಲ್ಲಿ ನಡೆದ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹತ್ತು ವಿಕೆಟ್‌ ಗೆಲುವು ಸಾಧಿಸಿತ್ತು. ಕೋಲ್ಕತ್ತದಲ್ಲಿ ನಡೆದ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿ ಸ್ಟೀವ್‌ ವಾ ಪಡೆ ಕಣಕ್ಕಿಳಿದಿದತ್ತು.

ಟಾಸ್‌ ಗೆದ್ದಿದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 445 ರನ್‌ ಕಲೆಹಾಕಿತ್ತು. ಈ ಮೊತ್ತದೆದುರು ಕಳಪೆ ಬ್ಯಾಟಿಂಗ್ ಮಾಡಿದ್ದ ಸೌರವ್‌ ಗಂಗೂಲಿ ಪಡೆ ಕೇವಲ 171 ರನ್‌ ಗಳಿಗೆ ಆಲೌಟ್‌ ಆಗಿ,274 ರನ್‌ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಆಸಿಸ್‌ ಭಾರತಕ್ಕೆ ಫಾಲೋಅನ್‌ ಹೇರಿತ್ತು.

ಪ್ರವಾಸಿ ಪಡೆಯ ಬಾಕಿ ಚುಕ್ತಾ ಮಾಡಲು ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್‌ ಆಡಿರಲಿಲ್ಲ. ಶಿವ ಸುಂದರ್‌ ದಾಸ್‌ (39) ಮತ್ತು ಎಸ್‌. ರಮೇಶ್‌(30) ಬೇಗನೆ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ವಿವಿಎಸ್‌ ಲಕ್ಷ್ಮಣ್‌ಗೆ,ಸಚಿನ್‌ ತೆಂಡೂಲ್ಕರ್ (10) ಅವರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಬಳಿಕ ಬಂದ ಗಂಗೂಲಿ (49) ರನ್‌ ಗಳಿಸಿ ಔಟ್‌ ಆದರು.

ವಿವಿಎಸ್‌ ಲಕ್ಷ್ಮಣ್‌ ಹಾಗೂರಾಹುಲ್‌ ದ್ರಾವಿಡ್‌: ಫೇಸ್‌ಬುಕ್‌ ಚಿತ್ರ

231 ರನ್‌ ಆಗುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ದರಿಂದ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಎಣಿಸಲಾಗಿತ್ತು. ಆದರೆ, ನಂತರ ಬಂದ ಕನ್ನಡಿಗ ರಾಹುಲ್‌ ದ್ರಾವಿಡ್‌ ಪಂದ್ಯದ ಚಿತ್ರಣ ಬದಲಿಸುವಂತೆ ಆಡಿದರು. ಲಕ್ಷ್ಮಣ್‌ ಜೊತೆ ಸೇರಿದ ಅವರು ಐದನೇ ವಿಕೆಟ್‌ಗೆ 376 ರನ್ ಸೇರಿಸಿದರು.

452 ಎಸೆತಗಳನ್ನು ಎದುರಿಸಿದ ಲಕ್ಷ್ಮಣ್‌, 44 ಬೌಂಡರಿ ಸಹಿತ 281 ರನ್‌ ಗಳಿಸಿದರೆ,353 ಎಸೆತಗಳನ್ನು ಆಡಿದ ದ್ರಾವಿಡ್‌ 180 ರನ್‌ ಕಲೆಹಾಕಿದರು. ಅಂತಿಮವಾಗಿ ಸೌರವ್‌ ಪಡೆ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಕಳೆದುಕೊಂಡು 657 ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

384 ರನ್‌ ಗುರಿಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದಆಸಿಸ್‌ ಪಡೆಯನ್ನು ಹರ್ಭಜನ್‌ ಸಿಂಗ್‌ ಕಾಡಿದರು. 73 ರನ್‌ ನೀಡಿ ಪ್ರಮುಖ ಆರು ವಿಕೆಟ್‌ ಕಬಳಿಸಿ ಮಿಂಚಿದರು. ಹೀಗಾಗಿ ಸ್ಟೀವ್‌ ವಾ ಬಳಗ ಕೇವಲ212 ರನ್‌ ಗಳಿಗೆ ಆಲೌಟ್‌ ಆಗಿತ್ತು.

ಇದರೊಂದಿಗೆ ಭಾರತ 171 ರನ್‌ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿತ್ತು. ಬಳಿಕ ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ಸರಣಿ ತನ್ನದಾಗಿಸಿಕೊಂಡಿತ್ತು.

ತಲೆಗೆ ಪಟ್ಟಿಕಟ್ಟಿಕೊಂಡು ಕುಂಬ್ಳೆ ಬೌಲಿಂಗ್
2002ರಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಂಡಿದ್ದ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಮೊದಲ ಮೂರು ಪಂದ್ಯಗಳಲ್ಲಿ ತಲಾ ಒಂದೊಂದು ಗೆಲುವು ಸಾಧಿಸಿದ್ದ ಉಭಯ ತಂಡಗಳು ಒಂದು ಡ್ರಾ ಕಂಡಿದ್ದವು. ಹೀಗಾಗಿ ಸರಣಿ ಗೆಲ್ಲಲು ನಾಲ್ಕನೇ ಪಂದ್ಯದ ಮೇಲೆ ಕಣ್ಣಿಟ್ಟಿದ್ದ ಎರಡೂ ತಂಡಗಳು, ಕಠಿಣ ಪರಿಶ್ರಮದೊಂದಿಗೆ ಆಡಿದ್ದವು.

ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ಭಾರತಕ್ಕೆ ಬ್ಯಾಟಿಂಗ್‌ ಬಿಟ್ಟುಕೊಟ್ಟಿತ್ತು. ಗಂಗೂಲಿ ಪಡೆ 196 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 513 ರನ್ ಗಳಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು.ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ವಿಂಡೀಸ್‌ ಬಳಗ ಒರೋಬ್ಬರಿ 248 ಓವರ್‌ ಬ್ಯಾಟ್‌ ಮಾಡಿತ್ತ. 9 ವಿಕೆಟ್‌ಗೆ 629 ರನ್ ಗಳಿಸಿದ್ದ ವೇಳೆ ಪಂದ್ಯ ಡ್ರಾ ಘೋಷಣೆ ಮಾಡಲಾಗಿತ್ತು.

ಅನಿಲ್‌ ಕುಂಬ್ಳೆ -ಎ‍ಪಿ ಚಿತ್ರ

ವಿಶೇಷವೆಂದರೆ,ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಬಡಿದು ದವಡೆ ಮುರಿದುಕೊಂಡಿದ್ದ ಅನಿಲ್‌ ಕುಂಬ್ಳೆ ತಲೆಗೆ ಪಟ್ಟಿ ಕಟ್ಟಿಕೊಂಡೇ 14 ಓವರ್‌ ಎಸೆದಿದ್ದರು. ಇದರಲ್ಲಿ 5 ಮೇಡನ್‌ ಸಹಿತ 29 ರನ್ ಬಿಟ್ಟುಕೊಟ್ಟಿದ್ದ ಅವರು ಬ್ಯಾಟಿಂಗ್ ದಿಗ್ಗಜ ಬ್ರಯಾನ್‌ ಲಾರಾ ಅವರ ವಿಕೆಟ್‌ ಪಡೆದು ಮಿಂಚಿದ್ದರು. ಕುಂಬ್ಳೆ ಆಟಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT