ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಟೆಸ್ಟ್ ಪಂದ್ಯ ಆಡುವವರಿಗೆ ಬಂಪರ್ ಮೊತ್ತ: ಆಟಗಾರರ ಆಕರ್ಷಣೆಗೆ BCCI ಯೋಜನೆ

Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಒಂದು ಕ್ರಿಕೆಟ್ ಋತುವಿನಲ್ಲಿ ಕನಿಷ್ಠ ಏಳು ಟೆಸ್ಟ್‌ಗಳನ್ನು ಆಡುವ ಆಟಗಾರರಿಗೆ ಪಂದ್ಯವೊಂದಕ್ಕೆ ₹ 45 ಲಕ್ಷ ಪಂದ್ಯ ಶುಲ್ಕ ನೀಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದೆ. 

ಪ್ರಸ್ತುತ ಪಂದ್ಯವೊಂದಕ್ಕೆ ₹ 15 ಲಕ್ಷ ಸಂಭಾವನೆ ನೀಡಲಾಗುತ್ತಿದೆ. ಇನ್ನು ಮುಂದೆ ಆಟಗಾರನೊಬ್ಬ ಒಂದೊಮ್ಮೆ ಹತ್ತು ಪಂದ್ಯಗಳನ್ನು ಆಡಿದರೆ ಒಟ್ಟು ₹ 4.5 ಕೋಟಿ ಜೇಬಿಗಿಳಿಸುವರು. ಇದರೊಂದಿಗೆ ರಿಟೇನರ್ ಶುಲ್ಕ ಮತ್ತು ವಾರ್ಷಿಕ ಗುತ್ತಿಗೆಯ ಮೊತ್ತವನ್ನು ಆಟಗಾರರು ಪ್ರತ್ಯೇಕವಾಗಿ ಪಡೆಯಲಿದ್ದಾರೆ.  

ಈ ಸೌಲಭ್ಯವು 2022–23ರ ಋತುವಿಗೆ ಪೂರ್ವಾನ್ವಯವಾಗಲಿದೆ ಎಂದೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಸದ್ಯದ ನಿಯಮದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಕಣಕ್ಕಿಳಿಯುವ 11 ರ ಬಳಗದಲ್ಲಿ ಸ್ಥಾನ ಪಡೆಯುವ ಆಟಗಾರ ₹ 15 ಲಕ್ಷ ಮತ್ತು ಮೀಸಲು ಆಟಗಾರ ₹ 7.5 ಲಕ್ಷ ಪಡೆಯುತ್ತಿದ್ದಾರೆ. 

‘ಟೆಸ್ಟ್ ಕ್ರಿಕೆಟ್‌ ಪ್ರೋತ್ಸಾಹಧನ ಯೋಜನೆಯನ್ನು ಪ್ರಕಟಿಸಲು ನನಗೆ ಸಂತಸವಾಗುತ್ತಿದೆ. ಸೀನಿಯರ್ ತಂಡದ ಆಟಗಾರರಿಗೆ ಆರ್ಥಿಕ ಲಾಭ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ಹೆಚ್ಚುವರಿ ಬಹುಮಾನ ರೂಪದ ಧನವಾಗಿದೆ’ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಈ ಯೋಜನೆಯಲ್ಲಿರುವ  ಇನ್ನೂ ಕೆಲವು ವಿಷಯಗಳನ್ನೂ ಬಿಸಿಸಿಐ ಪ್ರಸ್ತಾಪ ಮಾಡಿದೆ.

ಒಂದು ಋತುವಿನಲ್ಲಿ 9 ಪಂದ್ಯಗಳಿದ್ದರೆ, ಅದರಲ್ಲಿ ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಆಡುವ ಆಟಗಾರ ತಲಾ ₹ 15 ಲಕ್ಷ ಪಂದ್ಯ ಶುಲ್ಕ ಪಡೆಯುವರು. ಮೀಸಲು ಆಟಗಾರರು ಅದರ ಅರ್ಧದಷ್ಟು ಮೊತ್ತ ಗಳಿಸುವರು. 5 ಅಥವಾ 6 ಪಂದ್ಯಗಳಲ್ಲಿ ಆಡಿದರೆ ₹ 30 ಲಕ್ಷ ಗಳಿಸುವರು. ಏಳು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದರೆ ಟೆಸ್ಟ್‌ವೊಂದಕ್ಕೆ ₹ 45 ಲಕ್ಷ ಪಡೆಯುವರು. ಮೀಸಲು ಆಟಗಾರರು ತಲಾ ₹ 22.5 ಲಕ್ಷ ಪಡೆಯುವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT