ಮೊಹಾಲಿ (ಪಿಟಿಐ): ಅಗ್ರಕ್ರಮಾಂಕದ ಬ್ಯಾಟರ್‌ಗಳ ದಿಟ್ಟ ಆಟ ಮತ್ತು ಆರ್ಷದೀಪ್ ಸಿಂಗ್ ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಪಿಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಬಳಗ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಡಕ್ವರ್ಥ್ ಲೂಯಿಸ್ ನಿಯಮದಂತೆ ಏಳು ರನ್‌ಗಳಿಂದ ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 191 ರನ್ ಗಳಿಸಿತು. ಭಾನುಕ ರಾಜಪಕ್ಸ (50 ರನ್, 32 ಎ.) ಮತ್ತು ನಾಯಕ ಧವನ್ (40 ರನ್, 29 ಎ.) ಅವರು ಸವಾಲಿನ ಮೊತ್ತಕ್ಕೆ ಕಾರಣರಾದರು. ಈ ಜೋಡಿ ಎರಡನೇ ವಿಕೆಟ್‌ಗೆ 86 ರನ್ ಸೇರಿ ಸಿತು. ಕೊನೆಯಲ್ಲಿ ಸ್ಯಾಮ್ ಕರಣ್ (26) ಅವರು ಸ್ಕೋರಿಂಗ್‌ನ ವೇಗ ಹೆಚ್ಚಿಸಿದರು.
ಸವಾಲಿನ ಗುರಿ ಬೆನ್ನಟ್ಟಿದ ನಿತೀಶ್ ರಾಣಾ ಬಳಗ 16 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 146 ರನ್ ಗಳಿಸಿದ್ದಾಗ ಮಳೆ ಸುರಿದು ಆಟ ನಿಂತಿತು. ಡಕ್ವರ್ಥ್ ಲೂಯಿಸ್ ನಿಯಮದಂತೆ ಈ ವೇಳೆ ಕೆಕೆಆರ್ ತಂಡ ಗೆಲುವಿಗೆ 153 ರನ್ ಗಳಿಸಬೇಕಿತ್ತು. ಆದರೆ 7 ರನ್‌ಗಳಿಂದ ಹಿಂದೆ ಬಿದ್ದು ನಿರಾಸೆ ಅನುಭವಿಸಿತು.
ಆರ್ಷದೀಪ್ ಸಿಂಗ್ (19ಕ್ಕೆ 3) ಅವರ ಶಿಸ್ತಿನ ದಾಳಿಯ ಮುಂದೆ ಕೋಲ್ಕತ್ತ ತಂಡ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡಿತು. ವೆಂಕಟೇಶ್ ಅಯ್ಯರ್ (34) ಮತ್ತು ನಿತೀಶ್ ರಾಣಾ (24) ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್‌ಗೆ ಅಲ್ಪ ತುಂಬಿದರು.
ಆಂಡ್ರೆ ರಸೆಲ್ (35 ರನ್, 19 ಎ.) ಅಬ್ಬರದ ಆಟವಾಡಿ ಪಂಜಾಬ್ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ ಸ್ಯಾಮ್ ಕರನ್ ಎಸೆತದಲ್ಲಿ ಅವರು ಔಟಾದರು. 15 ಮತ್ತು 16ನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡದ್ದು ಕೆಕೆಆರ್‌ಗೆ ಮುಳುವಾಗಿ ಪರಿಣಿಸಿತು. 24 ಎಸೆತಗಳಲ್ಲಿ ಗೆಲುವಿಗೆ 46 ರನ್‌ಗಳು ಬೇಕಿದ್ದಾಗ ಮಳೆ ಸುರಿಯಿತು.
ಪಂಜಾಬ್ ತಂಡ ರಾಜಪಕ್ಸ ಸ್ಥಾನ ದಲ್ಲಿ ಬೌಲರ್ ರಿಷಿ ಧವನ್ ಅವರನ್ನು ಹಾಗೂ ಕೆಕೆಆರ್ ತಂಡ ವರುಣ್ ಚಕ್ರವರ್ತಿ ಬದಲು ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರನ್ನು ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿಸಿತು.
ಕೈಕೊಟ್ಟ ಫ್ಲಡ್‌ಲೈಟ್: ಪಿಸಿಎ ಕ್ರೀಡಾಂಗಣದ ಆರು ಫ್ಲಡ್‌ಲೈಟ್‌ಗಳು ಕೈಕೊಟ್ಟ ಕಾರಣ ನೈಟ್ ರೈಡರ್ಸ್ ತಂಡದ ಇನಿಂಗ್ಸ್ ಸುಮಾರು 30 ನಿಮಿಷ ತಡವಾಗಿ ಆರಂಭವಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.